Advertisement

ತಾ.ಪಂ., ಜಿ.ಪಂ. ಚುನಾವಣೆ ಸದ್ಯಕ್ಕಿಲ್ಲ

12:55 AM Nov 04, 2021 | Team Udayavani |

ಬೆಂಗಳೂರು: ಅವಧಿ ಮುಗಿದು ಚುನಾವಣೆ ನಡೆಯಬೇಕಿರುವ ಜಿಲ್ಲೆ ಮತ್ತು ತಾಲೂಕು ಪಂಚಾಯತ್‌ಗಳಿಗೆ ನೇಮಿಸಲಾಗಿದ್ದ ಆಡಳಿತಾಧಿಕಾರಿಗಳ ಅವಧಿಯನ್ನು ಆರು ತಿಂಗಳ ವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ರಾಜ್ಯ ಸರಕಾರ ತಾ.ಪಂ. ಹಾಗೂ ಜಿ.ಪಂ. ಚುನಾವಣೆಯನ್ನು ಇನ್ನೂ ಆರು ತಿಂಗಳು ಮುಂದೂಡಿದಂತಾಗಿದೆ.

Advertisement

ಈ ಆದೇಶಕ್ಕೆ ಕಾಂಗ್ರೆಸ್‌ಆಕ್ಷೇಪ ವ್ಯಕ್ತಪಡಿಸಿದ್ದು, ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಹೀನಾಯ ಸೋಲಿನ ಭೀತಿಯಿಂದ ರಾಜ್ಯ ಸರಕಾರ ಸಂವಿಧಾನಬಾಹಿರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.

2016-21ನೇ ಅವಧಿಗೆ ರಚನೆಯಾಗಿದ್ದ ರಾಜ್ಯದ ಜಿ.ಪಂ. ಹಾಗೂ ತಾ.ಪಂ.ಗಳ ಆಡಳಿತಾವಧಿ 2021ರ ಮೇ- ಜೂನ್‌ ತಿಂಗಳಲ್ಲಿ ಮುಕ್ತಾಯಗೊಂಡಿತ್ತು. ಅ ಸಂದರ್ಭದಲ್ಲಿ ಕೊರೊನಾ ಎರಡನೇ ಅಲೆಯ ಭೀತಿ ಇದ್ದ ಹಿನ್ನೆಲೆಯಲ್ಲಿ ಚುನಾ ವಣೆ ಮುಂದೂಡಿ, ಎಪ್ರಿಲ್‌ನಲ್ಲಿ ಆರು ತಿಂಗಳ ಅವಧಿಗೆ ಸರಕಾರ ಆಡಳಿತಾಧಿಕಾರಿಗಳನ್ನು ನೇಮಿಸಿತ್ತು.

ರಾಜ್ಯ ಸರಕಾರ ಚುನಾವಣೆ ಮುಂದೂಡಿದ್ದರೂ ರಾಜ್ಯ ಚುನಾವಣಾ ಆಯೋಗ ತಾ.ಪಂ. ಹಾಗೂ ಜಿ.ಪಂ. ಚುನಾವಣೆಯ ಕ್ಷೇತ್ರ ಮರು ವಿಂಗಡಣೆ, ಮೀಸಲಾತಿ ಕಾರ್ಯವನ್ನು ಮಾಡಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿತ್ತು.

ಇದನ್ನೂ ಓದಿ:ಬಿಜೆಪಿ ನಾಯಕರ ಟೀಕೆಗಳಿಗೆ ಉಪ ಚುನಾವಣೆ ಫ‌ಲಿತಾಂಶ ಉತ್ತರ ಕೊಟ್ಟಿದೆ: ಡಿಕೆಶಿ

Advertisement

ಆದರೆ ಚುನಾವಣಾ ಆಯೋಗ ಮಾಡಿದ್ದ ಕ್ಷೇತ್ರ ಮರು ವಿಂಗಡಣೆ, ಮೀಸಲಾತಿ ಪಟ್ಟಿ ಪ್ರಕಟಿಸುವಲ್ಲಿ ಸರಿಯಾದ ಮಾನದಂಡ ಅನುಸರಿಸಿಲ್ಲ ಎಂಬ ಆಕ್ಷೇಪ ಕೇಳಿ ಬಂದಿತ್ತು. ಜಿ.ಪಂ., ತಾ.ಪಂ. ಚುನಾವಣೆ ನಡೆಸುವ ವಿಚಾರದಲ್ಲಿ ರಾಜ್ಯ ಸರಕಾರ ಹಾಗೂ ರಾಜ್ಯ ಚುನಾವಣಾ ಆಯೋಗ ಕೋರ್ಟ್‌ ಮೆಟ್ಟಿಲನ್ನೂ ಏರಿದವು. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಸಂದರ್ಭದಲ್ಲಿಯೇ ರಾಜ್ಯ ಸರಕಾರ ಕ್ಷೇತ್ರ ಪುನರ್‌ ವಿಂಗಡಣೆ ಮಾಡುವ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ತೀರ್ಮಾನಿಸಿ, ಈಗಾಗಲೇ ನಿಗದಿಪಡಿಸಲಾಗಿದ್ದ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿಯನ್ನು ರದ್ದುಪಡಿಸಿ “ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ’ವನ್ನು ರಚಿಸಿತು.

ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಸದಸ್ಯರ ನೇಮಕ ಮಾಡದಿರುವುದರಿಂದ ಆಯೋಗ ಇನ್ನೂ ತನ್ನ ಕಾರ್ಯವನ್ನು ಅಧಿಕೃತವಾಗಿ ಆರಂಭಿಸಿಲ್ಲ. ಸೀಮಾ ನಿರ್ಣಯ ಆಯೋಗಕ್ಕೆ ರಾಜ್ಯ ಸರಕಾರ 6 ತಿಂಗಳು ಕಾಲಾವಕಾಶ ನೀಡಿದೆ ಎಂದು ತಿಳಿದು ಬಂದಿದ್ದು, ಈ ಆಯೋಗ ಸೀಮಾ ನಿರ್ಣಯ ಕೆಲಸ ಪ್ರಾರಂಭಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕಾಗಿದೆ. ತದನಂತರ ಮೀಸಲಾತಿ ನಿಗದಿ ಪ್ರಕ್ರಿಯೆ ಮುಗಿದ ಬಳಿಕ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಬೇಕಾಗಿರುತ್ತದೆ. ಅಲ್ಲದೆ ರಾಜ್ಯ ಸರಕಾರ ಈಗ ಆಡಳಿತಾಧಿಕಾರಿಗಳ ಅವಧಿಯನ್ನು ಮತ್ತೆ ಆರು ತಿಂಗಳು ಮುಂದೂಡಿರುವುದರಿಂದ ಇನ್ನೂ ಆರು ತಿಂಗಳವರೆಗೆ ತಾಪಂ, ಜಿಪಂ ಚುನಾವಣೆ ನಡೆಯುವುದು ಅನುಮಾನ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next