ಗುಂಡ್ಲುಪೇಟೆ: ಹೊಸ ವರ್ಷದ ಹಿನ್ನೆಲೆಯಲ್ಲಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀ ಪುರ ಸಫಾರಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಕೃತಿ ಸೌಂದರ್ಯ ಸವಿದು ಖುಷಿ ಪಟ್ಟರು.
ವರ್ಷದ ಅಂತ್ಯ ಶನಿವಾರ ಹಾಗೂ ನೂತನ ವರ್ಷಾರಂಭ ಭಾನುವಾರವಾದ ಹಿನ್ನೆಲೆ ಕೇರಳ, ತಮಿಳುನಾಡು, ಮೈಸೂರು, ಬೆಂಗಳೂರು ಸೇರಿ ವಿವಿಧೆಡೆಯಿಂದ ಸಾವಿ ರಾರು ಪ್ರವಾಸಿಗರು ಕುಟುಂಬ ಸಮೇತರಾಗಿ ಈ ಎರಡು ಪ್ರವಾಸಿ ತಾಣಗಳಿಗೆ ಧಾವಿಸಿ ದ್ದರು. ಗೋಪಾಲಸ್ವಾಮಿ ಬೆಟ್ಟಕ್ಕೆ ಕೆಎಸ್‌ಆರ್ ಟಿಸಿಯಿಂದ 12 ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಟ್ಟದಲ್ಲಿ ಜನ ಜಂಗುಳಿ ಹೆಚ್ಚಿದ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನದ ಸುತ್ತಲು ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.
ಬಂಡೀಪುರ ಸಫಾರಿಯಲ್ಲೂ ಜನ ಜಂಗುಳಿ: ಹೊಸ ವರ್ಷದ ಹಿನ್ನೆಲೆ ಬಂಡೀಪುರ ಸಫಾರಿಗೂ ಜನರ ದಂಡೆ ಆಗಮಿಸಿ ಸಫಾರಿ ವೀಕ್ಷಣೆ ಮಾಡಿದರು. 8 ಬಸ್, 5 ಜಿಪ್ಸಿ, ಮತ್ತು ಒಂದು ಕ್ಯಾಂಟ್ ವಾಹನಗಳು ಸಂಚರಿಸಿದವು. ಅಧಿಕ ಮಂದಿ ಸಫಾರಿಗೆ ಆಗಮಿಸಿದ್ದ ಕಾರಣ ಹಲವರಿಗೆ ಟಿಕೆಟ್ ಸಿಗದೆ ವಾಪಸ್ಸಾದರು.
ವಿವಿಧ ದೇಗುಲಗಳಲ್ಲಿ ಪೂಜೆ: ತಾಲೂಕಿನ ಪಾರ್ವತಿ ಬೆಟ್ಟ, ಹುಲುಗನ ಮರಡಿ ವೆಂಕಟರಮಣಸ್ವಾಮಿ ಬೆಟ್ಟ, ಮೇಲುಕಾಮನ ಹಳ್ಳಿ ಹತ್ತಿರದ ಹನುಮನ ದೇವಸ್ಥಾನ, ಪಟ್ಟಣದ ರಾಮೇಶ್ವರಸ್ವಾಮಿ, ಆಂಜನೇಯ, ತಾಲೂಕಿನ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ಸುತ್ತಮುತ್ತಲ ಗ್ರಾಮದ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ವ್ಯಾಪಾರ ಜೋರು: ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ ಮೂಲಕ ತಮಿಳುನಾಡು, ಕೇರಳದ ಕಡೆಗೆ ಸಾವಿರಾರು ವಾಹನಗಳು ಸಂಚರಿಸಿದ ಹಿನ್ನೆಲೆ ಹೆದ್ದಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು ಕಂಡು ಬಂತು. ಈ ಕಾರಣದಿಂದ ಪ್ರವಾಸಿಗರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಟೆಲ್, ಹೆದ್ದಾರಿ ಬದಿಯ ಅಂಗಡಿಗಳಲ್ಲಿ ಎಳೆನೀರು, ಕಲ್ಲಂಗಡಿ, ಪಪ್ಪಾಯ, ಕಬ್ಬಿನ ಬ್ಯೂಸ್ ಸವಿದರು. ಇದರಿಂದ ಮಾಮೂಲಿಗಿಂತ ಹೊಸ ವರ್ಷದ ದಿನ ಹೆಚ್ಚಿನ ಆದಾಯ ಅಂಗಡಿ ಮಾಲಿಕರು ಗಳಿಸಿದರು.