Advertisement

ತಾ.ಪಂ. ಸಾಮಾನ್ಯ ಸಭೆ: ಕುಡಿಯುವ ನೀರಿಗೆ ಮೊದಲ ಆದ್ಯತೆ: ನಿರ್ಣಯ

05:13 PM Apr 12, 2017 | Team Udayavani |

ಗೋಣಿಕೊಪ್ಪಲು: ಪೊನ್ನಂಪೇಟೆಯ ತಾ.ಪಂ. ಆವರಣದ ಸಾಮರ್ಥ್ಯ ಸೌಧದಲ್ಲಿ ತಾ.ಪಂ. ಅಧ್ಯಕ್ಷೆ  ಬೊಳ್ಳಚಂಡ ಸ್ಮಿತಾ ಪ್ರಕಾಶ್‌ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆ ನಡೆಯಿತು. 

Advertisement

ವಿರಾಜಪೇಟೆ ತಾಲೂಕನ್ನು ಬರಪೀಡಿತ ತಾಲೂ ಕೆಂದು ಘೋಷಣೆ ಮಾಡಲಾಗಿದೆ. ಇಲ್ಲಿ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರವಿರುವುದರಿಂದ ಮೊದಲ ಆದ್ಯತೆಯನ್ನು ಕುಡಿಯುವ ನೀರಿನ ವ್ಯವಸ್ಥೆಗೆ ನೀಡಬೇಕೆಂದು ಸಭೆಯಲ್ಲಿ ಒಕ್ಕೊರಳಿನಿಂದ ಆಗ್ರಹಿಸಲಾಯಿತು.

ಸರಕಾರದ ವಿಶೇಷ ಅನುದಾನದಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ಕುಡಿವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಜಿ.ಪಂ. ಎಂಜಿನಿಯರಿಂಗ್‌ ವಿಭಾಗದ ಎ.ಇ.ಇ. ಲಕ್ಷ್ಮೀಕಾಂತ್‌ರವರಿಗೆ ತಾ.ಪಂ. ಸದಸ್ಯರು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ತಾ.ಪಂ. ಸದಸ್ಯ ಕುಟ್ಟಂಡ ಅಜಿತ್‌ ಕರುಂಬಯ್ಯ ತಾಲೂಕಿನಲ್ಲಿ  ಕುಡಿಯುವ ನೀರಿನ ವಿಚಾರದಲ್ಲಿ ಚಳುವಳಿಗಳು ಹಾಗೂ ಜನರು ಪರಸ್ಪರ ಹೊಡೆದಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಲು ಅಧಿಕ ಕಾಲಾವಕಾಶವಿಲ್ಲ. ಆದುದರಿಂದ ಈ ಕೂಡಲೆ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸುವುದು ಅತ್ಯಗತ್ಯ ಎಂದು ಸಭೆಯಲ್ಲಿ ತಿಳಿಸಿದರು.

ತಾಲೂಕು ಪಂಚಾಯತ್‌ ಅಧೀನದಲ್ಲಿರುವ ಇಲಾಖೆಗಳು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಾಗ ತಮ್ಮ ಕ್ರೀಯಾಯೋಜನೆಗಳನ್ನು ತಾ.ಪಂ. ಸದಸ್ಯರ ಗಮನಕ್ಕೆ ತಂದು ಅನಂತರ ಕಾರ್ಯರೂಪಕ್ಕೆ ತರಬೇಕು. ಇದಕ್ಕಾಗಿ ವಿಶೇಷ ಸಭೆಯನ್ನು ಕರೆದರೆ ಎಲ್ಲ ಸದಸ್ಯರುಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸಭೆಗೆ ಆಗಮಿಸಿ ಕ್ರಿಯಾ ಯೋಜನೆಯ ವಿವರಗಳನ್ನು ತಿಳಿದುಕೊಂಡು ಅನಂತರ ಅನುಮೋದನೆಯನ್ನು ನೀಡುವಂತಾಗಬೇಕು. ಕೆಲವು ಕಾರ್ಯಯೋಜನೆಗಳು ತಾ.ಪಂ. ಸದಸ್ಯರ ಹಾಗೂ ಗ್ರಾ.ಪಂ. ಸದಸ್ಯರುಗಳ ಗಮನಕ್ಕೆ ಬರದೆ ಯೋಜನೆಗಳನ್ನು ಕಾರ್ಯರೂಪಗೊಳಿಸುವಾಗ ಅಡ್ಡಿ ಉಂಟಾಗುತ್ತಿದೆ. ಅಲ್ಲದೇ ತಾ.ಪಂ. ಮತ್ತು ಗ್ರಾ.ಪಂ. ಸದಸ್ಯರಿಗೆ ಮಾಹಿತಿ ಇಲ್ಲದ ಕಾರಣ ಸಾರ್ವಜನಿಕರು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಸಂಗಗಳು ನಡೆಯುತ್ತಿದೆ. ಆದುದರಿಂದ ಇನ್ನು ಮುಂದಕ್ಕೆ ಕ್ರಿಯಾ ಯೋಜನೆಗಳನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದ ಅನಂತರವಷ್ಟೆ ಕಾರ್ಯರೂಪಕ್ಕೆ ತರಬೇಕೆಂದು ಸಭೆಯಲ್ಲಿ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಸದಸ್ಯರೆಲ್ಲಾರು ದ್ವನಿಯನ್ನು ಒಂದುಗೂಡಿಸಿ ನಿರ್ಣಯ ಕೈಗೊಳ್ಳುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.ಈ ಸಂಧರ್ಭ ಹಾಜರಿದ್ದ ವಿವಿಧ ಇಲಾಖೆಗಳ ಅಧಿಕಾರಿ ಗಳಿಗೆ ತಮ್ಮ ಕ್ರಿಯಾ ಯೋಜನೆಗಳ ಮಾಹಿತಿಯನ್ನು ನೀಡಿ ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳುವ  ನಿರ್ಣಯ ವನ್ನು ಅಂಗೀಕರಿಸಲಾಯಿತು.

ಬಿರುನಾಣಿ ಸುತ್ತಮುತ್ತಲೂ ತಮ್ಮ ಖಾಸಗಿ ಜಮೀನಿನಲ್ಲಿ ಕೆರೆ ತೆಗೆಯುವುದನ್ನು ತಡೆಯಲು ಅರಣ್ಯ ಅಧಿಕಾರಿಗಳಿಗೆ ಯಾವುದೇ ಅಧಿಕಾರವಿಲ್ಲ. ಕಸ್ತೂರಿ ರಂಗನ್‌ ವರದಿ ಬಗ್ಗೆ ತಪ್ಪು ಮಾಹಿತಿ ನೀಡಿ ತಮ್ಮ ಖಾಸಗಿ ಜಮೀನಿನಲ್ಲಿ ತಮ್ಮ ಜಮೀನಿಗೆ ಅಗತ್ಯವಿರುವ ನೀರನ್ನು ಪಡೆದುಕೊಳ್ಳಲು ಕೆರೆ ತೆಗೆಯುವುದಕ್ಕೆ ಅಡ್ಡಿ ಪಡಿಸಲು ತಮಗೆ ಅಧಿಕಾರವನ್ನು ನೀಡಿದವರು ಯಾರು? ಎಂದು ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್‌ ಕುಮಾರ್‌ ಅರಣ್ಯ ಸಹಾಯಕ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ವನ್ಯಜೀವಿ ಅರಣ್ಯಾಧಿಕಾರಿಗಳು ಜನರಿಗೆ ಕಿರುಕುಳ ನೀಡುತ್ತಿದ್ದು, ಆನೆ ಕಂದಕದ ನಿರ್ಮಾಣ ದಲ್ಲಿ ಅವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

Advertisement

ತಾಲೂಕು ಆರೋಗ್ಯ ಅಧಿಕಾರಿ ಡಾ| ಯತಿರಾಜ್‌ ಸಭೆಗೆ ಮಾಹಿತಿ ನೀಡುತ್ತಾ ವಿರಾಜಪೇಟೆ ತಾ|ನಲ್ಲಿ ಕಳೆದ ಎಪ್ರಿಲ್‌ ತಿಂಗಳಿನಿಂದ ಈ ವರ್ಷದ  ಮಾರ್ಚ್‌ ತಿಂಗಳಿನವರೆಗೆ 42 ಶಿಶು ಮರಣ ಹಾಗೂ 5  ತಾಯಿ ಮರಣ ಸಂಭವಿಸಿರುತ್ತದೆ. ಈ ಶಿಶು ಮತ್ತು ತಾಯಿ ಮರಣವು ಪರಿಶಿಷ್ಟ ಪಂಗಡದಲ್ಲಿ ಹೆಚ್ಚಾಗಿ ಕಂಡುಬಂದಿದ್ದು, ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳದೆ ಮನೆಯಲ್ಲಿ ಜನನವಾಗುವುದರಿಂದ ಈ ಘಟನೆ ಸಂಭವಿಸುತ್ತಿದೆ. ಜಿಲ್ಲಾವಾರು ಅಂಕಿ ಅಂಶಗಳನ್ನು ತೆಗೆದುಕೊಂಡರೆ ವಿರಾಜಪೇಟೆ ತಾಲೂಕು ಮೊದಲ ಸ್ಥಾನದಲ್ಲಿದೆ. ಇದನ್ನು ತಡೆಗಟ್ಟಲು ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಸಹಕಾರ ಅಗತ್ಯ. ಈ ಸಂದರ್ಭ ಶಿಶು ಇಲಾಖಾಧಿಕಾರಿ ಸಭೆಗೆ ಮಾಹಿತಿ ನೀಡುತ್ತಾ ಪರಿಶಿಷ್ಟ ಪಂಗಡದ ಗರ್ಭಿಣಿಯರಿಗೆ ಸರಕಾರದಿಂದ ಅನುದಾನ ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳಲು ಆಧಾರ್‌ ಕಾರ್ಡ್‌, ತಾಯಿ ಕಾರ್ಡ್‌ ಮತ್ತು ಜಾತಿ ದೃಢೀಕರಣ ಪತ್ರ ಅಗತ್ಯವಿದೆ. ಮೊದಲ 3 ತಿಂಗಳಲ್ಲಿ ಶೇಕಡ 50ರಷ್ಟು, ಹೆರಿಗೆ ಅನಂತರ ಶೇಕಡಾ 50ರಷ್ಟು ಹಣವನ್ನು ನೀಡಲಾಗುವುದು. 

ಒಟ್ಟು 76 ಸಿಬಂದಿಗಳ ಆವಶ್ಯಕತೆಯಿದ್ದು, 38 ಹುದ್ದೆ ಗಳು ಮಾತ್ರ ಭರ್ತಿಯಾಗಿವೆ. ಇದರಿಂದ ಸಿಬಂದಿಗಳ ಮೇಲೆ ಹೆಚ್ಚಿನ ಒತ್ತಡವು ಬೀಳುತ್ತಿದೆ. ತಾಲೂಕಿನಲ್ಲಿ ಪಲ್ಸ್‌ ಪೊಲೀಯೋ ಕಾರ್ಯಕ್ರಮವನ್ನು ಸಿಬಂದಿಗಳ ಕೊರತೆಯಿದ್ದರು ಆಶಾ ಕಾರ್ಯಕರ್ತರನ್ನು ಹಾಗೂ ಅಂಗನವಾಡಿ ಸಿಬಂದಿಯನ್ನು ಬಳಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗಿದೆ.
 
ಜಿಲ್ಲೆಯಲ್ಲಿರುವ ತೋಟ ಮಾಲಕರು ಅಸ್ಸಾಂ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳದೆ, ಸ್ಥಳೀಯ ಕಾರ್ಮಿ ಕರನ್ನು ತಮ್ಮ ತಮ್ಮ ತೋಟಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಉತ್ತಮ. ಸ್ಥಳೀಯ ಕಾರ್ಮಿಕರಿಗೆ ಅಲ್ಪ ಅಧಿಕ ವೇತನವನ್ನು ನೀಡಿದರೂ ಹಲವು ತೊಂದರೆಗಳಿಂದ ಮುಕ್ತರಾಗಬಹುದು. ಹೊರ ರಾಜ್ಯಗಳಿಂದ ಬರುವ ಕಾರ್ಮಿಕರಿಂದ ಜಿಲ್ಲೆಯಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ಅಧಿಕವಾಗುತ್ತಿದೆ. ಆದ ಕಾರಣ ಅಸ್ಸಾಂ ಕಾರ್ಮಿಕರನ್ನು ಕೈಬಿಡುವುದು ಒಳ್ಳೆಯದು ಎಂದು ಪೊನ್ನಂಪೇಟೆ ಠಾಣಾಧಿಕಾರಿ ಜಯರಾಮ್‌ ಅವರು ಮನವಿ ಮಾಡಿದರು.

ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ತಾ.ಪಂ. ಸದಸ್ಯ ಕುಟ್ಟಂಡ ಅಜಿತ್‌ ಕರುಂಬಯ್ಯ ಅಕ್ಷರ ದಾಸೋಹ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾ ಬೇಸಿಗೆ ಸಂಭ್ರಮವನ್ನು ತಾಲೂಕಿನಲ್ಲಿ ನಡೆಸಲು ತೀರ್ಮಾನಿಸ ಲಾಗಿರುತ್ತದೆ. ಆದರೆ ಹಲವು ಶಾಲೆಗಳ ಮಕ್ಕಳು ತಾವು ಬೇಸಿಗೆ ಸಂಭ್ರಮ ಶಿಬಿರಕ್ಕೆ ಬರಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದರೂ ಕೂಡ ಅಕ್ಷರ ದಾಸೋಹಕ್ಕೆ ಅಗತ್ಯವಾಗ ಪಡಿತರ ಸಾಮಗ್ರಿಗಳನ್ನು ಆಯಾಯ ಶಾಲೆಗಳಲ್ಲಿ ದಾಸ್ತಾನು ಮಾಡುವ  ಅಗತ್ಯವಾದರು ಏನು ಎಂದು ಪ್ರಶ್ನಿಸಿದರು.

ಈ ವೇಳೆ ಉತ್ತರಿಸಿದ ಅಕ್ಷರ ದಾಸೋಹ ಅಧಿಕಾರಿ ಬೇಸಗೆ ಸಂಭ್ರಮ ಶಿಬಿರ ನಡೆಯದ ಶಾಲೆಗಳ ಪಡಿತರವನ್ನು ಜುಲೈ ತಿಂಗಳಿನಲ್ಲಿ ಬಳಸಿಕೊಳ್ಳುವುದಾಗಿ ತಿಳಿಸಿದರು. ಈ ವೇಳೆ ಅಸಮಧಾನಗೊಂಡ ಸದಸ್ಯರು ಇನ್ನು ಎರಡೂವರೆ ತಿಂಗಳು ತಾವು ಯಾವ ರೀತಿಯಲ್ಲಿ ಪಡಿತರಗಳನ್ನು ಹಾಳಾಗದಂತೆ ಸಂರಕ್ಷಿಸುವಿರಿ. ಹೀಗಿನ ವಾತಾವರಣದಲ್ಲಿ ಪಡಿತರವನ್ನು ಸರಿಯಾಗಿ 1 ತಿಂಗಳು ಹಾಳಾಗದಂತೆ ನೋಡಿಕೊಳ್ಳುವುದೆ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ತಾವು ಎರಡೂವರೆ ತಿಂಗಳು ಯಾವ ರೀತಿಯಲ್ಲಿ ಸಂರಕ್ಷಿಸುವಿರಿ ಎಂದು ತಿಳಿಸಬೇಕು ಎಂದು ಆಗ್ರಹಿಸಿದರು.ಗಣೇಶ್‌, ಕಿರಣ್‌ ಪೆಡೆ°àಕರ್‌, ತಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದರು.

ಮದ್ಯಅಕ್ರಮ ಮಾರಾಟ: ಕ್ರಮಕ್ಕೆ ಆಗ್ರಹ
ಅಬಕಾರಿ ಪ್ರಗತಿ ಪರಿಶೀಲನೆ ವೇಳೆ ಅನಧೀಕೃತವಾಗಿ ಅಂಗಡಿಗಳಲ್ಲಿ ಅಕ್ರಮ ಮದ್ಯಮಾರಾಟ ಮಾಡುತ್ತಿದ್ದು, ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಲಾಯಿತು. ಈ ವೇಳೆ ಮಾತನಾಡಿದ ಅಬಕಾರಿ ಇನ್‌ಸ್ಪೆಕ್ಟರ್‌ ನಾವು ಅಕ್ರಮ ಮದ್ಯ ಮಾರಾಟಗಾರರ ಮೇಲೆ ದಾಳಿ ನಡೆಸುವ ವೇಳೆ ಅವರಿಗೆ ಮೊದಲೇ ಮಾಹಿತಿ ಸಿಕ್ಕುವ ಕಾರಣ ಕಡಿವಾಣ ಹಾಕಲು ಕಷ್ಟ ಸಾಧ್ಯವಾಗುತ್ತದೆ. ಈ ಸಂದರ್ಭ ಕೆದಮುಳ್ಳೂರು ತಾ.ಪಂ. ಸದಸ್ಯ ಬೋಪಣ್ಣ ಮಾತನಾಡಿ, ತಮ್ಮ ಇಲಾಖೆಯಿಂದಲೆ ಮಾಹಿತಿ ಸೋರಿಕೆಯಾಗುತ್ತಿದ್ದು, ತಾವು ಸರಕಾರಿ ವಾಹನದಲ್ಲಿ ದಾಳಿ  ನಡೆಸುವ ಬದಲು ಖಾಸಗಿ ವಾಹನದಲ್ಲಿ ದಾಳಿ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದರು. ಈ ವೇಳೆ ಸಭೆಯಲ್ಲಿ ಮೌನವಾಗಿ ಕುಳಿತಿರುತ್ತಿದ್ದ ಮಹಿಳಾ ಸದಸ್ಯರುಗಳು ಧ್ವನಿಗೂಡಿಸಿ ಕೆಲವು ದಿನಸಿ ಅಂಗಡಿ ಗಳಲ್ಲಿ ಚೀಲದಲ್ಲಿ ಮತ್ತು ಅಕ್ಕಿಯ ಒಳಗಡೆ ಮದ್ಯವನ್ನು ಅವಿತಿಟ್ಟು ಮಾರಾಟ ಮಾಡುತ್ತಿರುವುದಾಗಿ ಸಭೆಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next