Advertisement
ವೀಕೆಂಡ್ ಹಿನ್ನೆಲೆಯಲಿ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಆಗಮಿಸಿ, ವಿರೂಪಾಕ್ಷೇಶ್ವರ ದೇವರ ದರ್ಶನ ಜೊತೆಯಲ್ಲಿ ವಿವಿಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು.
Related Articles
Advertisement
ಶನಿವಾರದ ಪೂಜೆಗೆ ಕೊಪ್ಪಳ ಜಿಲ್ಲೆಯ ಆನೆಗುಂದಿಯ ಆಂಜನಾದ್ರಿ ಪರ್ವತಕ್ಕೆ ಭೇಟಿ ನೀಡುವ ಭಕ್ತರು, ಹಂಪಿಗೆ ಭೇಟಿ ನೀಡುತ್ತಿದ್ದಾರೆ.
ನದಿಯ ಪ್ರವಾಹದ ಹಿನ್ನೆಲೆಯಲ್ಲಿ ವಿರೂಪಾಕ್ಷ ದೇವಾಲಯದ ಸ್ನಾನಘಟ್ಟ, ಪುರಂದರ ದಾಸರ ಮಂಟಪ ಪ್ರದೇಶದ ಕಡೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ರಾಮಲಕ್ಷö್ಮಣ ಹಾಗೂ ಯಂತ್ರೋದ್ಧಾರ ಆಂಜನೇಯ ದೇವಾಲಯಕ್ಕೆ ತೆರಳುವ (ಓನಕೆ ಕಿಂಡಿ) ಮಾರ್ಗ ಜಲಾವೃತವಾಗಿರುವುದರಿಂದ ಬದಲಿ ಮಾರ್ಗದ ಮೂಲಕ ಪ್ರವಾಸಿಗರು ತೆರಳುತ್ತಿದ್ದಾರೆ. ಆಗಾಗ ಸುರಿಯುವ ಜಡಿ ಮಳೆ ನಡುವೆಯೂ ಪ್ರವಾಸಿಗರು ತಣ್ಣನೆ ಅನುಭೂತಿ ಪಡೆಯುತ್ತಿದ್ದಾರೆ.
ಟಿ.ಬಿ,ಡ್ಯಾಂಗೆ ಜನಸಾಗರ:
ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಪ್ರವಾಸಿಗರು ಟಿ.ಬಿ.ಡ್ಯಾಂಗೆ ಆಗಮಿಸುತ್ತಿದ್ದಾರೆ. ಜಲಾಶಯದ ಗೇಟ್‌ಗಳಿಂದ ಬೋರ್ಗರೆದು ದುಮುಕುವ ನೀರಿನ ನರ್ತನ ಕಂಡು ಪುಳಕೀತರಾಗುತ್ತಿದ್ದಾರೆ.
ಕೆಳಭಾಗದ ಉದ್ಯಾನವನದಲ್ಲಿ ಸಂಗೀತ ಕಾರಂಜಿ ವೀಕ್ಷಿಸಿ, ಸಂಭ್ರಮಿಸುತ್ತಿದ್ದಾರೆ. ಜಲಾಶಯ ಹಿನ್ನೀರಿನ ಪ್ರದೇಶದಲ್ಲಿ ನೀರಿನ ಅಲೆಯ ಕಲರವಕ್ಕೆ ಮನಸೋಲುತ್ತಿದ್ದಾರೆ. ಟಿ.ಬಿ.ಡ್ಯಾಂ, ಸುರಂಗ ಮಾರ್ಗದ ರಸ್ತೆ ಹಾಗೂ ಮುನಿರಾಬಾದ್ ಸೇತುವೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಜಲಾಶಯದ ವಿಹಂಗಮ ದೃಶ್ಯವನ್ನು ಸವಿಯುತ್ತಿದ್ದಾರೆ. ಹುಬ್ಬಳ್ಳಿ, ಧಾರವಾಡ, ಗದಗ, ಕೊಪ್ಪಳ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಹಂಪಿ ಮತ್ತು ಟಿ.ಬಿ.ಡ್ಯಾಂಯತ್ತ ದಾವಿಸಿ ಬರುತ್ತಿದ್ದಾರೆ.