ಕಾರವಾರ/ಬೆಂಗಳೂರು: ರಾಜ್ಯದ ಬರಪೀಡಿತ ಜಿಲ್ಲೆಗಳಿಗೆ ಕೇಂದ್ರದ 10 ಜನರ ತಂಡ ನ. 17- 19ರವರೆಗೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅಮಿತಾಬ್ ಗೌತಮ್ ನೇತೃತ್ವದತಂಡವು ನ.17 ರಂದು ಯಾದಗಿರಿ, ರಾಯಚೂ ರು,ನ.18 ರಂದು ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆಗಳಿಗೆ ಭೇಟಿ ನೀಡಲಿದೆ.
ಡಾ.ಮಹೇಶ್ ನೇತೃತ್ವದ ಎರಡನೇ ತಂಡವು ಇದೇ ಅವಧಿಯಲ್ಲಿ ಧಾರವಾಡ, ಬೆಳಗಾವಿ,ಬಾಗಲಕೋಟೆ, ವಿಜಯಪುರ ಮತ್ತು ಗದಗ ಜಿಲ್ಲೆಗಳಿಗೆ ಭೇಟಿ ಕೊಡಲಿದೆ. ಮಾನಸ್ ಚೌಧರಿ ನೇತೃತ್ವದ ತಂಡವು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ತೆರಳಲಿದೆ ಎಂದು ವಿವರಿಸಿದರು.
ಕೇಂದ್ರದ ಅಂತರ್-ಸಚಿವಾಲಯ ತಂಡವು ತಮ್ಮ ತಮ್ಮ ಜಿಲ್ಲೆಗಳಿಗೆ ಬಂದಾಗ ಆಯಾ ಭಾಗದ ಪ್ರತಿನಿಧಿಗಳು ಬರ ಮತ್ತು ಅದರಿಂದಾಗಿರುವ ಹಾನಿ ಮತ್ತು ನಷ್ಟದ ಬಗ್ಗೆ ತಂಡದ ಸದಸ್ಯರಿಗೆ ಸೂಕ್ತ ಮಾಹಿತಿ ನೀಡಬಹುದು ಎಂದರು.
ಅ. 30ರಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ 2,434 ಕೋಟಿ ರೂ.ಪರಿಹಾರವಾಗಿ ಒದಗಿಸಲು ಮನವಿ ಸಲ್ಲಿಸಿದ್ದೆವು. ಈ ವೇಳೆ ಬರದಿಂದ ಒಟ್ಟು 16,662 ಕೋಟಿ ರೂ. ನಷ್ಟವಾಗಿರುವ ಬಗ್ಗೆ ಕೇಂದ್ರದ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.