ಕಾಶ್ಮೀರ : ಪ್ರವಾಸಿ ತಾಣ ದಾಲ್ ಸರೋವರ ಪ್ರದೇಶದ ರಸ್ತೆ ಪಕ್ಕದಲ್ಲಿ ಪ್ರವಾಸಿಗರ ದಂಡು ಸಾಮೂಹಿಕ ಮೂತ್ರ ವಿಸರ್ಜನೆ ಮಾಡಿರುವುದನ್ನು ಕಿರಿಯ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ಖಂಡಿಸಿದ್ದಾರೆ.
9 ವರ್ಷ ವಯಸ್ಸಿನ ಲಿಸಿಪ್ರಿಯಾ ತಮ್ಮ ಟ್ವಿಟರ್ ನಲ್ಲಿ ಈ ಫೋಟೊ ಹಂಚಿಕೊಂಡು ಇದೊಂದು ಅಸಹ್ಯಕರ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವಪ್ರಸಿದ್ಧ ಪ್ರವಾಸಿತಾಣ ದಾಲ್ ಸರೋವರದ ಪ್ರದೇಶದಲ್ಲಿ ರಸ್ತೆ ಪಕ್ಕದಲ್ಲಿ ಭಾರತೀಯ ಪ್ರವಾಸಿಗರು ಸಾಲಿನಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಿರುವ ಫೋಟೊ ನೋಡಿ ಆಘಾತವಾಯಿತು. ನಮ್ಮ ಈ ಮನಸ್ಥಿತಿ ಯಾವಾಗ ಬದಲಾಯಿಸಿಕೊಳ್ಳುತ್ತೇವೆ ? ಎಂದು ಪ್ರಶ್ನಿಸಿರುವ ಲಿಸಿಪ್ರಿಯಾ, ದಾಲ್ ಸರೋವರ ವಿಶ್ವದ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಲಿಸಿಪ್ರಿಯಾ ಹಂಚಿಕೊಂಡಿರುವ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಪ್ರವಾಸಿಗರ ಬುದ್ಧಿಗೇಡಿತನಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸಾಕಷ್ಟು ಜನರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಸುಂದರವಾದ ಪರಿಸರ ಹಾಳು ಮಾಡುತ್ತಿದ್ದಾರೆ. ಇಂತಹವರಿಂದ ಭಾರತದ ‘ಸ್ವಚ್ಛ ಭಾರತದ’ ಪರಿಕಲ್ಪನೆ ಉದ್ದೇಶ ಮಣ್ಣು ಪಾಲಾದಂತೆ. ಚಿಕ್ಕಮಕ್ಕಳಂತೆ ರಸ್ತೆ ಪಕ್ಕದಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡು. ಸ್ಥಳೀಯರಿಂದ ಮಾಹಿತಿ ಪಡೆದು ಸಾರ್ವಜನಿಕ ಶೌಚಾಲಯಗಳನ್ನು ಈ ಪ್ರವಾಸಿಗರು ಬಳಸಬಹುದಿತ್ತು ಎಂದು ಕಿಡಿ ಕಾರಿದ್ದಾರೆ.
ಇನ್ನು ಭಾರತೀಯ ಪ್ರವಾಸಿಗರು ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವ ಫೋಟೊ ವೈರಲ್ ಆಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.