ರಾಮನಗರ: ಕೋವಿಡ್ ಸೋಂಕು ಸಂಭವನೀಯ ಮೂರನೇ ಅಲೆಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ರಾಮನಗರ ಜಿಲ್ಲಾ ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ವಾರಾಂತ್ಯ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿ ಆದೇಶ ಹೊರೆಡಿಸಿದ್ದಾರೆ.
ರಾಮನಗರ ತಾಲ್ಲೂಕಿನ ಶ್ರೀ ರಾಮದೇವರ ಬೆಟ್ಟ, ಶ್ರೀ ರೇವಣ್ಣಸಿದ್ದೇಶ್ವರ ಬೆಟ್ಟ, ಚನ್ನಪಟ್ಟಣ ತಾಲ್ಲೂಕಿನ ಕಣ್ಣ ಜಲಾಶಯ, ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯ, ಸಾವನದುರ್ಗ ಬೆಟ್ಟ ಮತ್ತು ಕನಕಪುರ ತಾಲೂಕಿನ ಸಂಗಮ, ಮೇಕೆದಾಟು ಮತ್ತು ಚುಂಚಿ ಜಲಪಾತ, ಈ ಪ್ರವಾಸಿ ತಾಣಗಳಲ್ಲಿ ಸಾರ್ವತ್ರಿಕ ರಜೆ ದಿನಗಳು ಹಾಗೂ ವಾರಾಂತ್ಯದಲ್ಲಿ(ಶನಿವಾರ ಮತ್ತು ಭಾನುವಾರ) ಪ್ರವಾಸಿಗರು/ಸಾರ್ವಜನಿಕರು ಆಗಮಿಸುವುದನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ವಾರಾಂತ್ಯ ಹಾಗೂ ಸಾರ್ವತ್ರಿಕ ರಜೆ ದಿನಗಳಂದು ಹೊರ ಜಿಲ್ಲೆಗಳಿಂದ ಪ್ರವಾಸಿಗರು ಗುಂಪು ಗುಂಪಾಗಿ ಆಗಮಿಸುತ್ತಿದ್ದಾರೆ. ರಾಮನಗರ ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿನ ಸಂಭವನೀಯ ಮೂರನೇ ಅಲೆಯನ್ನು ನಿಯಂತ್ರಿಸುವ ಸದರಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ :ಹಳಿಯಾಳದಲ್ಲಿ ಫುಟ್ ಪಾತ್ ಮೇಲೆ ಇರುವ ಅಂಗಡಿಗಳ ತೆರವು ಕಾರ್ಯಾಚರಣೆ
ಸರ್ಕಾರವು ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಹೊರಡಿಸುವ ಆದೇಶ/ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಯಾವುದೇ ವ್ಯಕ್ತಿ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 51 ರಿಂದ 60 ರ ಜೊತೆಗೆ ಭಾರತೀಯ ದಂಡ ಸಂಹಿತೆಯ ಕಲಂ 188 ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು. ಎಂದು ಅವರು ಆದೇಶದಲ್ಲಿ ಎಚ್ಚರಿಸಿದ್ದಾರೆ.