ರಾಮನಗರ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ಕಂಪನಿಯ ಕಾರ್ಮಿಕರ ಮುಷ್ಕರ ಸೋಮವಾರ 50ನೇ ದಿನಕ್ಕೆ ಕಾಲಿಟ್ಟಿತು. ಇದರ ಅಂಗವಾಗಿಹಾಗೂ ಈ ಹಿಂದೆ ಅಪಘಾತದಲ್ಲಿ ಮೃತಪಟ್ಟ ತಮ್ಮ ಸಹೋದ್ಯೋಗಿಗಳ ಸ್ಮರಣಾರ್ಥ ಕಾರ್ಮಿಕರು ರಕ್ತದಾನ ಚಳವಳಿ ನಡೆಸಿದರು.
ಗೌರವಯುತ ಬದುಕಿಗಾಗಿ ಹೋರಾಟ ಎಂಬ ಘೋಷಣೆಯಡಿಯಲ್ಲಿ 50 ದಿನಗಳಿಂದ ಟಿಕೆಎಂ ಆಡಳಿತದ ವಿರುದ್ಧ ಮುಷ್ಕರ ಹೂಡಿರುವ ಕಾರ್ಮಿಕರು ರಾಜಭವನ ಚಲೋ, ಛತ್ರಿ ಚಳವಳಿ, ವಿಧಾನಸೌಧ ಚಲೋ, ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ, ಉಪವಾಸ ಸತ್ಯಾಗ್ರಹ, ಮಾನವ ಸರಪಳಿ ರಚನೆ ಹೀಗೆ ವಿವಿಧ ಹೋರಾಟಗಳನ್ನು ನಡೆಸಿದ್ದಾರೆ. 50ನೇ ದಿನದ ಹೋರಾಟದ ಅಂಗವಾಗಿ ರಕ್ತದಾನಚಳವಳಿ ಮೂಲಕ ರಾಷ್ಟ್ರದ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಶೌಚಕ್ಕೆ ಹೋಗಲು ಸಹ ನಿರ್ಬಂಧ, ಮಿಲಿ ಸೆಕೆಂಡುಗಳ ಲೆಕ್ಕಾಚಾರ ಹೀಗೆ ಹೆಜ್ಜೆ, ಹೆಜ್ಜೆಗೂ ಕಿರುಕುಳ ಕಾರ್ಮಿಕರಿಗಾಗುತ್ತಿದೆ ಎಂದು ಕಾರ್ಮಿಕರು ಬೇಸರ ವ್ಯಕ್ತಪಡಿಸಿದರು. ಪದೇ ಪದೆ ಮನವಿಮಾಡಿದ್ದರೂ, ಆಡಳಿತ ಸುಧಾರಿಸಿಕೊಳ್ಳಲಿಲ್ಲ. ಪ್ರಶ್ನಿ ಸಿದವರನೆಲ್ಲ ಸೇವೆಯಿಂದ ತೆಗೆದುಹಾಕುತ್ತಿದ್ದಾರೆ ಎಂದು ದೂರಿದರು.
2016ರ ಜನವರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ತಮ್ಮ 7 ಮಂದಿ ಸಹೋದ್ಯೋಗಿಗಳು ಮೃತ ಪಟ್ಟಿದ್ದರು. ಅವರ ಸ್ಮರಣೆಯ ಅಂಗವಾಗಿ ಹಾಗೂ 50ನೇ ದಿನದ ಮುಷ್ಕರದ ಅಂಗವಾಗಿ ರಕ್ತದಾನಚಳವಳಿಯನ್ನು ಹಮ್ಮಿಕೊಂಡಿರುವುದಾಗಿ ಕಾರ್ಮಿಕರ ಸಂಘದ ಜಂಟಿ ಕಾರ್ಯದರ್ಶಿ ಬಸವರಾಜ್ ತಿಳಿಸಿದರು.
ಸುಮಾರು 400ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತ ನಿಧಿ ಮತ್ತು ರಾಮನಗರದ ಬೆಳ್ಳಿ ರಕ್ತ ನಿಧಿ ರಕ್ತದಾನ ಶಿಬಿರವನ್ನು ನಡೆಸಿಕೊಟ್ಟರು.
ರಕ್ತದಲ್ಲೇ ಘೋಷಣೆ ಸೃಷ್ಟಿ :
ಪ್ರಧಾನಿಗಳೇ ಟಿಕೆಎಂನಲ್ಲಿ ನಡೆಯುತ್ತಿರುವ ಕಿರುಕುಳವನ್ನು ತಪ್ಪಿಸಿ, ಟಿಕೆಎಂ ನಿಂದ ಭಾರತವನ್ನು, ಕಾರ್ಮಿಕರನ್ನು ರಕ್ಷಿಸಿ, ಗೌರವಯುತ ಬದುಕಿಗಾಗಿ ಹೋರಾಟ, ರಕ್ತ ಕೊಟ್ಟೇವು ಸ್ವಾಭಿಮಾನ ಬಿಡೆವು ಎಂಬ ಘೋಷಣೆಗಳನ್ನುರಕ್ತದಲ್ಲೇ ಬರೆದು ಕಾರ್ಮಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ರಕ್ತದಲ್ಲೇ ಬರೆದ ಪತ್ರವನ್ನು ಸಹ ರವಾನಿಸಿದರು.