Advertisement
ಮಲ್ಪೆ ಬೀಚ್‌ಗೆ ರಾಜ್ಯ, ಹೊರರಾಜ್ಯ, ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಿದ್ದು, ಬೀಚ್ ಪ್ರವಾಸಿಗರಿಗೆ ಮುದ ನೀಡದೆ ಐದು ತಿಂಗಳು ಕಳೆದಿದೆ. ಇದೀಗ ಮಳೆಯ ಅಬ್ಬರ ಕಡಿಮೆಯಾದರೂ ವಾಟರ್ ನ್ಪೋರ್ಟ್ಸ್ ಇನ್ನೂ ಆರಂಭವಾಗಿಲ್ಲ. ಬಹುತೇಕ ಜಲಸಾಹಸ ಕ್ರೀಡಾ ಸಂಸ್ಥೆಗಳು ಅವಕಾಶಕ್ಕಾಗಿ ಕಾದು ಕುಳಿತಿವೆ. ಅ. 2ರ ಬಳಿಕ ಎಲ್ಲ ಜಲಸಾಹಸ ಕ್ರೀಡೆಗಳು ನಡೆಯುವ ಸಾಧ್ಯತೆ ಇದೆ ಎಂದು ಪೌರಾಯುಕ್ತ ಡಾ| ಉದಯ ಶೆಟ್ಟಿ ಹೇಳಿದ್ದಾರೆ.
ಈ ಬಾರಿ ಅವಧಿಗೂ ಮುನ್ನವೇ ಬೀಚ್‌ಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅನೇಕ ಅವಘಡಗಳು ಸಂಭವಿಸಿದ ಕಾರಣ ಮಳೆ ಆರಂಭವಾಗುತ್ತಿದ್ದಂತೆ ಮೇ ಮೊದಲ ವಾರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಸೆ. 15ಕ್ಕೆ ನಿಷೇಧಿತ ಅವಧಿ ಮುಗಿದರೂ ಪ್ರವಾಸಿಗರಿಗೆ ಇದು ವರೆಗೂ ನೀರಿಗಿಳಿಯುವ ಅವಕಾಶ ಸಿಕ್ಕಿಲ್ಲ. ಪ್ರಸ್ತುತ ಬೀಚ್ ಅಭಿವೃದ್ಧಿ ಸಮಿತಿಯಿಂದ ಸಿದ್ಧತೆ ನಡೆಯುತ್ತಿದೆ. ಪ್ರವಾಸಿಗರ ಸುರಕ್ಷೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು. ಅಲ್ಲಲ್ಲಿ ವಾಚ್ ಟವರ್ ಅಳವಡಿಕೆ, ಮೈಕ್‌ಗಳ ದುರಸ್ತಿ, ಸ್ವಿಮ್ಮಿಂಗ್ ವಲಯಗಳನ್ನು ನಿರ್ಮಿಸಲಾಗುತ್ತಿದೆ. ಪ್ರವಾಸಿಗರು ನೀರಿಗೆ ಇಳಿಯದಂತೆ ಅಳಡಿಸಲಾದ ನೆಟ್ ಅನ್ನು ಮುರ್‍ನಾಲ್ಕು ದಿನಗಳಲ್ಲಿ ತೆಗೆಯಲಾಗುವುದು ಬೀಚ್ ಅಭಿವೃದ್ಧಿ ಸಮಿತಿಯ ನಿರ್ವಾಹಕ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.