“ಆ ಹುಡುಗನಿಗೆ 22ರ ಆಸುಪಾಸು. ನಮ್ಮ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ. ಅವನು ಹೇಳಿದ ಕಥೆಯನ್ನ ಸಿನಿಮಾ ಮಾಡಬೇಕೆನಿಸಿತು. ತಡಮಾಡದೆ ಚಿತ್ರ ಮಾಡಿದೆ. ಈಗ ಬಿಡುಗಡೆಗೆ ರೆಡಿಯಾಗಿದೆ…’
ಹೀಗೆ ಖುಷಿಯಿಂದ ಹೇಳಿಕೊಂಡರು ನಿರ್ಮಾಪಕ ಶಂಕರ್. ಅವರು ಹೇಳಿದ್ದು “3000′ ಎಂಬ ಹಾರರ್ ಚಿತ್ರ ನಿರ್ದೇಶಿಸಿರುವ ರಬ್ಬುನಿ ಕೀರ್ತಿ ಬಗ್ಗೆ. “3000′ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಿಬ್ಬರಿಗೂ ಮೊದಲ ಅನುಭವ. ಇನ್ನೇನು ಚಿತ್ರ ಬಿಡುಗಡೆಯ ತಯಾರಿಯಲ್ಲಿರುವ ಚಿತ್ರತಂಡ, ಇತ್ತೀಚೆಗೆ ಆಡಿಯೋ ಸಿಡಿ ಬಿಡುಗಡೆ ಮಾಡಿತು. ಅಂದು ಶ್ರೀ ವಿಶ್ವನಾಥ್ ಭಟ್ ಸ್ವಾಮೀಜಿ ವಿಶೇಷ ಆಕರ್ಷಣೆಯಾಗಿದ್ದರು. ಸಮರ್ಥನಂ ಟ್ರಸ್ಟ್ ಮಕ್ಕಳು ಆಡಿಯೋ ಸಿಡಿ ಬಿಡುಗಡೆ ಮಾಡಿದ ಬಳಿಕ ಮಾತುಕತೆ ಶುರುವಾಯಿತು.
ಅಂದು ಮೊದಲು ಮಾತಿಗಿಳಿದ ನಿರ್ಮಾಪಕ ಶಂಕರ್, “ನಾನು ನಿರ್ಮಾಪಕನಲ್ಲ. ಚಿತ್ರದ ಸದಸ್ಯನಷ್ಟೇ. ಈ ಚಿತ್ರ ಮಾಡೋಕೆ ಎರಡು ಕಾರಣ. ಚಿತ್ರರಂಗದಲ್ಲಿ ಹೊಸ ರೀತಿಯ ಚಿತ್ರ ಮಾಡುಬೇಕು. ಆ ಮೂಲಕ ಬದಲಾವಣೆಗೆ ಸಣ್ಣ ಪ್ರಯತ್ನ ಮಾಡಬೇಕು. ಇನ್ನೊಂದು ಹೊಸ ಪ್ರತಿಭೆಗಳನ್ನು ಆ ಮೂಲಕ ಹೊರತರಬೇಕು ಎಂಬ ಉದ್ದೇಶದಿಂದ ನಿರ್ಮಾಣಕ್ಕಿಳಿದೆ. ಇಲ್ಲಿ ಹಣಕ್ಕಿಂತ ಸೃಜನಶೀಲತೆ ಮುಖ್ಯ. ನಿರ್ದೇಶಕ ಕೀರ್ತಿ ಒಳ್ಳೆಯ ಪ್ರತಿಭಾವಂತ. ಅವನನ್ನು ನಂಬಿ ಸಿನಿಮಾ ಮಾಡಿದ್ದೇನೆ. ಆ ನಂಬಿಕೆ ಕೀರ್ತಿ ಉಳಿಸಿಕೊಂಡಿದ್ದಾನೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಅಂದರು ಶಂಕರ್.
ನಿರ್ದೇಶಕ ರಬ್ಬುನಿ ಕೀರ್ತಿ ಈ ಚಿತ್ರದಲ್ಲಿ ಸಾಕಷ್ಟು ಕಲಿತಿದ್ದಾರಂತೆ. “ನಾನೊಂದು ಕಥೆ ಹೇಳಿದ್ದನ್ನು ಕೇಳಿ, ನನ್ನ ಮೇಲೆ ಭರವಸೆ ಇಟ್ಟು ಹಣ ಹಾಕಿ ಚಿತ್ರ ಮಾಡಿದ ನಿರ್ಮಾಪಕರಿಗೆ ತೃಪ್ತಿ ಎನಿಸವಂತಹ ಚಿತ್ರ ಕೊಟ್ಟ ನಂಬಿಕೆ ನನ್ನದು. ಇದು ಒಬ್ಬರ ಶ್ರಮವಲ್ಲ. ಇಡೀ ತಂಡದ ಸಹಕಾರ, ಪ್ರೋತ್ಸಾಹದಿಂದ ಈ ಚಿತ್ರ ಮಾಡಲು ಸಾಧ್ಯವಾಗಿದೆ. ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಎಲ್ಲಾ ಸರಿ, “3000′ ಕಥೆ ಏನೆಂಬ ಪ್ರಶ್ನೆ ಎದುರಾಗಬಹುದು. ಒಂದು ಕೆಟ್ಟ ಶಕ್ತಿ ಎದುರಾದಾಗ, ಪ್ರವಾಸಕ್ಕೆ ಹೋಗಿದ್ದ ಹುಡುಗರು ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾರೆ ಎಂಬುದು ಕಥೆ’ ಎನ್ನುತ್ತಾರೆ ನಿರ್ದೇಶಕರು.
ಸಂಗೀತ ನಿರ್ದೇಶಕ ಅಲೆನ್ಸ್ ಅವರು ಅಂದು ಸಖತ್ ಖುಷಿಯ ಮೂಡ್‌ನಲ್ಲಿದ್ದರು. ಕಾರಣ, ಅಂದು ಅವರ ದಿನ. “3000′ ಅಲೆನ್ಸ್ ಅವರ ಮೊದಲ ಚಿತ್ರವಂತೆ. “ಮೊದಲ ಸಲವೇ ನನಗೆ ಹಾರರ್ ಚಿತ್ರ ಸಿಕ್ಕಿದೆ. ಇಂತಹ ಚಿತ್ರ ಮಾಡುವಾಗ ಸಹಜವಾಗಿಯೇ ಚಾಲೆಂಜ್ ಇರುತ್ತೆ. ಸಾಕಷ್ಟು ಹಾರರ್ ಚಿತ್ರಗಳು ಬಂದಿವೆ. ಅವುಗಳಿಗಿಂತ ಭಿನ್ನವಾಗಿ ಕೊಡಬೇಕೆಂಬ ಹಠವಿತ್ತು. ಸೌಂಡಿಂಗ್, ಎಫೆಕ್ಟ್ ಇಲ್ಲಿ ಮುಖ್ಯ. ಹಿನ್ನೆಲೆ ಸಂಗೀತ ಜೊತೆಗೆ ನಾಲ್ಕು ಹಾಡುಗಳಿವೆ. ಹಾಲಿವುಡ್ ಶೈಲಿಯ ಸಂಗೀತವನ್ನೂ ಇಲ್ಲಿ ಕೇಳಬಹುದು. ಲ್ಯಾಟಿನ್ ಭಾಷೆಯಲ್ಲೊಂದು ಹಾಡು ಇರುವುದು ಇನ್ನೊಂದು ವಿಶೇಷ’ ಎನ್ನುತ್ತಾರೆ ಅಲೆನ್ಸ್.
ಚಿತ್ರದಲ್ಲಿ ಮೂವರು ನಾಯಕರು, ಅವರಿಗೆ ಮೂವರು ನಾಯಕಿಯರು. ಪ್ರೀತಮ್, ಸುಹಾನ್, ಪ್ರಸಾದ್, ಸ್ವಾತಿ, ಉಜಾಲ ಮತ್ತು ಕಾವ್ಯಾ ಇಲ್ಲಿ ನಟಿಸಿದ್ದಾರೆ. ಅಂದು ಇವರೆಲ್ಲರೂ ಚಿತ್ರದ ಬಗ್ಗೆ ಎರಡೆರೆಡು ಮಾತನಾಡಿದರು. ಅಂದು ಲಯ ಕೋಕಿಲ, ಪ್ರವೀಣ್ ಗೋಡಿಡಿ, ಪೃಥ್ವಿರಾಜ್, ಆನಂದ್ ಆಡಿಯೋ ಸಂಸ್ಥೆಯ ಆನಂದ್, ವೆಂಕಟ್‌ಗೌಡ್ರು ಇತರರು ಚಿತ್ರಕ್ಕೆ ಶುಭ ಹಾರೈಸುವ ಹೊತ್ತಿಗೆ ಹೊತ್ತು ಮೀರಿತ್ತು.