Advertisement

ರಾಜ್ಯದ ಗಡಿ ಪ್ರದೇಶಗಳಲ್ಲಿ ನಿಗಾ: ಬಸವರಾಜ್‌ ಬೊಮ್ಮಾಯಿ

10:02 AM Mar 22, 2020 | Sriram |

ಬೆಂಗಳೂರು: ಕೋವಿಡ್‌ 19 ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ನೆರೆಯ ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ತೀವ್ರ ನಿಗಾ ಇಡಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಗಡಿ ಪ್ರದೇಶದಲ್ಲಿ ನಿಗಾ ಇಡಲಾಗಿದ್ದು ಸ್ಕ್ರೀನಿಂಗ್‌ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ . ಕೋವಿಡ್‌ 19 ಹಿನ್ನೆಲೆಯಲ್ಲಿ ಗಡಿಪ್ರದೇಶಗಳನ್ನು ಬಂದ್‌ ಮಾಡುವ ಆಲೋಚನೆ ಸದ್ಯ ಸರಕಾರದ ಮುಂದಿಲ್ಲ. ಮೂರು ದಿನಗಳ ಅನಂತರ ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಯಂಪ್ರೇರಿತ ಬಂದ್‌ಗಾಗಿ ಜನತೆಯಲ್ಲಿ ಮನವಿ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಕೋವಿಡ್‌ 19 ಕುರಿತು ಯಾವುದೇ ಕಾರಣಕ್ಕೂ ಜನರು ಭಯಗೊಳ್ಳುವಂಥ ಹೇಳಿಕೆಗಳನ್ನು ನೀಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೈದ್ಯರನ್ನು ಮತ್ತು ಪೊಲೀಸರನ್ನು ನಾವು ಮೊದಲು ರಕ್ಷಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಆ ನಿಟ್ಟಿನಲ್ಲಿಯೇ ನಮ್ಮ ಕಾರ್ಯಗಳು ಕೂಡ ಇರಬೇಕು. ಕೋವಿಡ್‌ 19 ಹಿನ್ನೆಲೆಯಲ್ಲಿ ಈಗಾಗಲೇ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು ಸ್ಯಾನಿಟೈಸರ್‌ ಬಳಕೆ ಮತ್ತು ಮಾಸ್ಕ್ಗಳನ್ನು ಧರಿಸಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ವಯಂಪ್ರೇರಿತ ಬಂದ್‌ಗೆ ಮನವಿ
ಯಾವುದೇ ರೀತಿಯ ಬಲವಂತದ ಕರ್ಫ್ಯೂಗೆ ಅವಕಾಶವಿಲ್ಲ. ಈ ಬಗ್ಗೆ ಜನರೇ ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಲು ಮುಂದಾಗಬೇಕು. ಸ್ವಯಂಪ್ರೇರಿತವಾಗಿ ಬಂದ್‌ ಮಾಡಲು ಮುಂದಾಗದಿದ್ದರೆ ಯಾವುದೇ ರೀತಿಯ ಪ್ರಕರಣ ದಾಖಲು ಮಾಡುವುದಿಲ್ಲ. ಈ ಬಗ್ಗೆ ಭಯ ಬೇಡ ಎಂದರು.

Advertisement

ಬೆಂಗಳೂರು ಕರಗ ಆಚರಣೆ ಬಗ್ಗೆ ಇನ್ನೂ ಯಾವುದೇ ರೀತಿಯ ತೀರ್ಮಾನ ಕೈಗೊಂಡಿಲ್ಲ ಈ ಬಗ್ಗೆ ಸಂಬಂಧ ಪಟ್ಟವರ ಜತೆಗೆ ಚರ್ಚೆ ಮಾಡಿ, ವಾಸ್ತವ ವಿಚಾರ ತಿಳಿಸುತ್ತೇನೆ. ಆನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next