Advertisement

ಸಂಚಲನವಿಲ್ಲದ ಬಾವಿಯಲ್ಲಿ ವಿಷಗಾಳಿ; ಹೆಚ್ಚುತ್ತಿರುವ ಬಾವಿ ದುರಂತ!

08:21 PM Jun 09, 2019 | sudhir |

ಮಲ್ಪೆ: ನೀರಿನ ಸಂಚಲನವಿಲ್ಲದ ಆಳವಾದ ಬಾವಿಗಳಲ್ಲಿ ವಿಷಗಾಳಿ, ಆಮ್ಲಜನಕ ಲಭಿಸದ ಬಾವಿಗೆ ಇಳಿದ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪುವ ದುರಂತಗಳು, ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ಇತೀ¤ಚಿನ ದಿನಗಳಲ್ಲಿ ಹೆಚ್ಚುತ್ತಿವೆ.

Advertisement

ಯಾವುದೇ ರೀತಿಯ ಮುಂಜಾಗ್ರತೆ ಪಾಲಿಸದೆ ಬಾವಿಗಿಳಿಯುವುದು ಇಂತಹ ದುರಂತಗಳಿಗೆ ಪ್ರಮುಖ ಕಾರಣವಾಗುತ್ತಿದೆ.

ಈಗ ಬೇಸಗೆಯಲ್ಲಿ ಎಲ್ಲ ಬಾವಿಗಳಲ್ಲೂ ನೀರು ಬತ್ತಿ ಹೋಗಿದೆ. ಮನೆಯವರು ಬಾವಿಯ ಕೆಸರು, ಮಣ್ಣು ತೆಗೆಯಲೆಂದು ಕಾರ್ಮಿಕರನ್ನು ಗೊತ್ತುಪಡಿಸುತ್ತಾರೆ. ಸಾಕಷ್ಟು ಮಾಹಿತಿ ಇಲ್ಲದ ಕಾರ್ಮಿಕರು ಇಂತಹ ಆಳವಾದ ಬಾವಿಗೆ ಇಳಿದು ಆಮ್ಲಜನಕದ ಉಸಿರಾಟದ ಸಮಸ್ಯೆಗೆ ಸಿಲುಕುತ್ತಾರೆ. ಅತಿ ಹೆಚ್ಚು ಆಳದ ಬಾವಿಗಳಲ್ಲಿ ಅಮ್ಲಜನಕದ ಕೊರತೆ ಸೃಷ್ಟಿಯಾಗುತ್ತದೆ.

ಇದನ್ನು ಮನಗಾಣದೆ ಅಥವಾ ಮುಂಜಾಗ್ರತಾ ಕ್ರಮ ಅನುಸರಿಸದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರಮುಖವಾಗಿ ಕೆಲವು ಕಾರ್ಮಿಕರು ಮದ್ಯ ಸೇವಿಸಿ ಬಾವಿಗಿಳಿದು ಅಪಾಯಕ್ಕೆ ಸಿಲುಕುತ್ತಾರೆ.

ಬಾವಿಗಿಳಿಯುವ ಮುನ್ನ ದೀಪ ಇರಿಸಿ
ಮುಚ್ಚಿದ ಮತ್ತು ಆಳವಾದ ಬಾವಿಗೆ ಇಳಿಯುವ ಮುನ್ನ ಅದರೊಳಗೆ ಆಮ್ಲಜನಕ ಇದೆಯೇ ಎಂದು ಮೊದಲು ಖಾತರಿ ಪಡಿಸಿ, ಬಳಿಕವಷ್ಟೇ ಬಾವಿಗೆ ಇಳಿಯ ಬೇಕು. ಬಾವಿಗೆ ಇಳಿಯುವ ಮುನ್ನ ಮೇಣದ ಬತ್ತಿಯನ್ನು ಉರಿಸಿ ಹಗ್ಗದ ಸಹಾಯದಿಂದ ಬಾವಿಗಿಳಿಸಬೇಕು. ಈ ವೇಳೆ ಬೆಂಕಿ ನಂದದೆ ಬಾವಿಯ
ನೀರಿನ ಮಟ್ಟದ ತನಕ ತಲುಪಿದಲ್ಲಿ ಅ ಬಾವಿಯಲ್ಲಿ ಆಮ್ಲಜನಕ ಇದೆ ಎಂದು ಖಾತರಿ. ಉರಿಯುವ ಮೇಣದ ಬತ್ತಿಯನ್ನು ಬಾವಿಗೆ ಇಳಿಸುತ್ತಿರುವಂತೆಯೇ ಬೆಂಕಿ ನಂದಿ ಹೋದರೆ ಬಾವಿಯ ಕೆಳಭಾಗದಲ್ಲಿ ಆಮ್ಲಜನಕದ ಕೊರತೆ ಇದೆ ಎಂದು ಅರ್ಥ ಎಂದು ಬಾವಿ ನಿರ್ವಹಣೆ ಮಾಡುವ ಹರೀಶ್‌ ಅವರು ತಿಳಿಸುತ್ತಾರೆ.

Advertisement

ಪರಿಹಾರ ಹೇಗೆ ?
ಬಾವಿಯೊಳಗೆ ಆಮ್ಲಜನಕ ಲಭಿಸಬೇಕಾದರೆ ನೀರನ್ನು ಹಗ್ಗದ ಸಹಾಯದಿಂದ ಕೊಡಪಾನದಲ್ಲಿ ಸೇದುವ ಮೂಲಕ ತೆಗೆಯಬೇಕು. ಕೊಡಪಾನವನ್ನು ಹಲವು ಬಾರಿ ನೀರಿನ ಮೇಲೆ ಕೆಳಗೆ ಮಾಡಿದಾಗ ನೀರಿನಲ್ಲಿ ಸಂಚಲನವಾಗುತ್ತದೆ.
ಮರದ ಕೊಂಬೆ ಬಳಸಿ ಅದನ್ನು ಹಲವು ಬಾರಿ ಬಾವಿಯೊಳಗೆ ಇಳಿಸಿ ಮೇಲೆ ಕೆಳಗೆ ಮಾಡಿದಾಗಲೂ ಬಾವಿಯೊಳಗೆ ಆಮ್ಲಜನಕ ಹೆಚ್ಚಾಗುತ್ತದೆ ಮತ್ತು ಬಾವಿಯ ಅಡಿಭಾಗದಿಂದ ಉತ್ಪತ್ತಿಯಾಗುವ ವಿಷವಾಯು ಬಾವಿಯಿಂದ ಹೊರ ತಳ್ಳಲೂ ಇದು ಸಹಕಾರಿಯಾಗುತ್ತದೆ.

ಸೇದುವ ಬಾವಿಯಲ್ಲಿ ಸಮಸ್ಯೆ ಇಲ್ಲ
ಈ ಹಿಂದೆ ಬಾವಿಯಲ್ಲಿ ಕೊಡಪಾನ ಅಥವಾ ಬಾಲ್ದಿಯಿಂದ ನೀರನ್ನು ಸೇದುತ್ತಿರುವಾಗ ನೀರಿನಲ್ಲಿ ಸಂಚಲವಾಗುತ್ತಿತ್ತು. ಆಲ್ಲಿ ಉಸಿರಾಟಕ್ಕೆ ಬೇಕಾಗುವ ಆಮ್ಲಜನಕವನ್ನು ಹೆಚ್ಚುವಂತೆ ಮಾಡುತ್ತಿತ್ತು. ಈಗ ಬಹುತೇಕ ಎಲ್ಲ ಕಡೆ ಮೋಟಾರು ಪಂಪ್‌ಸೆಟ್‌ ಮೂಲಕ ನೀರು ತೆಗೆಯುವುದರಿಂದ ಬಾವಿಯಲ್ಲಿ ನೀರಿನ ಸಂಚಲನ ಉಂಟಾಗದೆ, ವಿಷಗಾಳಿ ಹೊರಹೋಗದೇ ಬಾವಿಯಲ್ಲಿ ಉಳಿದುಕೊಳ್ಳುತ್ತದೆ.

ಮುಂಜಾಗ್ರತಾ ಕ್ರಮ ಅಗತ್ಯ
25 ಅಡಿಗಿಂತ ಜಾಸ್ತಿ ಇರುವ ರಿಂಗ್‌ ಬಾವಿ, ಮನೆಗೆ ತಾಗಿಕೊಂಡಿರುವ ಮುಚ್ಚಿದ ಬಾವಿ, ನೀರಿಲ್ಲದ ಸಂಪು ಟ್ಯಾಂಕ್‌, ದೊಡ್ಡ ಟ್ಯಾಂಕ್‌ಗಳು, ನೀರಿಲ್ಲದ ಬಾವಿ, ಅತಿ ಆಳವಾದ ಬಾವಿಗಳಿಗೆ ಇಳಿಯುವುದು ಅಪಾಯಕಾರಿ. ಗುಡ್ಡಸಾಲು, ಮುರಗಳು ಇರುವ ಬಾವಿಯಲ್ಲಿ ಈ ಸಮಸ್ಯೆಗಳು ಜಾಸ್ತಿ ಇರುತ್ತದೆ. ತೆರೆದ ದೊಡ್ಡ ಬಾವಿಗಳು, ಮರಳು ಸಾಲಿನಲ್ಲಿರುವ ಬಾವಿಗಳಲ್ಲಿ ಸಮಸ್ಯೆ ಕಡಿಮೆ. ಇಂತಹ ಕೆಲವು ಸೂಕ್ಷ ವಿಚಾರಗಳು ಮನೆಯವರಿಗೂ ತಿಳಿದಿರುವುದಿಲ್ಲ. ಬಾವಿ ಕೆಲಸಕ್ಕೆ ಬಂದ ವ್ಯಕ್ತಿಗೂ ಗೊತ್ತಿರುವುದಿಲ್ಲ. ಈ ಬಗ್ಗೆ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ.
-ಹರೀಶ್‌ ಕೆ. ಕೊಡವೂರು, ಬಾವಿ ಕೆಲಸದ ನಿರ್ವಾಹಕರು

Advertisement

Udayavani is now on Telegram. Click here to join our channel and stay updated with the latest news.

Next