Advertisement

ಪ್ರವಾಸಿ ತಾಣ ಹಂಗಾರಕಟ್ಟೆ ; ಅಭಿವೃದ್ಧಿಗಿದೆ ಸಾಕಷ್ಟು ಅವಕಾಶ

11:19 PM Apr 22, 2019 | sudhir |

ಕೋಟ: ತುಳುನಾಡ ರಾಜಧಾನಿ ಬಾರಕೂರಿನ ರಾಜಾಡಳಿತದ ಕಾಲದಲ್ಲಿ ವಿದೇಶಗಳಿಗೆ ಪ್ರಮುಖ ಆಹಾರ ವಸ್ತುಗಳನ್ನು ರಪು¤ಗೊಳಿಸುವ ಬಂದರಾಗಿ ಹಂಗಾರಕಟ್ಟೆ ವಿಶ್ವಮಾನ್ಯತೆ ಪಡೆದಿತ್ತು. ರಾಜವೈಭವಗಳು ಮರೆಯಾದಂತೆ ಇದು ತನ್ನ ಅಸ್ಥಿತ್ವ ಕಳೆದುಕೊಂಡು ಇಂದು ಸಣ್ಣ ಜಟ್ಟಿಯಾಗಿ ಉಳಿದಿದೆ. ಆದರೆ ಇಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯ ವಿಶೇಷವಾಗಿದ್ದು, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಬೆಳೆಯಲಿದೆ.

Advertisement

ಸುಂದರ ಪ್ರದೇಶ
ಸೀತಾನದಿ ಹಂಗಾರಕಟ್ಟೆಯ ಅಳಿವೆಯ ಮೂಲಕ ಸಮುದ್ರ ಸೇರುವ ನದಿ-ಕಡಲುಗಳ ಸಂಗಮ ದೃಶ್ಯ ಇಲ್ಲಿ ಕಾಣಸಿಗುತ್ತದೆ. ಮೂರು ಕಡೆ ಜಲರಾಶಿ, ಪ್ರಶಾಂತ ವಾತಾವರಣ ಪ್ರವಾಸಿಗರಿಗೆ ಅತ್ಯಂತ ಖುಷಿ ನೀಡುತ್ತದೆ. ಬೋಟ್‌ ಹಾಗೂ ದೋಣಿಗಳು ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಲು ಹಾಗೂ ಮೀನುಗಾರಿಕೆ ಮುಗಿದ ಮೇಲೆ ಹಂಗಾರಕಟ್ಟೆ, ಕೋಡಿಬೆಂಗ್ರೆ ಜಟ್ಟಿಯನ್ನು ತಲುಪಲು ಈ ಅಳಿವೆಯನ್ನು ಅವಲಂಬಿಸುತ್ತವೆ. ಈ ಎರಡು ಜಟ್ಟಿಗಳಲ್ಲಿ ಸದಾ ಕಾಲ ಹತ್ತಾರು ಬೋಟ್‌ಗಳು ಲಂಗರು ಹಾಕಿದ್ದು ಬಂದರಿನ ರೀತಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಹಂಗಾರಕಟ್ಟೆಯಿಂದ ಪಕ್ಕದ ದ್ವೀಪ ಪ್ರದೇಶ ಕೋಡಿಬೆಂಗ್ರೆಗೆ ಪುಟ್ಟ ಬಾರ್ಜ್‌ ವ್ಯವಸ್ಥೆ ಇದ್ದು ಅಳಿವೆಯಲ್ಲಿ ಪ್ರಯಾಣಿಸುವುದು ರೋಚಕ ಅನುಭವ ನೀಡುತ್ತದೆ. ಕೋಡಿಬೆಂಗ್ರೆ ತಲುಪುತ್ತಿದ್ದಂತೆ ಸ್ವಲ್ಪದೂರದಲ್ಲೇ ಬೀಚ್‌ ಇದೆ. ಇಲ್ಲಿನ ತೆಂಗು-ಕಂಗುಗಳ ಸುಂದರ ಪ್ರದೇಶದಲ್ಲಿ ಕುಳಿತು ಸಂಜೆಯ ಸೂರ್ಯಾಸ್ತಮಾನದ ಸೊಬಗು ಕಣ್ತುಂಬಿಕೊಳ್ಳುವುದು ಅದ್ಬುತವಾದ ಅನುಭವ ನೀಡುತ್ತದೆ ಹಾಗೂ ಅಕ್ಕ-ಪಕ್ಕದಲ್ಲಿ ಹಡಗು ತಯಾರಿಕಾ ಕೇಂದ್ರಗಳು ಕೂಡ ಇದೆ.

ಬೇಕಾದ ಸೌಕರ್ಯಗಳು
ಪ್ರಮುಖವಾಗಿ ಇಲ್ಲಿನ ಎರಡು ಮೀನುಗಾರಿಕೆ ಜಟ್ಟಿಗಳು ಪುಟ್ಟ ಬಂದರಾಗಿ ಅಭಿವೃದ್ಧಿಗೊಂಡು ಮೀನುಗಾರಿಕೆ ವ್ಯವಹಾರಗಳು ಆರಂಭಗೊಂಡರೆ ಪ್ರಾದೇಶಿಕ ಹಾಗೂ ಪ್ರವಾಸಿ ತಾಣವಾಗಿ ಬೆಳೆಯಲು ಅನುಕೂಲವಾಗುತ್ತದೆ. ಇಲ್ಲಿನ ಅಳಿವೆಯಲ್ಲಿ ಹೂಳು ತುಂಬಿರುವುದರಿಂದ ಬೋಟ್‌, ಬಾರ್ಜ್‌ಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಆದ್ದರಿಂದ ಅಳಿವೆಯ ಹೂಳೆತ್ತಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ. ಈ ಹಿಂದೆ ಇಲ್ಲಿಗೆ ದೊಡ್ಡ ಬಾರ್ಜ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರ್ವಹಣೆ ಕಷ್ಟವಾದ ಹಿನ್ನೆಲೆಯಲ್ಲಿ ಅದನ್ನು ವಾಪಾಸು ಪಡೆದು ಮಧ್ಯಮ ಗಾತ್ರದ ಬಾರ್ಜ್‌ ನೀಡುವುದಾಗಿ ಹೇಳಲಾಗಿತ್ತು. ಆದರೆ ಈಗ ಸಣ್ಣ ಬಾರ್ಜ್‌ ನೀಡಲಾಗಿದೆ. ಮುಂದೆ ಬಸ್ಸು, ಕಾರು ಮುಂತಾದವುಗಳನ್ನು ಸಾಗಿಸಬಲ್ಲ ಮಧ್ಯಮ ಗಾತ್ರದ ಬಾರ್ಜ್‌ ಇಲ್ಲಿಗೆ ಅಗತ್ಯವಿದೆ. ದ್ವೀಪದಂತಿರುವ ಕೋಡಿಬೆಂಗ್ರೆ ಬೀಚ್‌ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕಿದೆ. ಪ್ರವಾಸಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ವಿದ್ಯುತ್‌ ಸೌಲಭ್ಯ, ಪಾರ್ಕ್‌ಗಳ ಅಭಿವೃದ್ಧಿ ಅಗತ್ಯವಿದೆ. ಸರಕಾರದ ವತಿಯಿಂದ ಹೌಸ್‌ ಬೋಟ್‌ಗಳ ವ್ಯವಸ್ಥೆ ಮಾಡಿದರೆ ಇನ್ನೂ ಅನುಕೂಲವಾಗಲಿದೆ. ಮೂಲಸೌಕರ್ಯಗಳನ್ನು ಒದಗಿಸಿದಲ್ಲಿ ಹಂಗಾರಕಟ್ಟೆ-ಕೋಡಿಬೆಂಗ್ರೆ ಪ್ರದೇಶ ರಾಜ್ಯದ ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಇಲ್ಲಿಗೆ ಭೇಟಿ ನೀಡಿದ್ದು ಕೇರಳ, ಗೋವಾದ ಬೀಚ್‌ಗಳಿಗೆ ಭೇಟಿ ನೀಡಿದಷ್ಟು
ಖುಷಿ ನೀಡಿದೆ. ಅದರಲ್ಲೂ ಬಾರ್ಜ್‌ಯಾನ ರೋಚಕ ಅನುಭವ ನೀಡುತ್ತದೆ. ಇಷ್ಟು ಸುಂದರವಾದ ಪ್ರದೇಶದ ಕುರಿತು ಪ್ರವಾಸಿಗರಿಗೆ ಮಾಹಿತಿ ಇಲ್ಲದಿರುವುದು ಹಾಗೂ ಅಭಿವೃದ್ಧಿಗೊಳ್ಳದಿರುವುದು ಬೇಸರದ ಸಂಗತಿ.
  -ರೋಶನ್‌ ಶೆಟ್ಟಿ ಮಂಗಳೂರು, ಪ್ರವಾಸಿಗ

ಅಗತ್ಯವಿರುವ ಮೂಲ ಸೌಕರ್ಯಗಳು
– ಅಳಿವೆಯ ಹೊಳೆತ್ತಿ ಸುಗಮವಾಗಿ ಬಾರ್ಜ್‌, ಬೋಟ್‌ಗಳ ಸಂಚಾರಕ್ಕೆ ಅನುವು
– ಮಧ್ಯಮ ಗಾತ್ರದ ಬಾರ್ಜ್‌ ವ್ಯವಸ್ಥೆ
– ಕೋಡಿ ಬೆಂಗ್ರೆ ಬೀಚ್‌ನ್ನು ಪ್ರವಾಸಿತಾಣವಾಗಿ ಅಭಿವೃದ್ಧಿ
ಹಂಗಾರಕಟ್ಟೆ, ಕೋಡಿಬೆಂಗ್ರೆ ಜಟ್ಟಿಯನ್ನು ಸಾರ್ವಕಾಲಿಕ ಬಂದರಾಗಿ ಅಭಿವೃದ್ಧಿ
– ಸರಕಾರದ ವತಿಯಿಂದಲೇ ಹೌಸ್‌ ಬೋಟ್‌ ವ್ಯವಸ್ಥೆ
ಆಸನ, ವಿಹಾರ ತಾಣ, ವಿದ್ಯುತ್‌, ಪಾರ್ಕ್‌ ಅಭಿವೃದ್ಧಿ, ಮುಂತಾದ ವ್ಯವಸ್ಥೆ

Advertisement

 ರಾಜೇಶ್‌ ಗಾಣಿಗ ಅಚಾÉಡಿ

Advertisement

Udayavani is now on Telegram. Click here to join our channel and stay updated with the latest news.

Next