Advertisement

ಟೋಯಿಂಗ್‌ ಸಿಬ್ಬಂದಿ ಕೈಲಿ ಪಿಡಿಎ!

12:25 AM Nov 14, 2019 | Lakshmi GovindaRaju |

ಬೆಂಗಳೂರು: ಸಂಚಾರ ಪೊಲೀಸ್‌ ಅಧಿಕಾರಿಗಳು ನಿರ್ವಹಿಸಬೇಕಾದ ಪಿಡಿಎ ಯಂತ್ರ (ದಂಡ ವಿಧಿಸುವ ಯಂತ್ರ) ವನ್ನು ಟೋಯಿಂಗ್‌ ಸಿಬ್ಬಂದಿ ಇಟ್ಟುಕೊಂಡಿದ್ದು, ಅದನ್ನು ಪ್ರಶ್ನಿಸಿದ ದ್ವಿಚಕ್ರ ವಾಹನ ಸವಾರನ ಮೇಲೆ ಟೋಯಿಂಗ್‌ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ಆರ್‌.ಟಿ.ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

Advertisement

ಖಾಸಗಿ ಕಂಪನಿ ಉದ್ಯೋಗಿ ಕಿರಣ್‌ ಕುಮಾರ್‌ (32) ಹಲ್ಲೆಗೊಳಗಾದ ಸವಾರ. ಟೋಯಿಂಗ್‌ ಸಿಬ್ಬಂದಿ ಸುನೀಲ್‌ ಕುಮಾರ್‌ ಎಂಬಾತ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಆರ್‌.ಟಿ.ನಗರ ಸಂಚಾರ ಠಾಣೆ ಎಎಸ್‌ಐ ಜಿ.ಆರ್‌.ಪ್ರಕಾಶ್‌ ವಿರುದ್ಧ ಕ್ರಮಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಹೆಬ್ಟಾಳ ರಸ್ತೆಯಲ್ಲಿ ಎಎಸ್‌ಐ ಜಿ.ಆರ್‌.ಪ್ರಕಾಶ್‌ ಹಾಗೂ ಟೋಯಿಂಗ್‌ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ನೋ ಪಾರ್ಕಿಂಗ್‌ ಸ್ಥಳದಲ್ಲಿ ನಿಂತಿದ್ದ ಕಿರಣ್‌ ಕುಮಾರ್‌ ಅವರ ದ್ವಿಚಕ್ರ ವಾಹನವನ್ನು ಸಂಚಾರ ಪೊಲೀಸರು ಹೊತ್ತೂಯ್ದು, ಪಶುವೈದ್ಯಕೀಯ ಕಾಲೇಜು ಮುಂಭಾಗದ ರಸ್ತೆ ಬದಿ ಇಟ್ಟಿದ್ದರು.

ಸ್ಥಳಕ್ಕೆ ಬಂದ ಕಿರಣ್‌ ಕುಮಾರ್‌ಗೆ ಟೋಯಿಂಗ್‌ ಸಿಬ್ಬಂದಿ 1,650 ರೂ. ದಂಡ ಪಾವತಿಸಲು ಸೂಚಿಸಿದ್ದಾರೆ. ಅದರಂತೆ ಕಿರಣ್‌, 2 ಸಾವಿರ ರೂ. ಕೊಟ್ಟು ರಸೀದಿ ಕೇಳಿದ್ದಾರೆ. ಆದರೆ, ಟೋಯಿಂಗ್‌ ಸಿಬ್ಬಂದಿ ಒಂದು ಸಾವಿರ ರೂ. ವಾಪಸ್‌ ಕೊಟ್ಟಿದ್ದಾರೆ. ಅದರಿಂದ ಅಚ್ಚರಿಗೊಂಡ ಕಿರಣ್‌, ಪ್ರಶ್ನಿಸಿದಾಗ ಟೋಯಿಂಗ್‌ ಸಿಬ್ಬಂದಿ ಜಗಳ ತೆಗೆದಿದ್ದಾರೆ.

ಕೆಳ ಹಂತದವರೂ ಬಳಸುವಂತಿಲ್ಲ: ಸಾಮಾನ್ಯವಾಗಿ ಎಎಸ್‌ಐ ಮೇಲ್ಟಟ್ಟ ಅಧಿಕಾರಿಗಳು ಹೊರತು ಪಡಿಸಿ ಕೆಳ ಹಂತದ ಸಿಬ್ಬಂದಿ ಪಿಡಿಎ ಯಂತ್ರವನ್ನು ಇಟ್ಟುಕೊಳ್ಳುವಂತಿಲ್ಲ. ಆದರೆ, ಟೋಯಿಂಗ್‌ ಸಿಬ್ಬಂದಿ ಸುನಿಲ್‌ ಕುಮಾರ್‌, ಎಎಸ್‌ಐ ಪ್ರಕಾಶ್‌ ಅವರ ಬಳಿಯಿದ್ದ ಪಿಡಿಎ ಯಂತ್ರವನ್ನು ಇಟ್ಟುಕೊಂಡಿದ್ದಾನೆ.

Advertisement

ಅದನ್ನು ಗಮನಿಸಿದ ಕಿರಣ್‌, ಪೊಲೀಸ್‌ ಅಧಿಕಾರಿಗಳ ಬಳಿ ಇರಬೇಕಾದ ಯಂತ್ರ ತಾವೇಕೆ ಇಟ್ಟುಕೊಂಡಿದ್ದಿರಾ? ಎಂದು ಪ್ರಶ್ನಿಸಿ, ತಾನು ಕೊಟ್ಟ ಹಣಕ್ಕೆ ರಸೀದಿ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಟೋಯಿಂಗ್‌ ಸಿಬ್ಬಂದಿ ಹಾಗೂ ಕಿರಣ್‌ ನಡುವೆ ವಾಗ್ವಾದ ನಡೆದಿದ್ದು, ಟೋಯಿಂಗ್‌ ಸಿಬ್ಬಂದಿ ಕಿರಣ್‌ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ.

ಅಲ್ಲದೆ, ಕೆಲ ವಾಹನ ಸವಾರರಿಗೆ ಹಳೇ ಬಿಲ್‌ಗ‌ಳನ್ನು ಕೊಟ್ಟು ಟೋಯಿಂಗ್‌ ಸಿಬ್ಬಂದಿ ಹಣ ವಸೂಲಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಎಲ್ಲ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿರುವ ಕಿರಣ್‌, ವಿಡಿಯೋಗಳನ್ನು ಸಾಮಾಜಿಕ ಜಾಣತಾಲಣಗಳಲ್ಲಿ ಅಪ್‌ಲೋಡ್‌ ಮಾಡಿ, ಅನ್ಯಾಯ ಸರಪಡಿಸುವಂತೆ ಕೋರಿದ್ದಾರೆ.

ಆದರೆ, ಘಟನೆಗೆ ಸಮಜಾಯಿಸಿ ನೀಡಿರುವ ಸಂಚಾರ ವಿಭಾಗದ ಪೊಲೀಸರು, ಎಎಸ್‌ಐ ಪ್ರಕಾಶ್‌ ಊಟಕ್ಕೆ ತೆರಳಿದ್ದರು. ಹೀಗಾಗಿ ಟೋಯಿಂಗ್‌ ಸಿಬ್ಬಂದಿ ಪಿಡಿಎ ಇಟ್ಟುಕೊಂಡಿದ್ದ ಎಂಬುದು ಗೊತ್ತಾಗಿದೆ. ಆದರೆ, ಯಾವುದೇ ಸಂದರ್ಭದಲ್ಲಿಯೂ ಪಿಡಿಎ ಯಂತ್ರವನ್ನು ಅನ್ಯ ವ್ಯಕ್ತಿಗೆ ನೀಡದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಪ್ರಕಾಶ್‌ ಕರ್ತವ್ಯಲೋಪ ಎಸಗಿದ್ದಾರೆ.

ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಅಲ್ಲದೆ, ಕಿರಣ್‌ ಕುಮಾರ್‌ ನೋ ಪಾರ್ಕಿಂಗ್‌ ವಿಚಾರದಲ್ಲಿ ಜಗಳ ತೆಗೆದು ಈ ರೀತಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಹಲ್ಲೆಯಾಗಿರುವ ಕುರಿತು ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ದೂರು ನೀಡುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next