Advertisement

ಟೋಯಿಂಗ್‌ ಕಾರ್ಯಾಚರಣೆ: ಸಮರ್ಪಕ ಮಾಹಿತಿ ಅಗತ್ಯ

11:19 PM Jan 14, 2021 | Team Udayavani |

ಮಹಾನಗರ: “ಕಂಕನಾಡಿಯಲ್ಲಿ ಮೆಡಿಕಲ್‌ ಸ್ಟೋರ್‌ ಸಮೀಪದಲ್ಲಿ ಬೈಕ್‌ ಇಟ್ಟು 2 ನಿಮಿಷಗಳಲ್ಲೇ ಮೆಡಿಕಲ್‌ನಿಂದ ವಾಪಸ್‌ ಬರುವಷ್ಟರಲ್ಲಿಯೇ ನನ್ನ ಬೈಕ್‌ ಇರಲಿಲ್ಲ. ಪೊಲೀಸ್‌ನವರು ಟೋಯಿಂಗ್‌ ಮಾಡಿದ್ದಾರೆಂದು ಅಲ್ಲಿದ್ದವರು ಹೇಳಿದರು. ಅದಕ್ಕೆ ಇಲ್ಲಿಗೆ ಬಂದೆ. ನಾನೀಗ ಮನೆಯವರಿಗೆ ಔಷಧ ಕೊಂಡುಹೋಗುವುದೇ ಅಥವಾ ವಾಹನ ಬಿಡಿಸಿಕೊಂಡು ಹೋಗುವುದೇ ಎಂಬುದು ಗೊತ್ತಾಗುತ್ತಿಲ್ಲ’ ಎನ್ನುತ್ತಾ ವ್ಯಕ್ತಿಯೋರ್ವರು ಜ. 13ರ ಮಧ್ಯಾಹ್ನ ಕದ್ರಿ ಪೊಲೀಸ್‌ ಠಾಣೆ ಎದುರು ಟೋಯಿಂಗ್‌ ವಾಹನಕ್ಕಾಗಿ ಕಾಯುತ್ತಿದ್ದರು. ಇದಕ್ಕೆ ಅಲ್ಲಿದ್ದ ಪೊಲೀಸ್‌ ಸಿಬಂದಿ “ವಾಹನ ಈಗ ಬರಬಹುದು; ವೆಯಿಟ್‌ ಮಾಡಿ’ ಎಂದರು.

Advertisement

ಐದು ನಿಮಿಷ ಬಿಟ್ಟು ಮತ್ತೋರ್ವರು ಅದೇ ಸ್ಥಳಕ್ಕೆ ಬಂದರು. ಅವರ ಕೈಯಲ್ಲಿ ಬಾಳೆ ಎಲೆ ಕಟ್ಟು ಇತ್ತು. “ನಾನು ಬಾಳೆ ಎಲೆ ತಗೊಂಡು ಬರುವಷ್ಟರಲ್ಲೇ ನನ್ನ ಬೈಕ್‌ ಕಾಣಿಸಲಿಲ್ಲ. ಅಲ್ಲಿದ್ದವರು ಪೊಲೀಸರು ಎತ್ತಿಕೊಂಡು ಹೋದರು ಎಂದರು. ಅದಕ್ಕೆ ಇಷ್ಟು ದೂರ ಬಂದೆ. ನಾನು ಬೈಕ್‌ ನಿಲ್ಲಿಸಿದ ಜಾಗದಲ್ಲಿ ನೋ ಪಾರ್ಕಿಂಗ್‌ ಬೋರ್ಡ್‌ ಇರಲಿಲ್ಲ. ಬೈಕ್‌ ಇಟ್ಟಿದ್ದ ಜಾಗದ ಪಕ್ಕದಲ್ಲೇ ಇದ್ದರೂ ಪೊಲೀಸರು ಬಂದಿದ್ದು ಗೊತ್ತಾಗಲಿಲ್ಲ’ ಎಂದು ಆ ವ್ಯಕ್ತಿ ಹೇಳಿದರು. ಹೀಗೆ ಅನೇಕರು ಕದ್ರಿ ಸಂಚಾರ ಠಾಣೆ ಎದುರು ತಮ್ಮ ವಾಹನಕ್ಕಾಗಿ ಕಾಯುತ್ತಿದ್ದರು.

ಹೆಚ್ಚಿನವರು “ವಾಹನ ಕೊಂಡೊ ಯ್ಯಬೇಡಿ; ಬೇಕಿದ್ದರೆ ಇಲ್ಲೇ ದಂಡ ಪಾವತಿಸುತ್ತೇವೆ’ ಎಂದು ಅಂಗಲಾಚಿ ದರೂ ಪೊಲೀಸರು ಮಾತ್ರ ಕ್ಯಾರೇ ಮಾಡುವುದಿಲ್ಲ. “ಒಮ್ಮೆ ಟೋಯಿಂಗ್‌ವಾಹನಕ್ಕೆ ಹತ್ತಿಸಿದ ವಾಹನವನ್ನು ಇಳಿಸುವ ನಿಯಮವಿಲ್ಲ’ ಎನ್ನುತ್ತಲೇ ಮೂರ್‍ನಾಲ್ಕು ಕಿ.ಮೀ. ದೂರಕ್ಕೆ ಕೊಂಡೊಯ್ದು ಅಲ್ಲಿಗೇ ಬರಬೇಕು ಎನ್ನುತ್ತಾರೆ. ಅಲ್ಲಿಗೇ ಬಂದು ದಂಡ ಪಾವತಿಸಬೇಕು ಎನ್ನುತ್ತಿರುವುದರ ಹಿಂದಿನ ಉದ್ದೇಶ ಕೂಡ ಹಲವು ರೀತಿಯ ಅನುಮಾನಕ್ಕೆ ಎಡೆ ಮಾಡುತ್ತಿದೆ. ಏಕೆಂದರೆ, ಕೆಲವು ಕಡೆ ಈ ಟೋಯಿಂಗ್‌ ಕೂಡ ದಂಧೆಯಾಗುತ್ತಿದೆ ಎನ್ನುವ ಆರೋ ಪವೂ ಸಾರ್ವಜನಿಕ ವಲಯದಲ್ಲಿ ಇದೆ.

ಠಾಣೆ ಪತ್ತೆಯೂ ಸವಾಲು :

ಕೆಲವೊಮ್ಮೆ ವಾಹನವನ್ನು ಟೋಯಿಂಗ್‌ ಮಾಡಿದ್ದಾರೆ ಎಂದು ಗೊತ್ತಾಗುವುದೇ ಕಷ್ಟ. ಇದಕ್ಕಿಂತಲೂ ಕಷ್ಟವೆಂದರೆ ಯಾವ ಠಾಣೆಯವರು ವಾಹನ ಹೊತ್ತುಕೊಂಡು ಹೋಗಿದ್ದಾರೆ, ವಾಹನ ಬಿಡಿಸಿಕೊಂಡು ಬರಲು ಎಲ್ಲಿಗೆ ಹೋಗಬೇಕು, ಸ್ವಂತ ವಾಹನವಿಲ್ಲದೆ ಅಷ್ಟು ದೂರಕ್ಕೆ ಹುಡುಕಿ ಕೊಂಡು ಹೋಗುವುದು.

Advertisement

ಯಾವ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳನ್ನು ಯಾವ ಪೊಲೀಸ್‌ ಠಾಣಾ ವ್ಯಾಪ್ತಿಗೆ ಟೋಯಿಂಗ್‌ ಮಾಡುತ್ತಾರೆ ಎನ್ನುವ ಪೂರ್ವ ಮಾಹಿತಿ ಕೂಡ ಸಾರ್ವಜನಿಕರಿಗೆ ಇಲ್ಲ.

ನಿರಂತರ ಪ್ರತಿರೋಧ  :

ಸ್ಟೇಟ್‌ಬ್ಯಾಂಕ್‌ನಲ್ಲಿ ಓರ್ವರು ಎಟಿಎಂಗೆ ಹೋಗಿ ಬರುವಷ್ಟರಲ್ಲಿ ಅವರ ವಾಹನವನ್ನು ಟೋಯಿಂಗ್‌ ಮಾಡಲಾಗಿತ್ತು. ವ್ಯಕ್ತಿ ಪರಿಪರಿಯಾಗಿ ಕೇಳಿದರೂ ಪೊಲೀಸರು ಪಟ್ಟು ಸಡಿಲಿಸಲಿಲ್ಲ. ಆಗ ಆ ವ್ಯಕ್ತಿ ಟೋಯಿಂಗ್‌ ವಾಹನಕ್ಕೆ ಅಡ್ಡವಾಗಿ ಮಲಗಿ ಪ್ರತಿಭಟನೆ ನಡೆಸಿದ್ದರು. ಅದಕ್ಕೂ ಅವರ ಮೇಲೆ ಕೇಸು ಹಾಕಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ಓರ್ವ ವ್ಯಕ್ತಿ ಸಂಚಾರಿ ಪೊಲೀಸರ ಜತೆಗೆ ಮಾತಿಗೆ ಇಳಿದು ಕೊನೆಗೆ ಟೋಯಿಂಗ್‌ ವಾಹನಕ್ಕೇ ಸರಿಯಾದ ದಾಖಲೆಗಳಿಲ್ಲದಿರುವುದನ್ನು ದೃಢಪಡಿಸಿ ಪೊಲೀಸರನ್ನು ಪೇಚಿಗೆ ಸಿಲುಕಿಸಿದ್ದರು. ಮತ್ತೂಂದು ಘಟನೆಯಲ್ಲಿ ಮಗು ಕಾರಿನೊಳಗೆ ಇರುವುದನ್ನು ಗಮನಿಸದೆಯೇ ಪೊಲೀಸರು ವಾಹನವನ್ನು ಎತ್ತಿಕೊಂಡು ಹೋಗಿದ್ದರು. ಇದು ಕೂಡ ಭಾರೀ ಟೀಕೆಗೆ ಕಾರಣವಾಗಿತ್ತು. ಹೀಗೆ ಟೋಯಿಂಗ್‌ ಕಾರ್ಯಾಚರಣೆಯು ಇತ್ತೀಚಿನ ದಿನಗಳಲ್ಲಿ ಹಲವು ಕಡೆ ಸಾರ್ವಜನಿಕರು, ಪೊಲೀಸರ ನಡುವೆ ವಾಗ್ವಾದಕ್ಕೂ ಕಾರಣವಾಗುತ್ತಿದೆ.

ಟೋಯಿಂಗ್‌: ರಿಪೇರಿಗೆ  42 ಸಾವಿರ  ರೂ. ಖರ್ಚು! :

ಟೋಯಿಂಗ್‌ಗೆ 407 ತೆರೆದ ವಾಹನವನ್ನು ಬಳಕೆ ಮಾಡಲಾಗುತ್ತಿದೆ. ಇದರಲ್ಲಿ 7-8 ಬೈಕ್‌ಗಳನ್ನು ತುಂಬಿಸಲಾಗುತ್ತದೆ. ಜತೆಗೆ ಒಂದು ಚತುಷcಕ್ರ ವಾಹನ ಎಳೆದುಕೊಂಡು ಹೋಗಲಾಗುತ್ತದೆ. ವಾಹನಗಳನ್ನು ಟೋಯಿಂಗ್‌ ವಾಹನಕ್ಕೆ ಎತ್ತಿ ಹಾಕುವಾಗ, ಇಳಿಸುವಾಗ, ಠಾಣೆಯ ಎದುರು ನಿಲ್ಲಿಸಿಡುವಾಗ ವಾಹನಗಳಿಗೆ ಹಾನಿಯಾಗುತ್ತಿರುವ ಬಗ್ಗೆಯೂ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಓರ್ವರ ಕಾರನ್ನು ಕಳೆದ ನವೆಂಬರ್‌ನಲ್ಲಿ ಟೋಯಿಂಗ್‌ ಮಾಡಲಾಗಿತ್ತು. ಅವರು ದಂಡ ಕಟ್ಟಿದ ಸಂದರ್ಭ ನೀಡಿದ ರಶೀದಿಯಲ್ಲಿ ರಾಂಗ್‌ ಪಾರ್ಕಿಂಗ್‌ಗೆ 1,000 ರೂ., ಸರಕಾರದ ಟೋಯಿಂಗ್‌ ಶುಲ್ಕ 500 ರೂ., ಖಾಸಗಿ ಟೋಯಿಂಗ್‌ ಶುಲ್ಕ 500 ರೂ. ಸಹಿತ 2,000 ರೂ. ಎಂದು ನಮೂದಿಸಲಾಗಿತ್ತು. ಬಳಿಕ ಅವರ ವಾಹನದ ದುರಸ್ತಿಗೆ 42,778 ರೂ. ವೆಚ್ಚವಾಗಿತ್ತು!

ಹಾಗಾಗಿ ಕೆಲವರು ತಮ್ಮ ವಾಹನಗಳನ್ನು ಹುಡುಕಿಕೊಂಡು ಠಾಣೆಯಿಂದ ಠಾಣೆಗೆ ಅಲೆದಾಡುವ ಸ್ಥಿತಿಯೂ ಇದೆ.

ಅನೌನ್ಸ್‌ ಮಾಡುವುದೇ ಇಲ್ಲ :

ಟೋಯಿಂಗ್‌ ಮಾಡುವ ರೀತಿಯ ಬಗ್ಗೆ ಜನರ ಆಕ್ರೋಶ ಇದೆ. ಮುಖ್ಯವಾಗಿ ಸಂಚಾರ ಪೊಲೀಸರು ಟೋಯಿಂಗ್‌ ಮಾಡುವ ಮೊದಲು  ಅನೌನ್ಸ್‌ ಮಾಡು ವುದೇ ಇಲ್ಲ. ಏಕಾಏಕಿ ವಾಹನ ಎತ್ತಿ ಕೊಂಡು ಹೋಗುತ್ತಾರೆ. ಅನೇಕ ಬಾರಿ ಪೊಲೀಸರು “ನೋ ಪಾರ್ಕಿಂಗ್‌ ಜಾಗದಲ್ಲಿ ವಾಹನ ಗಳಿವೆ. ತೆಗೆಯಿರಿ’ ಎಂದು ಧ್ವನಿವರ್ಧಕದ ಮೂಲಕ ಘೋಷಿಸುವುದೇ ಇಲ್ಲ. ಹಾಗಾಗಿ ಕಾರ್ಯಾಚರಣೆ ಬಗ್ಗೆ ವಾಹನ ಮಾಲಕರು/ಸವಾರರಿಗೆ ತಿಳಿಯುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next