ಹೊಸದಿಲ್ಲಿ: ಮಣಿಪಾಲ್ ಹಾಸ್ಪಿಟಲ್ಸ್‌ಗೆ ಫೋರ್ಟಿಸ್ ಹಾಸ್ಪಿಟಲ್‌ನ ಷೇರು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಮಂಗಳವಾರ ರಾತ್ರಿ ಈ ಸಂಬಂಧ ಕಂಪನಿಯು ಘೋಷಣೆ ಮಾಡಿದ್ದು, ಫೋರ್ಟಿಸ್ ಆಸ್ಪತ್ರೆಯು ಎಸ್‌ಆರ್‌ಎಲ್ ಲಿಮಿಟೆಡ್‌ನಲ್ಲಿರುವ ಶೇ. 20ರಷ್ಟು ಷೇರುಗಳನ್ನು ಮಣಿಪಾಲ್ ಹಾಸ್ಪಿಟಲ್ಸ್‌ಗೆ ಮಾರಾಟ ಮಾಡಲು ಕಂಪನಿಯ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ಮುಖ್ಯಸ್ಥ ಭವದೀಪ್ ಸಿಂಗ್ ಹೇಳಿದ್ದಾರೆ. ಫೋರ್ಟಿಸ್ ಹೆಲ್ತ್‌ಕೇರ್ ಹಾಗೂ ಡಯಾಗ್ನಾಸ್ಟಿಕ್ ವಹಿವಾಟುಗಳನ್ನು ಪ್ರತ್ಯೇಕಗೊಳಿಸ ಲಾಗುತ್ತಿದ್ದು, ಫೋಟಿಸ್ ಆಸ್ಪತ್ರೆಯ ವಹಿವಾಟುಗಳನ್ನು ಮಣಿಪಾಲ್ ಹಾಸ್ಪಿಟಲ್ಸ್ ಜತೆಗೆ ವಿಲೀನಗೊಳಿಸಲಾಗುತ್ತಿದೆ. ಈ ಒಪ್ಪಂದದಲ್ಲಿ ಮಣಿಪಾಲ್ ಹಾಸ್ಪಿಟಲ್ಸ್‌ಗೆ ಅಮೆರಿಕ ಮೂಲದ ಸಂಸ್ಥೆ ಟಿಪಿಜಿ ಬೆಂಬಲ ನೀಡಲಿದೆ.
ಈ ಒಟ್ಟು ಪ್ರಕ್ರಿಯೆ ಮುಕ್ತಾಯಗೊಳ್ಳಲು 9-12 ತಿಂಗಳುಗಳು ಅಗತ್ಯವಿದೆ. ನಂತರದಲ್ಲಿ ಫೋರ್ಟಿಸ್ ಹಾಗೂ ಮಣಿಪಾಲ್ ಹಾಸ್ಪಿಟಲ್ಸ್ ಷೇರು ವಿನಿಮಯ ಸಂಸ್ಥೆ ಎನ್‌ಎಸ್‌ಇ ಮತ್ತು ಬಿಎಸ್‌ಇಯಲ್ಲಿ ಲಿಸ್ಟ್ ಆಗಲಿದೆ.
ಪ್ರಸ್ತುತ ಮಣಿಪಾಲ್ ಹಾಸ್ಪಿಟಲ್ಸ್‌ನ ಮೌಲ್ಯ 6 ಸಾವಿರ ಕೋಟಿ ರೂ. ಆಗಿದ್ದು, ಫೋರ್ಟಿಸ್ ಹೆಲ್ತ್‌ಕೇರ್‌ನ ವಹಿವಾಟು ಮೌಲ್ಯ 5 ಸಾವಿರ ಕೋಟಿ ರೂ. ಆಗಿತ್ತು. ಈ ಮಧ್ಯೆ ಮಣಿಪಾಲ್ ಹಾಸ್ಪಿಟಲ್ಸ್ ಪ್ರವರ್ತಕ ಡಾ. ರಂಜನ್ ಪೈ ಮತ್ತು ಟಿಪಿಜಿ ಸಂಸ್ಥೆಯು ಒಟ್ಟಾಗಿ 3900 ಕೋಟಿ ರೂ. ಹೂಡಿಕೆ ಮಾಡಲಿದ್ದು, ವಿಲೀನ ನಂತರದಲ್ಲಿ ಸಂಸ್ಥೆಯ ಮೌಲ್ಯವು 15 ಸಾವಿರ ಕೋಟಿ ರೂ. ಆಗಲಿದೆ.
ವಹಿವಾಟಿನ ಎರಡನೇ ಹಂತದಲ್ಲಿ, ಎಸ್‌ಆರ್‌ಎಲ್ ಡಯಾಗ್ನಾಸ್ಟಿಕ್ಸ್ ಹಾಗೂ ಇತರ ಖಾಸಗಿ ಷೇರು ಹೂಡಿಕೆದಾರರ ಶೇ. 50.9 ರಷ್ಟು ಪಾಲನ್ನು, ಅಂದರೆ 3600 ಕೋಟಿ ರೂ. ಅನ್ನು ಮಣಿಪಾಲ್ ಹಾಸ್ಪಿಟಲ್ಸ್ ಖರೀದಿ ಮಾಡಲಿದೆ.