Advertisement

Tourist place: ಬಿಸಿಲೂರಲ್ಲೊಂದು ಮನಸೆಳೆಯುವ ತಾಣ

03:30 PM Dec 17, 2023 | Team Udayavani |

ರಾಯಲಸೀಮೆಯ ಹೆಚ್ಚಿನ ಭಾಗಗಳಲ್ಲಿ ನರಸಿಂಹ ಕ್ಷೇತ್ರಗಳಗೆ ಹೆಚ್ಚಿನ ಮಹತ್ವವಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನ ಧರ್ಮಾಪುರದಲ್ಲೂ ಅಂಥದ್ದೇ ಒಂದು ನರಸಿಂಹಸ್ವಾಮಿಯ ಉದ್ಭವ ರೂಪವು ಗುಹಾಂತರ್ಗತ­ವಾಗಿದೆ. ಅದುವೇ ಶ್ರೀಗಂಡಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ. ಸ್ವಾಮಿಮಲೈ ಅರಣ್ಯ ವಿಭಾಗದಲ್ಲಿರುವ ಈ ದೇವಾಲಯವು ಬಹಳ ಪುರಾತನವಾಗಿದ್ದು ಚಾಲುಕ್ಯ, ವಿಜಯನಗರ ರಾಜಮನೆತನಗಳು ಹಾಗೂ ನಾಯಕ ಪಾಳೇಗಾರರು, ಘೋರ್ಪಡೆ ರಾಜಮನೆತನಗಳು ಈ ದೇವಾಲಯಕ್ಕೆ ಪೂಜೆ ಸಲ್ಲಿಸಿದ್ದಾರೆ. ಪ್ರಸ್ತುತ ಈ ದೇವಾಲಯದ ಸಮಸ್ತ ಉಸ್ತುವಾರಿಯನ್ನು ಘೋರ್ಪಡೆ ರಾಜಮನೆತನ ನೋಡಿಕೊಳ್ಳುತ್ತಿದೆ.

Advertisement

ತಲುಪುವುದು ಹೇಗೆ?:

ಬಳ್ಳಾರಿ ಜಿಲ್ಲೆಯ ಸಂಡೂರಿನಿಂದ ಕೂಡ್ಲಿಗಿಗೆ ಹೋಗುವ ರಸ್ತೆಯಲ್ಲಿ ಸುಮಾರು 4.5 ಕಿ.ಮೀ. ಸಾಗಿದರೆ ಎಡಕ್ಕೆ ವ್ಯೂ ಪಾಯಿಂಟ್‌ ರೋಡ್‌ ಕಾಣುತ್ತದೆ. ಅದರಲ್ಲಿ ಹೋದರೆ ಧರ್ಮಾಪುರದಲ್ಲಿರುವ ಶ್ರೀಗಂಡಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನವಿರುವ ಬೆಟ್ಟದ ಬುಡವನ್ನು ತಲುಪುತ್ತದೆ. ದೇವಸ್ಥಾನದ ಹಿಂಭಾಗದಲ್ಲಿರುವ ಹೆಬ್ಬಂಡೆಯ ತುದಿಯನ್ನು ಸುಮಾರು 50 ಮೆಟ್ಟಿಲುಗಳನ್ನೇರಿ ತಲುಪಬಹುದು. ಆಗ ದೇವಳದ ಪ್ರವೇಶ ದ್ವಾರ ಗೋಪುರ ಎದುರಾಗುತ್ತದೆ. ಒಳ ಸಾಗಿದಾಗ ಬೃಹದಾಕಾರದ ಬೆಟ್ಟದಂಚಿನಲ್ಲಿರುವ ದೇವಾಲಯ ಕಾಣುತ್ತದೆ. ಸಂಪೂರ್ಣ ಶಿಲಾಮಯ ಗರ್ಭಗುಡಿಯೊಳಗೆ ಸ್ವಯಂಭೂ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯ ದರ್ಶನವಾಗುತ್ತದೆ.

ನಿಸರ್ಗದ ನಡುವೆ ಕೂತ ನರಸಿಂಹ:

ಗಂಡಿ ಅಂದರೆ ತೆಲುಗು ಭಾಷೆಯಲ್ಲಿ ಕಂಡಿ/ಸಂದಿ ಎಂದು ಅರ್ಥ. ದೇವಳವಿರುವ ಬೆಟ್ಟದ ಕೆಳಭಾಗದಲ್ಲಿ ನಾರಿಹಳ್ಳವು ಎರಡು ಹೆಬ್ಬಂಡೆಗಳ ನಡುವೆ ಹರಿಯುತ್ತದೆ. ಧುಮುಕು ಜಲಪಾತದ ನೀರು ಹಾಗೂ ಸಂಡೂರಿನ ಬೆಟ್ಟಗಳ ವಿವಿಧ ತೊರೆಗಳು ಸೇರುವ ಈ ಹರಿವಿಗೆ ಮೊದಲು ನಾರಾಯಣ ನದಿ ಎಂದು ಕರೆಯುತ್ತಿದ್ದರಂತೆ. ಅದು ಈಗ ಜನಸಾಮಾನ್ಯರ ಬಾಯಲ್ಲಿ ನಾರಿ ಹಳ್ಳವಾಗಿದೆ. ನರಸಿಂಹಸ್ವಾಮಿ ದೇಗುಲದ ಪ್ರದಕ್ಷಿಣಾ ಪಥವು ಬಹಳ ವಿಶೇಷವಾಗಿದೆ. ಸುಮಾರು 30 ಕಲ್ಲಿನ ಮೆಟ್ಟಿಲುಗಳನ್ನು ಹತ್ತಿ ದೇವಳವನ್ನು ಬಳಸಿ ಇನ್ನೊಂದು ಬದಿಯಿಂದ ಮೆಟ್ಟಿಲಿಳಿದು ಬರುವಾಗ ಕಾವಿಬಣ್ಣದ ಶಿಖರವು ಪ್ರಕೃತಿಯ ನಡುವೆ ಸುಂದರವಾಗಿ ಕಾಣುತ್ತದೆ. ದೇವಸ್ಥಾನದ ಪರಿಸರ ಸ್ವತ್ಛವಾಗಿದೆ. ಧ್ವಜಸ್ತಂಭದ ತಲದಲ್ಲಿ ನಮಸ್ಕಾರ ಭಂಗಿಯ ಗರುಡನ ಮೂರ್ತಿಯಿದೆ. ಬೆಟ್ಟದ ಕೆಳಗೆ ಆಂಜನೇಯನ ಪುಟ್ಟ ಗುಡಿ ಇದೆ. ವಾಹನ ನಿಲುಗಡೆಯ ಹತ್ತಿರದ ದಾರಿಯಲ್ಲಿ ಹೋದರೆ ನಾರಿಹಳ್ಳದ ಕಂದಕವನ್ನು ನೋಡಬಹುದು. ಗಣಿಗಾರಿಕೆಯ ಕಾರಣ ಇದರಲ್ಲಿ ಕೆನ್ನೀರು ಹರಿಯುತ್ತಿರುತ್ತದೆ. ಉಳಿದಂತೆ ಒಳ್ಳೆಯ ದೃಶ್ಯವಿದೆ.

Advertisement

ಪೌರಾಣಿಕ ಕಥನ:

ವಿದ್ವಾನ್‌ ಶ್ರೀಬಾಲಚಂದ್ರ ಶಾಸ್ತ್ರಿಗಳು ರಚಿಸಿದ “ಶ್ರೀಸ್ಕಂದ ಕ್ಷೇತ್ರ ಮಹಾತ್ಮೆ’ ಕೃತಿಯಲ್ಲಿ, ವೈಕುಂಠಪತಿ ನಾರಾಯಣನು ಶತ್ರುಸಂಹಾರಾರ್ಥವಾಗಿ ಒಂದು ವಿಶೇಷ ಆಯುಧವನ್ನು ಅನುಗ್ರಹಿಸಬೇಕೆಂದು ಚಕ್ರತೀರ್ಥದಲ್ಲಿ ಶಿವನ ಕುರಿತು ತಪಸ್ಸು ಮಾಡಿದಾಗ ಪರಮೇಶ್ವರನು ಅವನಿಗೆ ಸುದರ್ಶನ ಚಕ್ರವನ್ನು ನೀಡಿ ಆ ಸ್ಥಳವನ್ನು ನಾರಾಯಣತೀರ್ಥವೆಂದು ಹೆಸರಿಸುತ್ತಾನೆ. ಈ ನಾರಾಯಣ ತೀರ್ಥದ ಜಲವು ಸ್ಕಂದಪುರದ ಅಂದರೆ ಸಂಡೂರಿನ ದಕ್ಷಿಣಕ್ಕೆ ಹರಿದು ನಾರಾಯಣ ನದಿಯಾಯಿತು.

ಗಂಡಿ ಕ್ಷೇತ್ರದ ಸ್ಥಳ ಪುರಾಣದ ಪ್ರಕಾರ, ಅಗಸ್ತ್ಯ ಮಹರ್ಷಿಗಳು ಇಲ್ಲಿ ತಪಸ್ಸು ಮಾಡುತ್ತಿದ್ದರು. ಆಗ ಒಂದು ದೊಡ್ಡ ಜ್ವಾಲೆಯ ಶಾಖವು ಅವರ ಶಿಷ್ಯರನ್ನು ಮತ್ತು ಈ ಪ್ರದೇಶದ ಜನರನ್ನು, ಪ್ರಾಣಿಗಳನ್ನು ಭಯ ಭೀತಗೊಳಿಸಿತು. ಅಗಸ್ತ್ಯರು ತಮ್ಮ ದಿವ್ಯ ದೃಷ್ಟಿಯಿಂದ ಆ ಜ್ವಾಲೆಯ ಮೂಲವನ್ನು ಅರಸಿ ಬೆಟ್ಟದಲ್ಲಿರುವ ಈ ಗುಹೆಗೆ ಬಂದರು. ಗುಹೆಯೊಳಗೆ ಪ್ರಕಾಶಮಾನವಾದ ಬೆಳಕು ಮತ್ತು ಶಾಖವಿತ್ತು. ಅವರು ಒಳಹೋಗಿ ಪ್ರಾರ್ಥನೆ ಸಲ್ಲಿಸಿದಾಗ ಸಂತುಷ್ಟರಾದ ನರಸಿಂಹದೇವರು ದರ್ಶನ ನೀಡಿದರು. ಭಕ್ತರ ಅನುಕೂಲಕ್ಕಾಗಿ ಉಗ್ರ ಸ್ವರೂಪದ ಬದಲಿಗೆ ಶಾಂತ ಸ್ವರೂಪದಲ್ಲಿ ನೆಲೆಸಬೇಕೆಂದು ಅಗಸ್ತ್ಯರು ಭಗವಂತನಲ್ಲಿ ವಿನಂತಿಸಿದರು. ಆದರೆ ದೇವತೆಗಳು ನರಸಿಂಹದೇವರನ್ನು ದುಷ್ಟ ಶಿಕ್ಷಕ ಉಗ್ರ ಸ್ವರೂಪದಲ್ಲೇ ಇರಬೇಕೆಂದು ಪ್ರಾರ್ಥಿಸಿದರು. ಇಬ್ಬರನ್ನೂ ತೃಪ್ತಿಪಡಿಸಲು ಭಗವಂತನು ಪೀಠದ ಕೆಳಗೆ ಉಗ್ರರೂಪದಲ್ಲಿ ಮತ್ತು ಮೇಲ್ಭಾಗದಲ್ಲಿ ಶಾಂತ ಸ್ವರೂಪದಲ್ಲಿ ವ್ಯಕ್ತನಾದನು.

ಜಾತ್ರಾ ಮಹೋತ್ಸವ:

ಗಂಡಿ ನರಸಿಂಹಸ್ವಾಮಿಯ ವಾರ್ಷಿಕ ರಥೋತ್ಸವವು ಪ್ರತಿ ವರ್ಷ ಹೋಳಿಹುಣ್ಣಿಮೆಯ ದಿನ ಜರುಗುತ್ತದೆ. ಈ ಸಂದರ್ಭದಲ್ಲಿ ಇಲ್ಲಿ “ಬ್ಯಾಟಿಮರದ ಪದ್ಧತಿ’ ಎಂಬ ವಿಶೇಷ ಆಚರಣೆ ನಡೆಯುತ್ತದೆ. ಜಾತ್ರೆಯ ಮೊದಲ ದಿನದ ಸಂಪ್ರದಾಯದಂತೆ ದೀಕ್ಷಾಬದ್ಧ ಬೇಟೆಗಾರ ಮನೆತನದ ವ್ಯಕ್ತಿಯೊಬ್ಬ ಹತ್ತಿರದ ಕಾಡಿಗೆ ಹೋಗಿ ಒಂದು ಮರವನ್ನು ಮುಟ್ಟುತ್ತಾನೆ. ದೇವರ ವಿಶೇಷ ಅನುಗ್ರಹದ ಕಾರಣ ಕೇವಲ 15 – 20 ನಿಮಿಷಗಳಲ್ಲಿ ಆ ಮರವನ್ನು ಬುಡಸಮೇತ ಕೀಳಲು ಸಾಧ್ಯವಾಗುತ್ತದೆ. ಆಗ ದೀಕ್ಷೆ ಹಿಡಿದ ವ್ಯಕ್ತಿ ಮೂರ್ಛೆ ಹೋಗುತ್ತಾನೆ. ಮೂಛಿìತ ಬೇಟೆಗಾರನನ್ನು ಆ ಮರದ ಮೇಲೆ ಮಲಗಿಸಿ ದೇವಸ್ಥಾನಕ್ಕೆ ಹೊತ್ತು ತರುತ್ತಾರೆ. ಅವನ ಮೇಲೆ ದೇವರ ತೀರ್ಥ ಪ್ರೋಕ್ಷಣೆ ಮಾಡಿದಾಗ ಅವನು ಎಚ್ಚರವಾಗುತ್ತಾನೆ.

ಗಾಂಧೀಜಿಯ ಮನ ಸೆಳೆದಿತ್ತು‌:

1934 ರಲ್ಲಿ ಮಹಾತ್ಮ ಗಾಂಧೀಜಿಯವರು ಸಂಡೂರಿಗೆ ಭೇಟಿ ನೀಡಿದಾಗ ಅಲ್ಲಿಯ ಪ್ರಾಕೃತಿಕ ಸೊಬಗನ್ನು ವೀಕ್ಷಿಸಿ ಸಂತಸದಿಂದ “ಸೀ ಸಂರ್ಡೂ ಇನ್‌ ಸೆಪ್ಟೆಂಬರ್‌’ ಎಂದು ಉಲ್ಲೇಖೀಸಿದರು. ಅದರ ಜ್ಞಾಪಕಾರ್ಥವಾಗಿ ಈ ವೀಕ್ಷಣಾ ಸ್ಥಳವನ್ನು see sandur in september view point ಎಂದು ಹೆಸರಿಸಿದ್ದಾರೆ. ಅರಣ್ಯ ಇಲಾಖೆಯವರು ಸಂಡೂರು ಅನ್ವೇಷಣೆ ಹೆಸರಿನ ನಾಲ್ಕು ಚಾರಣ ಯೋಜನೆಗಳನ್ನು ಪ್ರಾರಂಭಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡತೊಡಗಿದ್ದಾರೆ. ಭೀಮತೀರ್ಥ ದೇವಸ್ಥಾನದ ಹತ್ತಿರ ಪ್ರಾರಂಭವಾಗುವ ನಾಲ್ಕು ಕಿ. ಮೀ ಚಾರಣ ಪಥವು ನಾರಿಹಳ್ಳ ವ್ಯೂ ಪಾಯಿಂಟ್‌ನಲ್ಲಿ ಮುಕ್ತಾಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next