ಪಣಜಿ: ಗೋವಾದ ಪ್ರವಾಸಿ ತಾಣಗಳು ಪ್ರವಾಸಿಗರಿಂದ ಸಂಪೂರ್ಣ ಭರ್ತಿಯಾಗುತ್ತಿದೆ. ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಪ್ರಮುಖವಾಗಿ ಗೋವಾದಲ್ಲಿನ ಬೀಚ್‍ಗಳನ್ನು ಇಷ್ಟಪಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಬೀಚ್‍ಗಳಲ್ಲಿ ಪ್ರವಾಸಿಗರ ಗರ್ದಿ ಕಂಡುಬರುತ್ತಿದೆ. ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾದತ್ತ ಮುಖಮಾಡಿರುವ ಹಿನ್ನೆಲೆಯಲ್ಲಿ ಗೋವಾದಲ್ಲಿನ ಪ್ರವಾಸೋದ್ಯಮ ಅವಲಂಬಿತ ಉದ್ಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 2020 ರಲ್ಲಿ ಕರೋನಾ ಮಹಾಮಾರಿಯಿಂದಾಗಿ ದೇಶ-ವಿದೇಶಿಯ ಪ್ರವಾಸಿಗರು ಗೋವಾಕ್ಕೆ ಭೇಟಿ ನೀಡುವುದಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದಾಗಿ ರಾಜ್ಯ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿತ್ತು. ರಾಜ್ಯದಲ್ಲಿ ಹೋಟೆಲ್‍ಗಳು, ಪ್ರವಾಸಿ ಟ್ಯಾಕ್ಸಿಗಳು, ಶಾಕ್‍ಗಳು, ವಾಟರ್‍ಬೋಟ್‍ಗಳು, ಪ್ರವಾಸೋದ್ಯಮ ಅವಲಂಬಿತ ಉದ್ಯೋಗಗಳು ಕಳೆದ ಸುಮಾರು ಒಂದೂವರೆ ವರ್ಷಗಳ ಕಾಲ ಸಂಪೂರ್ಣ ಬಂದ್ ಆಗಿದ್ದವು. ಆದರೆ ಇದೀಗ ಗೋವಾಕ್ಕೆ ದೇಶ-ವಿದೇಶಿಯ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅವಲಂಬಿತ ಉದ್ಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರವಾಸಿ ಟ್ಯಾಕ್ಸಿಗಳನ್ನು ಬಾಡಿಗೆಗೆ ನೀಡುವ ಮಿನಿನ್ ಡಯಾಸ್ ಪ್ರತಿಕ್ರಿಯೆ ನೀಡಿ- ರೈಲು ಮತ್ತು ವಿಮಾನದ ಮೂಲಕ ಬರುವ ಹೆಚ್ಚಿನ ಪ್ರವಾಸಿಗರು ಗೋವಾದಲ್ಲಿ ಓಡಾಟ ನಡೆಸಲು ಪ್ರವಾಸಿ ಟ್ಯಾಕ್ಸಿಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ ಟ್ಯಾಕ್ಸಿ ಉದ್ಯೋಗವು ಪುನರಾರಂಭಗೊಂಡಿದೆ ಎಂದರು.
ನಿವಾಸಿ ಹೋಟೆಲ್ ಮಾಲೀಕರ ಪ್ರಕಾರ- ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ರೂಂಗಳ ಅಡ್ವಾನ್ಸ್ ಬುಕಿಂಗ್ ಆರಂಭಗೊಂಡಿದೆ. ಕ್ರಿಸ್‍ಮಸ್ ಮತ್ತು ಹೊಸ ವರ್ಷ ಸಂಭ್ರಮಾಚರಣೆಗೆ ಗೋವಾಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಕ್ ಮಾಲೀಕ ರಾಯನ್ ಪ್ರತಿಕ್ರಿಯೆ ನೀಡಿ, ಪ್ರವಾಸೋದ್ಯಮ ಸಂಬಂಧಿತ ಹೆಚ್ಚಿನ ವ್ಯಾಪಾರ ವಹಿವಾಟು ವಿದೇಶಿ ಪ್ರವಾಸಿಗರ ಮೇಲೆ ಅವಲಂಭಿತವಾಗಿದೆ. ಸದ್ಯ ಪ್ರವಾಸೋದ್ಯಮ ಅವಲಂಬಿತ ವ್ಯಾಪಾರ ವಹಿವಾಟು ಚೇತರಿಕೆಯಾಗುತ್ತಿದೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಸೇರಿದಂತೆ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ತೃಪ್ತಿದಾಯಕವಾಗಿ ವ್ಯಾಪಾರ ವಹಿವಾಟು ನಡೆಯುತ್ತಿದೆ ಎಂದರು.