Advertisement

ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ

05:49 AM Jan 02, 2019 | Team Udayavani |

ಮೈಸೂರು: ಹೊಸ ವರ್ಷ 2019ರ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅರಮನೆಗಳ ನಗರಿ ಮೈಸೂರು ಸೇರಿದಂತೆ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಮಂಗಳವಾರ ಎಲ್ಲೆಲ್ಲೂ ಜನಜಾತ್ರೆಯೇ ನೆರೆದಿತ್ತು. ಮೈಸೂರು ಅರಮನೆ ಮಂಡಳಿಯಿಂದ ಸೋಮವಾರ ಮಧ್ಯರಾತ್ರಿ 12ರಿಂದ 12.15ರವರೆಗೆ ಅರಮನೆ ವಿದ್ಯುದ್ದೀಪಾಲಂಕಾರದಿಂದ ಝಗಮಗಿಸುತ್ತಿತ್ತು.

Advertisement

ಈ ಬೆಳಕಿನಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಆಕಾಶದಲ್ಲಿ ಚಿತ್ತಾರ ಬಿಡಿಸುವ ಪಟಾಕಿಗಳನ್ನು ಸಿಡಿಸಿ ಹೊಸವರ್ಷವನ್ನು ಸ್ವಾಗತಿಸಲಾಯಿತು. ನೆರೆದಿದ್ದ ಸಾವಿರಾರು ಜನರು ಹ್ಯಾಪಿ ನ್ಯೂ ಇಯರ್‌ ಘೋಷಣೆಗಳನ್ನು ಕೂಗಿ, ಪರಸ್ಪರ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಇನ್ನು ನಗರದ ತಾರಾ ಹೋಟೆಲ್‌ಗ‌ಳು, ರೆಸಾರ್ಟ್‌ಗಳು, ಪ್ರತಿಷ್ಠಿತ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯದ ಪಾರ್ಟಿಗಳನ್ನು ಆಯೋಜಿಸಲಾಗಿತ್ತು. ಯುವಕರು-ಯುವತಿಯರು ‘ಮದ್ಯರಾತ್ರಿ’ಡಿ.ಜೆ. ಸೌಂಡಿಗೆ ಹೆಜ್ಜೆ ಹಾಕುತ್ತಾ ಹುಚ್ಚೆದ್ದು ಕುಣಿದು ಹೊಸ ವರ್ಷವನ್ನು ಸ್ವಾಗತಿಸಿದರು. 

ನೂರಾರು ಯುವಕರು-ಯುವಕರು ದ್ವಿಚಕ್ರ ವಾಹನದಲ್ಲಿ ಹ್ಯಾಪಿ ನ್ಯೂ ಇಯರ್‌ ಎಂದು ಕೂಗುತ್ತಾ ನಗರದ ರಸ್ತೆಗಳಲ್ಲಿ ‘ಮದ್ಯ’ರಾತ್ರಿ ಸಂಚರಿಸಿ ಸಂಭ್ರಮಿಸಿದರು. ನಗರದ ಬಹುತೇಕ ಬಡಾವಣೆಗಳಲ್ಲೂ ಜನತೆ ಮಧ್ಯರಾತ್ರಿವರೆಗೆ ಕಾದಿದ್ದು, 12ಗಂಟೆಯಾಗುತ್ತಲೇ ಪಟಾಕಿ ಸಿಡಿಸಿ,

ಪರಸ್ಪರ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡು, ಮೊಬೈಲ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರು, ಸಂಬಂಧಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕಳುಹಿಸಿ ಸಂಭ್ರಮಿಸಿದರು. ಯುವಕ-ಯುವತಿಯರು ತಡರಾತ್ರಿವರೆಗೆ ಪಾರ್ಟಿ ಮಾಡಿದ್ದರಿಂದ ಮಂಗಳವಾರ ಬೆಳಗ್ಗೆ ರಸ್ತೆಗಿಳಿಯುವ ಪ್ರಯತ್ನ ಮಾಡಲಿಲ್ಲ.

Advertisement

ಹೊಸ ವರ್ಷದ ಮೊದಲ ದಿನದ ಹಿನ್ನೆಲೆಯಲ್ಲಿ ಮಂಗಳವಾರ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ನಗರದ ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೆ ಭಕ್ತಾದಿಗಳು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಅದರಲ್ಲೂ ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದರಿಂದ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಮೈಸೂರಿನ ಪ್ರಮುಖ ಪ್ರವಾಸಿತಾಣಗಳಾದ ಅರಮನೆ, ಮೃಗಾಲಯಗಳಿಗೆ ಮಂಗಳವಾರ ಒಂದೇ ದಿನ 30 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಹೀಗಾಗಿ ಅರಮನೆ ಮತ್ತು ಮೃಗಾಲಯದ ಟಿಕೆಟ್‌ ಕೌಂಟರ್‌ಗಳಲ್ಲಿ ಜನ ಸಾಗರವೇ ಕಂಡುಬಂತು.

ಲಡ್ಡು ವಿತರಣೆ: ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಹೊಸ ವರ್ಷದ ಪ್ರಯುಕ್ತ ಭಕ್ತರಿಗೆ 2 ಲಕ್ಷ ಲಡ್ಡುಗಳನ್ನು ವಿತರಿಸಲಾಯಿತು. ಬೆಳಗ್ಗೆ 5ಗಂಟೆಯಿಂದಲೇ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಲಡ್ಡು ಹಾಗೂ ಪುಳಿಯೋಗರೆ ಪ್ರಸಾದವನ್ನು ಸ್ವೀಕರಿಸಿದರು.

ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ಅರಮನೆ ಆವರಣದಲ್ಲಿರುವ ಮುಜರಾಯಿ ಇಲಾಖೆಯ ಅರಮನೆ ಸಮೂಹ ದೇವಸ್ಥಾನಗಳು, ನೂರೊಂದು ಗಣಪತಿ ದೇವಸ್ಥಾನ ಸೇರಿದಂತೆ ನಗರದ ದೇವಸ್ಥಾನಗಳಲ್ಲಿ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಧನ್ಯತೆ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next