ಭಾರತದ ಕಿರೀಟ ಪ್ರಾಯವಾದ ಜಮ್ಮು-ಕಾಶ್ಮೀರ ತನ್ನ ಒಡಲಲ್ಲಿ ಸಾಕಷ್ಟು ಅದ್ಭುತಗಳನ್ನು ಹುದುಗಿಸಿಕೊಂಡಿದೆ. ಪ್ರಸಿದ್ಧ ಮೊಗಲ್ ಬಾದಶಾಹ್ ಜಹಾಂಗೀರ್‌ನು ಮೊದಲು ಹಿಮಾಲಯವನ್ನು ಸಂದರ್ಶಿಸಿದಾಗ ಇದರ ಅದ್ಭುತ ಸೌಂದರ್ಯಕ್ಕೆ ಮಾರುಹೋಗಿ ಇದನ್ನು ಭೂಮಿಯ ಮೇಲಿನ ಸ್ವರ್ಗವೆಂದೇ ಬಣ್ಣಿಸಿದ್ದನು. ಜಮ್ಮು – ಕಾಶ್ಮೀರದ ರಾಜಧಾನಿ ಬಾರಾಮುಲ್ಲಾ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಗಿರಿಧಾಮವೇ ಗುಲ್‌ಮಾರ್ಗ್. ಹೆಸರೇ ಹೇಳುವಂತೆ ಗುಲ್‌ಮಾರ್ಗ್ ಎಂದರೆ ಹೂಗಳಿಂದ ಕೂಡಿದ ಮಾರ್ಗ ಅಥವಾ ಪುಷ್ಪಗಳಿಂದ ಕೂಡಿದ ಪ್ರದೇಶವೆಂದು ಅರ್ಥ. ಒಂದು ಇತಿಹಾಸದ ಪ್ರಕಾರ ಹಿಂದು ದೇವತೆ ಗೌರೀಯಿಂದಾಗಿ ಈ ಪ್ರದೇಶಕ್ಕೆ ಗೌರೀಮಾರ್ಗವೆಂದಿದ್ದು ಕಾಲಾನಂತರದಲ್ಲಿ ಗುಲ್‌ಮಾರ್ಗ್ ಎಂದಾಗಿದೆ.
ಈ ಗುಲ್‌ಮಾರ್ಗ್ ತಾಣ ಇತ್ತಿಚೆಗೆ ಪ್ರವಾಸಿ ತಾಣವಾಗಿ ಅವಿಷ್ಕಾರವಾದ ಗಿರಿಧಾಮವಾಗಿದೆ. ಸುಮಧುರವಾದ ವಾತಾವರಣ, ಅತ್ಯಾಕರ್ಷಕವಾದ ಭೂಪ್ರದೇಶ, ಹಸಿರಿನಿಂದ ಕೂಡಿದ ಉದ್ಯಾನವನದಲ್ಲಿ ಅರಳಿ ನಿಂತ ಹೂಗಳು, ದಟ್ಟವಾದ ಪೈನ್ ಮರಗಳ ಕಾಡು ಹಾಗೂ ಅತ್ಯಾಕರ್ಷಕವಾದ ಕೆರೆಗಳು ಈ ಗುಲ್‌ಮಾರ್ಗ್‌ನ ಪ್ರಮುಖ ಆಕರ್ಷಣೆಗಳಾಗಿವೆ. ಈ ಗಿರಿಧಾಮದ ಇನ್ನೊಂದು ಆಕರ್ಷಣೆಯೆಂದರೆ ಇಲ್ಲಿರುವ ನಿಂಗ್ಲೆ ನಾಲಾ. ಇದೊಂದು ಅತ್ಯಾಕರ್ಷಕ ತೊರೆಯಾಗಿದ್ದು, ಹಿಮಶೃಂಗದಿಂದ ಕರಗಿದ ನೀರು ತೊರೆಯಾಗಿ ಹರಿದು ಸುಪೋರೆ ಸಮೀಪ ಝೀಲಮ್ ನದಿಯನ್ನು ಸೇರಿಕೊಳ್ಳುತ್ತದೆ.
ಗುಲ್‌ಮಾರ್ಗ್ ಪ್ರದೇಶದಲ್ಲಿ ಇನ್ನೂ ಎರಡು ಪ್ರಸಿದ್ಧ ತೊರೆಗಳಿವೆ. ಅವುಗಳೆಂದರೆ ವೇರಿನಾಗ್ ಹಾಗೂ ಫಿರೋಜು³ರ್ ನಾಲಾಗಳು. ಈ ವೇರಿನಾಗ್ ತೊರೆಯಲ್ಲಿ ಹರಿಯುವ ನೀರು ಅತ್ಯಂತ ಶುದ್ಧ ಹಾಗೂ ಸ್ಪತ್ಛ ಮತ್ತು ಪವಿತ್ರವಾಗಿದ್ದು ಇದರಲ್ಲಿ ಔಷಧೀಯ ಗುಣಗಳನ್ನು ಹೊಂದಿದೆ ಎಂಬ ಗಾಢವಾದ ನಂಬಿಕೆ ಇಲ್ಲಿನ ಜನರದ್ದು. ಇಲ್ಲಿರುವ ಅಲ್‌ಪಥೇರ್ ಕೆರೆ ಕೂಡ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.
ಗುಲ್‌ಮಾರ್ಗ್‌ನ ಇನ್ನೊಂದು ಪ್ರವಾಸಿ ಆಕರ್ಷಣೆಯೆಂದರೆ ಇಲ್ಲಿರುವ ಗೋಂಡೋಲಾ ರೈಡ್. ಇಲ್ಲಿ ಕೇಬಲ್ ಕಾರ್‌ಗಳ ವ್ಯವಸ್ಥೆ ಇದೆ. ಪ್ರವಾಸಿಗರು ಐದು ಕಿ. ಮೀ. ನಷ್ಟು ದೂರಕ್ಕೆ ಕೇಬಲ್ ಕಾರ್ ಮೂಲಕವೇ ಸಾಗಬಹುದು. ಇದು ಗುಲ್‌ಮಾರ್ಗ್‌ದಿಂದ ಕೊಂಗದೂರ್‌ಗೆ ತಲುಪಲು ಹಾಗೂ ಕೊಂಗದೂರ್‌ನಿಂದ ಅಪರ್ವತ ತಲುಪುವ ಮಾರ್ಗವಾಗಿದೆ.
ಕೊಂಗದೂರಿನ ಗೋಂಡೋಲಾ ಸ್ಟೇಷನ್ 3099 ಮೀಟರ್ ಎತ್ತರದಲ್ಲಿ ಇದೆ. ಇನ್ನು ಇಲ್ಲಿರುವ ಇತರೆ ಪ್ರವಾಸಿ ತಾಣಗಳೆಂದರೆ ಬಾಬಾ ರಿಷಿ ಮಂದಿರ, ಫಿಶಿಂಗ್ ಪಾಂಡ್, ಬನಿಬಲ್ ನಾಗ್, ಕೋವತೂರು ನಾಗ್ ಹಾಗೂ ಸೋನಾಮಾರ್ಗ್. ಇವೆಲ್ಲ ಒಂದು ದಿನದ ಪಿಕ್‌ನಿಕ್ ಮತ್ತು ಕ್ಯಾಂಪೇನ್‌ಗೆ ಹೇಳಿ ಮಾಡಿಸಿದ ತಾಣಗಳಾಗಿವೆ.
ತಲುಪುವ ಮಾರ್ಗ : ಗುಲ್ಮಾರ್ಗ್ ಗಿರಿಧಾಮವನ್ನು ತಲುಪಲು ದೇಶದ ಪ್ರಮುಖ ನಗರಗಳಿಂದ ಸಾರಿಗೆ, ವಿಮಾನ, ರೈಲುಗಳ ವ್ಯವಸ್ಥೆ ಕೂಡ ಇದೆ. ಗುಲ್‌ಮಾರ್ಗ್‌ದ ಹತ್ತಿರದ ವಿಮಾನ ನಿಲ್ದಾಣ ಶ್ರೀನಗರ. ಅಲ್ಲಿಂದ ಟ್ಯಾಕ್ಸಿ ಅಥವಾ ಕ್ಯಾಬ್‌ಗಳ ಮೂಲಕ ಗುಲ್ಮಾರ್ಗ್ ತಲುಪಬಹುದು.
– ಆಶಾ ಎಸ್. ಕುಲಕರ್ಣಿ