Advertisement

ನ.ಪಂ. ಚುನಾವಣೆಗೆ ಎರ‌ಡೇ ದಿನ

10:58 AM May 27, 2019 | Team Udayavani |

ಸುಳ್ಯ : ನ.ಪಂ. ಚುನಾವಣೆಯ ಮತದಾನಕ್ಕೆ ಇನ್ನೆರಡು ದಿನ (ಮೇ 29) ಬಾಕಿ ಇದ್ದು, 20 ವಾರ್ಡ್‌ಗಳಲ್ಲಿ ಪ್ರಚಾರದ ಭರಾಟೆ ಬಿರುಸು ಪಡೆದಿದೆ.

Advertisement

ಪಕ್ಷ ಮತ್ತು ಪಕ್ಷೇತರರಾಗಿ ಸ್ಪರ್ಧಿಸಿರುವ 53 ಅಭ್ಯರ್ಥಿಗಳು ಮತದಾರ ಪ್ರಭುವಿನ ಮನವೊಲಿಸುವ ಅಂತಿಮ ಪ್ರಯತ್ನ ದಲ್ಲಿ ನಿರತರಾಗಿದ್ದಾರೆ. ಪ್ರಮುಖ ನಾಯಕರು ಮನೆ-ಮನೆ ಭೇಟಿ ನೀಡಿ ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ.

ಅಭ್ಯರ್ಥಿ ನಿವೃತ್ತಿಗೆ ಜೆಡಿಎಸ್‌ ಸೂಚನೆ
ವಾರ್ಡ್‌ 17ರಲ್ಲಿ ಕಣಕ್ಕಿಳಿದಿರುವ ಜೆಡಿಎಸ್‌ ಅಭ್ಯರ್ಥಿಗೆ ಕಣದಿಂದ ಸ್ವಯಂ ನಿವೃತ್ತರಾಗುವಂತೆ ತಾಲೂಕು ಜೆಡಿಎಸ್‌ ಸಮಿತಿ ಸೂಚಿಸಿರುವುದು ಹೊಸ ಬೆಳವಣಿಗೆ. ಈ ವಾರ್ಡ್‌ ನಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದೆ ಪಕ್ಷೇತರರಾಗಿ ಕಣಕ್ಕಿಳಿದಿರುವ ಆರ್‌.ಕೆ. ಮಹಮ್ಮದ್‌ ಅವರಿಗೆ ಬೆಂಬಲ ನೀಡ ಲಾಗುವುದು ಎಂದು ಪಕ್ಷ ಘೋಷಿಸಿದೆ. ಕೆಲವು ವಾರ್ಡ್‌ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಶಾರಿಕ್‌ ಡಿ.ಎಂ., ಮೋಹಿನಿ ಜಯನಗರ, ರಿಯಾಜ್‌ ಕಟ್ಟೆಕಾರ್‌ ಅವರಿಗೆ ಹಾಗೂ ಉಳಿದ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗಳನ್ನು ಬೆಂಬಲಿಸಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಕುಂಟಿಕಾನ ತಿಳಿಸಿದ್ದಾರೆ.

ಉಳಿದೆಡೆ ಬೆಂಬಲಿಸದ ಎಸ್‌ಡಿಪಿಐ
ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಿರುವ ಎಸ್‌ಡಿಪಿಐ ಉಳಿದ 18 ವಾರ್ಡ್‌ಗಳಲ್ಲಿ ಯಾವುದೇ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿಲ್ಲ. ಎಲ್ಲ ಕಡೆ ಸ್ಪರ್ಧಿಸದ ಕಾರಣ ಕೆಲವೆಡೆ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತ ಪಡಿಸುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಪಕ್ಷ ತನ್ನ ನಿಲುವು ಸ್ಪಷ್ಟಪಡಿಸಿದ್ದು, ತಾನು ಸ್ಪರ್ಧಿಸದೆ ಇರುವ ಎಲ್ಲ ವಾರ್ಡ್‌ ಗಳಲ್ಲಿ ಯಾರಿಗೂ ಬೆಂಬಲ ನೀಡದೆ ತಟಸ್ಥ ನೀತಿ ಪ್ರದರ್ಶಿಸುವ ತೀರ್ಮಾನ ಕೈಗೊಂಡಿದೆ. ಎರಡು ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಕಣಕ್ಕಿಳಿದಿದೆ. ಉಳಿದ 18 ವಾರ್ಡ್‌ಗಳಲ್ಲಿ ಪಕ್ಷವು ಯಾವುದೇ ಅಭ್ಯರ್ಥಿಗಳನ್ನು ಬೆಂಬಲಿಸುವುದಿಲ್ಲ ಎಂದು ಎಸ್‌ಡಿಪಿಐ ನಗರ ಅಧ್ಯಕ್ಷ ಅಬ್ದುಲ್‌ ಕಲಾಂ “ಉದಯವಾಣಿ’ಗೆ ತಿಳಿಸಿದ್ದಾರೆ.

ಬಿಜೆಪಿಗೆ ಉಳಿಸುವ ಆಸೆ
ಲೋಕಸಭಾ ಚುನಾವಣೆ ಫಲಿತಾಂಶದಿಂದ ಹುಮ್ಮಸ್ಸಿನಲ್ಲಿರುವ ಬಿಜೆಪಿ ನ.ಪಂ. ಚುನಾವಣೆ ಗೆಲುವಿನ ನಿರೀಕ್ಷೆ ಹೊತ್ತಿದೆ. 1997ರಿಂದ 2002, 2009ರಿಂದ 2013, 2014ರಿಂದ 2019ರ ತನಕ ನಗರಾಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಸತತ ಮೂರನೆ ಬಾರಿಗೆ ಅಧಿಕಾರ ಪಡೆದುಕೊಳ್ಳುವ ಉತ್ಸಾಹದಲ್ಲಿದೆ. 20ರಲ್ಲಿ 18 ಹೊಸ ಮುಖ ಕಣಕ್ಕಿಳಿಸಿರುವ ಪಕ್ಷಕ್ಕೆ ಆರಂಭದಲ್ಲಿ ಬಂಡಾಯದ ಬಿಸಿ ತಟ್ಟಿತ್ತು. ಆದರೆ ಕದನ ಕುತೂಹಲದ ಕೇಂದ್ರವಾಗಿ ಮಾರ್ಪಟ್ಟಿದ್ದ ಪುರಸಭೆ 10ನೇ ವಾರ್ಡ್‌ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ನಾಮಪತ್ರ ತಿರಸ್ಕಾರವಾದ ಕಾರಣ ಬಿಜೆಪಿ ನಿಟ್ಟುಸಿರು ಬಿಟ್ಟರೂ ಅಲ್ಲಿನ ಬಂಡಾಯದ ಮುನಿಸು ಯಾವ ರೀತಿ ತಿರುಗು ಬಾಣವಾದೀತು ಎಂಬ ಆತಂಕವು ಪಕ್ಷದೊಳಗಿದೆ. ಹಾಗಾಗಿ ತೆರೆಮರೆಯಲ್ಲೇ ಶಮನ ಕಾರ್ಯಕ್ಕೆ ಸಂಘದ ಕಾರ್ಯಕರ್ತರು ತೊಡಗಿದ್ದಾರೆ.

Advertisement

ಕಾಂಗ್ರೆಸ್‌ಗೆ ಗಳಿಸುವ ಆಸೆ
13 ವರ್ಷಗಳಿಂದ ಆಡಳಿತದಲ್ಲಿರುವ ಬಿಜೆಪಿ ನಗರದ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸಿಲ್ಲ ಎನ್ನುತ್ತಲೇ ಮನೆ ಮನೆ ಭೇಟಿಗೆ ಇಳಿದಿರುವ ಕಾಂಗ್ರೆಸ್‌ಗೆ ಈ ಬಾರಿ ನಗರಾಡಳಿತವನ್ನು ಮರಳಿ ಗಳಿಸುವ ಪ್ರಯತ್ನ ಮುಂದುವರಿಸಿದೆ. ಹೊಸ ಮತ್ತು ಹಳೆ ಮುಖಗಳಿಗೆ ಆದ್ಯತೆ ಕೊಟ್ಟಿರುವ ಪಕ್ಷಕ್ಕೆ ಮುಖ್ಯವಾಗಿ ಬೂಡು, ಬೋರುಗುಡ್ಡೆ ವಾರ್ಡ್‌ನಲ್ಲಿ ಬಂಡಾಯದ ಬಿಸಿ ಇದೆ. ಕಳೆದ ಬಾರಿ ಕಾಂಗ್ರೆಸ್‌ ಗೆಲುವು ಪಡೆದಿದ್ದ ಈ ವಾರ್ಡ್‌ನಲ್ಲಿ ಬಂಡಾಯ ಅಭ್ಯರ್ಥಿಗಳು ಪಡೆದುಕೊಳ್ಳುವ ಮತಗಳು ಯಾವ ಪರಿಣಾಮ ಉಂಟು ಮಾಡಬಹುದು ಎನ್ನುವ ಕುತೂಹಲವು ಇದೆ.

ಮನೆ – ಮನೆ ಭೇಟಿಗೆ ಅವಕಾಶ
ನ.ಪಂ. ಚುನಾವಣೆಗೆ ಮೇ 29ರಂದು ಮತದಾನ ನಡೆಯಲಿದೆ. ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರವು ಮೇ 27 ಸಂಜೆ 7 ಗಂಟೆಗೆ ಕೊನೆಗೊಳ್ಳಲಿದೆ.ಅನಂತರ ಮನೆ-ಮನೆ ಭೇಟಿಗೆ ಮಾತ್ರ ಅವಕಾಶ ಇದೆ ಎಂದು ಚುನಾವಣಾಧಿಕಾರಿಗಳಾದ ದೇವರಾಜ ಮುತ್ಲಾಜೆ ಮತ್ತು ಮಂಜುನಾಥ ಎನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next