ರಾಮನಗರ: 2020ರ ನವೆಂಬರ್‌ನಲ್ಲಿ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ (ಟಿಕೆಎಂ) ಕಾರ್ಮಿಕರ ಮುಷ್ಕರ ಮತ್ತು ಲಾಕೌಟ್ ನಡೆದಿತ್ತು.
ಕಾನೂನು ಬಾಹಿರ ಮುಷ್ಕರ ಆರೋಪ: ಕಾನೂನು ಬಾಹಿರವಾಗಿ ಮುಷ್ಕರ ನಡೆಸಿದ್ದ ಆರೋಪದ ಮೇರೆಗೆ ಟೊಯೊಟಾದ ಆಡಳಿತ ಮಂಡಳಿ ಒಟ್ಟು 66 ಮಂದಿಯನ್ನು ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತಿನಲ್ಲಿರಿಸಲಾಗಿತ್ತು.
ಇದೀಗ ಈ ಪೈಕಿ 45 ಕಾರ್ಮಿಕರನ್ನು ಆಡಳಿತ ಮಂಡಳಿ ಸೇವೆಯಿಂದ ವಜಾಗೊಳಿಸಿದೆ. ಉಳಿದವರಿಗೆ ಸಣ್ಣ, ಪುಟ್ಟ ಶಿಕ್ಷೆ ವಿಧಿಸಿ ಪುನಃ ಕೆಲಸಕ್ಕೆ ಬರಮಾಡಿಕೊಳ್ಳಲು ಅವಕಾಶ ನೀಡಿದೆ. ಪಾರದರ್ಶಕ ವಿಚಾರಣೆ ನಡೆಸಿದ್ರಾ..? ತೃತೀಯ ವ್ಯಕ್ತಿಗಳಿಂದ ಪಾರದರ್ಶಕ ರೀತಿಯಲ್ಲಿ ವಿಚಾರಣಾಧಿಕಾರಿಗಳು ಅಮಾನತ್ತಿನಲ್ಲಿದ್ದ ಕಾರ್ಮಿಕರ ವಿಚಾರಣೆ ನಡೆಸಿ ಸಲ್ಲಿಸಿದ ಅಂತಿಮ ವರದಿಯನ್ನು ಆಧರಿಸಿ 45 ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಉಳಿದ ಕಾರ್ಮಿಕರ ವಿರುದ್ಧ ಶಿಸ್ತು ಕ್ರಮಕೈಗೊಂಡು ಕಾನೂನಾತ್ಮಕ ಕ್ರಮಗಳನ್ನು ಪಾಲಿಸಲಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ;- ಚಾರಣಿಗರ ಸ್ವರ್ಗ ಎತ್ತಿನಭುಜ
ಏನಾಗಿತ್ತು?: 2020ರ ನ.9ರಂದು ಟಿಕೆಎಂ ನೌಕರರ ಸಂಘವು ಕಂಪೆನಿ ಆವರಣದಲ್ಲಿ ಮುಷ್ಕರ ಆರಂಭಿಸಿತ್ತು. ಮುಷ್ಕರವನ್ನು ಕಾನೂನು ಬಾಹೀರ ಎಂದು ಕಂಪನಿ ಹೇಳಿತ್ತು. ಮರುದಿನ ನ.10, 2020ರಂದು ಕಂಪನಿ ಲಾಕೌಟ್ ಘೋಷಿಸಿತ್ತು. ಬಳಿಕ ನ.18ರಂದು ಲಾಕೌಟ್ ತೆರವುಗೊಳಿಸಲಾಗಿತ್ತು. ಆದರೂ ಕಾರ್ಮಿಕರು ಸುಮಾರು 4 ತಿಂಗಳವರೆಗೆ ಮುಷ್ಕರ ನಡೆಸಿದ್ದರು. ಇದು ಅಶಿಸ್ತು ಎಂದು ಪರಿಗಣಿಸಿದ ಕಂಪನಿ ಮುಷ್ಕರ ನಿರತ ತಂಡದ 66 ಕಾರ್ಮಿಕರ ವಿರುದ್ಧ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಿತ್ತು.
3 ತಿಂಗಳ ಕಾಲ ತೃತೀಯ ವ್ಯಕ್ತಿಗಳು ವಿಚಾರಣೆ ನಡೆಸಿ ಕಾರ್ಮಿಕರದ್ದೇ ತಪ್ಪು ಎಂದು ನಿರ್ಧರಿಸಿದ ಹಿನ್ನೆಲೆ45 ಕಾರ್ಮಿಕರನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ. ಉಳಿದವರಿಗೆ ಸಣ್ಣ ಶಿಸ್ತು ಕ್ರಮಗಳೊಂದಿಗೆ ಕೆಲಸಕ್ಕೆ ಹಿಂತೆಗೆದುಕೊಳ್ಳಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಕಾರ್ಮಿಕರ ಸಂಘದಿಂದ ಖಂಡನೆ : ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ಆಡಳಿತ ಮಂಡಳಿ 45 ಕಾರ್ಮಿಕರನ್ನು ಸೇವೆಯಿಂದ ವಜಾ ಮಾಡಿರುವ ಕ್ರಮವನ್ನು ಟಿಕೆಎಂ ಕಾರ್ಮಿಕ ಸಂಘ ತೀವ್ರವಾಗಿ ಖಂಡಿಸಿದೆ.
ಕಂಪನಿ ತನ್ನ ಹಠಮಾರಿ ಧೋರಣೆ ಮತ್ತು ಕಾರ್ಮಿಕ ವಿರೋಧಿ ನೀತಿ ತಾಳಿದೆ. ಈ ಹಿಂದೆ ಪ್ರತಿಭಟನಾ ನಿರತ 66 ಕಾರ್ಮಿಕರನ್ನು ಅಮಾನತು ಹಾಗೂ 8 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಈಗ ಈ ಪೈಕಿ 45 ನೌಕರರನ್ನು ಸೇವೆಯಿಂದ ವಜಾ ಮಾಡುವ ಮೂಲಕ ದುರಹಂಕಾರದ ಪರಮಾವಧಿ ಮೆರೆದಿದೆ ಎಂದು ಕಾರ್ಮಿಕ ಸಂಘ ಕಿಡಿಕಾರಿದೆ.