Advertisement
ರಾಜ್ಯ ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರು ಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವರು ಸಹ ಕುಲಾಧಿಪತಿಗಳಾಗಿರುತ್ತಾರೆ. ಕುಲಪತಿಗಳ ನೇಮಕದಲ್ಲಿ ಕುಲಾಧಿಪತಿಗಳಿಗೇ ಸುಪ್ರೀಂ ಪವರ್ ನೀಡಲಾಗಿತ್ತು. ಅವರ ಅಂಕಿತ ಇಲ್ಲದೇ ಕುಲಪತಿಗಳ ನೇಮಕ ಸಾಧ್ಯವೇ ಇರಲಿಲ್ಲ. ಶೋಧನಾ ಸಮಿತಿ ನೀಡುವ ಶಿಫಾರಸಿನ ಪಟ್ಟಿಯನ್ನು ರಾಜ್ಯಪಾಲರು ತಿರಸ್ಕರಿಸಿದರೂ ಸರ್ಕಾರ ಮರು ಪ್ರಶ್ನಿಸುವಂತಿರಲಿಲ್ಲ.
Related Articles
Advertisement
2017ರ ಜ.10ರಂದು ಖಾಲಿಯಾಗಿದ್ದ ಮೈಸೂರು ವಿವಿ ಕುಲಪತಿ ಹುದ್ದೆಗೆ ಕಾಯಂ ಕುಲಪತಿ ಬಂದಿಲ್ಲ. 2017ರ ಜುಲೈ 25ರಿಂದ ತುಮಕೂರು ವಿವಿಯ ಆಡಳಿತವನ್ನು ಹಂಗಾಮಿ ಕುಲಪತಿಗಳೇ ನೋಡಿಕೊಳ್ಳುತ್ತಿದ್ದಾರೆ. 2017ರ ಜುಲೈ 13ರಂದು ಖಾಲಿಯಾಗಿದ್ದ ರಾಜೀವ್‌ಗಾಂಧಿ ಆರೊಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಕಾಯಂ ವಿಸಿ ನೇಮಿಸಲು ಸರ್ಕಾರ ಹಾಗೂ ರಾಜ್ಯಪಾಲರಿಗೆ ಇನ್ನೂ ಸಾಧ್ಯವಾಗಿಲ್ಲ. 2017ರ ಡಿ.31ರಂದು ಖಾಲಿಯಾಗಿದ್ದ ದಾವಣಗೆರೆ ವಿವಿ ಕುಲಪತಿ ಹುದ್ದೆಗೆ ಕಾಯಂ ವಿಸಿ ಬಂದಿಲ್ಲ. ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲೂ ಕಾಯಂ ಕುಲಪತಿ ಇಲ್ಲ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಇತ್ತೀಚೆಗಷ್ಟೆ ತೆರವಾಗಿದೆ. ಜಾನಪದ ವಿವಿಯ ಕುಲಪತಿಗಳು ರಾಜೀನಾಮೆ ನೀಡಿ ತೆರವಾಗಿದ್ದ ಹುದ್ದೆಗೆ ವಾರದಿಂದೀಚೆಗಷ್ಟೇ ಭರ್ತಿ ಮಾಡಿದ್ದಾರೆ.
ಕಾಯಂ ಕುಲಪತಿ ಇಲ್ಲದೇ ವಿವಿಯ ಆಡಳಿತ ಮತ್ತು ಶೈಕ್ಷಣಿಕ ಗುಣಮಟ್ಟ ನಿರೀಕ್ಷೆ ಸಾಧ್ಯವಿದೆಯೇ? ರಾಜ್ಯದಲ್ಲಿ ಸರ್ಕಾರಿ, ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯ ಸೇರಿ 54 ವಿಶ್ವವಿದ್ಯಾಲಯಗಳಿವೆ. ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ವಿಶ್ವದರ್ಜೆಯ ಬೋಧನ ವಿಧಾನ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಉನ್ನತ ವ್ಯಾಸಂಗಕ್ಕೆ ಸಾಕಷ್ಟು ಒತ್ತು ನೀಡಲಾಗುತ್ತಿದೆ. ದೇಶ ವಿದೇಶಗಳಿಂದಲೂ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಈ ವಿಶ್ವವಿದ್ಯಾಲಯಕ್ಕೆ ಬರುತ್ತಾರೆ. ರಾಜ್ಯ ಸರ್ಕಾರದ ವಿಶ್ವವಿದ್ಯಾಲಯದಲ್ಲಿ ಕುಲಪತಿ ನೇಮಕ ವಿಳಂಬದ ಜತೆಗೆ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಶೇ.50ರಷ್ಟು ಖಾಯಂ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕರ ಹುದ್ದೆ ಖಾಲಿಯಾಗಿದೆ. ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಿಸುವ ಪರಮಾಧಿಕಾರವನ್ನು ರಾಜ್ಯಪಾಲರಿಂದ ವ್ಯವಸ್ಥಿತವಾಗಿ ತನ್ನ ತೆಕ್ಕೆಗೆ ಪಡೆದ ರಾಜ್ಯ ಸರ್ಕಾರ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಬೋಧನೆಗೆ ಬೇಕಾದ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕರ ನೇಮಕಾತಿಯನ್ನು ಮರೆತೇಬಿಟ್ಟಿದೆ.
ಸಾರ್ವತ್ರಿಕ ಶಿಕ್ಷಣ ಹಾಗೂ ಸ್ವತಂತ್ರ ಆಡಳಿತದ ಸದುದ್ದೇಶದಿಂದಲೇ ವಿವಿಗಳು ಆರಂಭ ವಾಗಿದ್ದು. ಅಲ್ಲಿನ ಆಡಳಿತ ವ್ಯವಸ್ಥೆ, ಶೈಕ್ಷಣಿಕ ಜವಾಬ್ದಾರಿ ಎಲ್ಲವನ್ನು ಕುಲಪತಿಗಳೇ ನಿರ್ವಹಣೆ ಮಾಡುತ್ತಿದ್ದರು. ಕುಲಸಚಿವರು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಇದಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಇಂದು ರಾಜ್ಯ ವಿಶ್ವವಿದ್ಯಾಲಯಗಳ ಚಿತ್ರಣವೇ ಸಂಪೂರ್ಣ ಬದಲಾಗಿದೆ. ತಾಂತ್ರಿಕ ವಿಶ್ವವಿದ್ಯಾಲಯವೂ ಇದಕ್ಕೆ ಹೊರತಾಗಿಲ್ಲ. ಶಿಕ್ಷಣ, ಜ್ಞಾನ, ವಿಜ್ಞಾನ, ಹೊಸ ಸಂಶೋಧನೆಯ ಕೇಂದ್ರವಾಗಬೇಕಿದ್ದ ವಿಶ್ವವಿದ್ಯಾಲಯಗಳು ಜಾತಿ ಮೇಲಾಟ, ರಾಜಕೀಯದ ಕೆಸರೆರಚಾಟ ಮತ್ತು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ಹೋಗಿವೆ.ರಾಜ್ಯದ ಪ್ರಮುಖ ಮೂರು ವಿಶ್ವವಿದ್ಯಾಲಯದ ಕುಲಪತಿಗಳ ವಿರುದ್ಧ ಗಂಭೀರ ಆರೋಪ ಬಂದಿತ್ತು. ಇದರ ತನಿಖೆಗೆ ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ರಚನೆ ಮಾಡಲಾಗಿತ್ತು. ನಿವೃತ್ತ ನ್ಯಾಯಾಧೀಶರು ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಸರ್ಕಾರದಿಂದ ಕ್ರಮ ಮಾತ್ರ ಆಗಿಲ್ಲ. ನೇಮಕಾತಿ ಅಧಿಕಾರಕ್ಕೂ ಕೊಕ್ಕೆ: ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಗ್ರಂಥಪಾಲಕ, ತತ್ಸಮಾನ ಹುದ್ದೆಗಳ ನೇಮಕಾತಿಯನ್ನು ಕುಲಪತಿಗಳೇ ಮಾಡಬಹುದಾದ ಅಧಿಕಾರದಲ್ಲಿ ತಿದ್ದುಪಡಿ ತರಲಾಗಿದೆ. ಇದನ್ನು ರಾಜ್ಯ ಉನ್ನತ ಶಿಕ್ಷಣ ಪರಿಷತ್ ವ್ಯಾಪ್ತಿಗೆ ತರಲಾಗಿದೆ. ನೇಮಕಾತಿ ಮಂಡಳಿಯಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಸಿದ್ಧಪಡಿಸುವ ವಿಷಯವಾರು ತಜ್ಞರು ಇರುತ್ತಾರೆ. ರಾಜ್ಯ ಸರ್ಕಾರದ ಶಿಫಾರಸ್ಸಿನಂತೆ ರಾಜ್ಯಪಾಲರು ನಾಲ್ವರು ವಿಷಯ ತಜ್ಞರ ನಾಮನಿರ್ದೇಶನ ಮಾಡಬೇಕು. ನಿಯಮಾನುಸಾರವಾಗಿ ಮಂಡಳಿಯ ಆಯ್ಕೆ ಮಾಡಿದ ಅಭ್ಯರ್ಥಿಗಳ ಪಟ್ಟಿಯನ್ನು ಕಾರ್ಯನಿರ್ವಾಹಕ ಪರಿಷತ್ತಿಗೆ ಕಳುಹಿಸಬೇಕು. ಪರಿಷತ್ತು ಆ ಪಟ್ಟಿಯನ್ನು ಪರಿಶೀಲಿಸಿ ಅನುಮೋದನೆ ಮಾಡಿದ ನಂತರವೇ ನೇಮಕಾತಿ ನಡೆಯುತ್ತದೆ. ಒಂದು ವೇಳೆ ಮಂಡಳಿ ಮತ್ತು ಪರಿಷತ್ತಿನ ನಡುವೆ ಅಭಿಪ್ರಾಯ ಬೇಧ ವ್ಯಕ್ತವಾದರೆ, ಸರ್ಕಾರ ತಾನಾಗಿಯೇ ಅದನ್ನು ತಿಳಿದುಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಮತ್ತು ಇದೇ ಅಂತಿಮವಾಗಿರುತ್ತದೆ. ಇಲ್ಲಿ ಕುಲಪತಿ ಅಧಿಕಾರವನ್ನು ಸಂಪೂರ್ಣವಾಗಿ ಮೊಟಕುಗೊಳಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಕುಲಪತಿ ನೇಮಕ, ಪ್ರಾಧ್ಯಾಪಕ, ಸಹಪ್ರಾಧ್ಯಾಪಕ ನೇಮಕ ಎಲ್ಲವೂ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಉನ್ನತ ಶಿಕ್ಷಣ ಸಚಿವರು ಮಂಡಿಸಿದ ಈ ತಿದ್ದುಪಡಿ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿತ್ತು. ವಿಧಾನ ಪರಿಷತ್ತನಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲೇ ತಿದ್ದುಪಡಿ ವಿಧೇಯಕದ ಪರಿಶೀಲನಾ ಸಮಿತಿ ರಚನೆ ಮಾಡಲಾಗಿತ್ತು. ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಮೇಲ್ಮನೆ ಸದಸ್ಯರು ಈ ಸಮಿತಿಯಲ್ಲಿ ಸದಸ್ಯರಾಗಿದ್ದರು. ಮೂರು ಪಕ್ಷದವರು ಸೇರಿಕೊಂಡು ತಿದ್ದುಪಡಿಗೆ ಬೇಕಾದ ಶಿಫಾರಸ್ಸು ಮಾಡಿದ್ದಾರೆ. ಅದರಂತೆ, ಮೇಲ್ಮನೆಯಲ್ಲೂ ಅಂಗೀಕಾರಗೊಂಡಿದೆ. ತಿದ್ದುಪಡಿ ಮಸೂದೆಯ ಬಗ್ಗೆ ಸಾರ್ವಜನಿಕ ಚರ್ಚೆಯೇ ಆಗಿಲ್ಲ. ವಿಶ್ರಾಂತ ಕುಲಪತಿಗಳಲ್ಲಿ ಕೆಲವರ ಸಲಹೆ ಪಡೆದುಕೊಂಡಿದೆ. ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲದರ ನಡುವೆಯೂ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ಸೇರಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕವನ್ನು ತನ್ನ ಸುಪರ್ದಿಗೆ ಪಡೆಯುವ ಯತ್ನದಲ್ಲಿ ಭಾಗಶಃ ಯಶಸ್ವಿಯಾಗಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ(ತಿದ್ದುಪಡಿ) ವಿಧೇಯಕಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ಸಿಕ್ಕಿದೆಯಾದರೂ, ರಾಜ್ಯಪಾಲರು ಇನ್ನೂ ಅಂಕಿತ ಹಾಕಿಲ್ಲ. ರಾಜ್ಯಪಾಲರು ಕಾಯ್ದೆಯನ್ನು ಒಪ್ಪಿಕೊಳ್ಳುತ್ತಾರೋ ಅಥವಾ ತಿರಸ್ಕಾರಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. – ರಾಜು ಖಾರ್ವಿ ಕೊಡೇರಿ