Advertisement
ಈ ಸರಳ ಉದ್ದೇಶ ಇಟ್ಟುಕೊಂಡು ಪ್ರಕೃತಿಯನ್ನು ನೋಡುವ, ಕೇಳುವ ಉದ್ದೇಶದಿಂದ ಆರು ವರ್ಷಗಳ ಹಿಂದೆ ಚಾರಣ, ಪರಿಸರ ನಡಿಗೆಯನ್ನು ಪ್ರಾರಂಭಿಸಿದೆವು. ಸಮಯ ಹೊಂದಿಸಿಕೊಂಡು ಆಗಾಗ್ಗೆ ಸುತ್ತಮುತ್ತಲಿನ ಪರಿಸರದಲ್ಲಿ ನಡೆದಾಡಿ ಅಲ್ಲಿನ ವಿಶಿಷ್ಟ ಸಸ್ಯವರ್ಗ, ಪ್ರಾಣಿ, ಪಕ್ಷಿ, ಕೀಟಗಳನ್ನು ಅವಲೋಕಿಸುವ, ಅವುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಚರ್ಚಿಸುವ ಚಟುವಟಿಕೆಯಲ್ಲಿ ತೊಡಗಿಸಿಕೊಂಡೆವು. “ನಮ್ಮ ಸುತ್ತಮುತ್ತಲಿನ ಬೆಟ್ಟಗುಡ್ಡ, ಸೂರ್ಯೋದಯ, ಸೂರ್ಯಾಸ್ತ, ಜೀವ ವೈವಿಧ್ಯತೆಯನ್ನು ನೋಡಿ ಸಂತಸಗೊಳ್ಳದೆ ದೂರದ ಪ್ರವಾಸಕ್ಕೆ ಹೋಗುವುದು ವ್ಯರ್ಥ’ ಎಂಬ ತೇಜಸ್ವಿ ಯವರ ಮಾತಿನಲ್ಲಿ ನಮಗೆ ಅಚಲ ನಂಬಿಕೆ. ಸುತ್ತಮುತ್ತಲಿನ ಪರಿಸರದಲ್ಲಿ ಅನೇಕ ಕೌತುಕಗಳಿವೆ. ಚಾರಣದಲ್ಲಿ ಅವುಗಳ ಪರಿಚಯವಾಗುತ್ತದೆ ಎಂಬುದು ನಮ್ಮ ತಂಡದ ನಿಲುವು.
Related Articles
Advertisement
ಬೆಂಗಳೂರು -ಮೈಸೂರು ಹೆದ್ದಾರಿಯಿಂದ ಬಸವನಪುರ ಗ್ರಾಮದ ಮೂಲಕ ಆಚೆ ಬಂದು, ಬೆಟ್ಟದ ತಪ್ಪಲಿನಲ್ಲಿ ಇದ್ದ ಸಣ್ಣ ಮುತ್ತುರಾಯ ಸ್ವಾಮಿ ದೇವಾಲಯದ ಬಳಿ ನಮ್ಮ ತಂಡ ಸೇರಿತು. ಮರಗಿಡ, ಪೊದೆಗಳಲ್ಲಿ ಪಕ್ಷಿಗಳ ನಿನಾದ ಕೇಳಿಸುತ್ತಿತ್ತು. ವಾತಾವರಣ ತಂಪಾಗಿ, ಮುದವಾಗಿ ಇತ್ತು. ಚಾರಣ ಮಾಡುವ ಸಮಯದಲ್ಲಿ ಹೆಚ್ಚು ಕೇಳುವ, ನೋಡುವ ಕಡೆ ಗಮನ ನೀಡಿ, ಪರಸ್ಪರ ಸಹಕಾರ ಕೊಟ್ಟುಕೊಂಡು ಬೆಟ್ಟ ಹತ್ತೋಣ. ಪ್ಲಾಸ್ಟಿಕ್ ಬಳಕೆ ಬೇಡ. ಒಂದು ವೇಳೆ ಬಳಸಿದರೂ ಸಣ್ಣ ಚಾಕೋಲೇಟ್ ಕವರ್ ಆದರೂ ಸಹ ನಮ್ಮ ಬಳಿ ಇಟ್ಟುಕೊಂಡು ಮನೆಗೆ ತೆಗೆದುಕೊಂಡು ಹೋಗಿ ಸೂಕ್ತವಾಗಿ ವಿಲೇವಾರಿ ಮಾಡೋಣ ಎಂಬ ಎಂದಿನ ನಮ್ಮ ಸ್ವಪಾಲನೆಯನ್ನು ಹೇಳಿಕೊಂಡೆವು. ಕಾಲು ಹಾದಿಯಲ್ಲಿ ನಡೆಯುತ್ತಾ ಬೆಟ್ಟ ಹತ್ತಲು ಸುಮಾರು ನೂರು ಹೆಜ್ಜೆ ಮುಂದೆ ಹೋದಾಗ ತಣ್ಣನೆಯ ಮಳೆಯ ಹನಿಗಳ ಸಿಂಚನ ನಮಗೆ ಸ್ವಾಗತ ಕೋರಿತು.
ಹೂ ಗಿಡ ಬಳ್ಳಿ…
ಹಿತವಾದ ವಾತಾವರಣದಲ್ಲಿ ಹೆಜ್ಜೆ ಹಾಕಿ ಸೂಕ್ಷ್ಮವಾಗಿ ನೋಡುತ್ತಾ ಹೋದಾಗ ವಿವಿಧ ಬಗೆಯ ಜೇಡ, ಚಿಟ್ಟೆ, ಪತಂಗ, ಮಿಡತೆಯಂತಹ ಕೀಟಗಳನ್ನು ವೀಕ್ಷಿಸಿ, ತಂಡದಲ್ಲಿನ ಮಕ್ಕಳಿಗೆ ಅವನ್ನು ಪರಿಚಯಿಸುತ್ತಾ, ಪಕ್ಷಿಗಳು, ಅವುಗಳ ಮಧುರ ಗಾನವನ್ನು ಆಲಿಸುತ್ತಾ ಸಾಗಿದೆವು. ಅಷ್ಟರಲ್ಲಿ ಮರದಿಂದ ಜಿಗಿದ ಮುಸುವ ಕೋತಿ ನಮ್ಮನ್ನು ಆಕರ್ಷಿಸಿತು. ಚಾರಣದ ಹಾದಿಯಲ್ಲಿ ವಿವಿಧ ಬಗೆಯ ಹೂ ಬಿಡುವ ಕುರುಚಲು ಗಿಡಗಳು ಹೆಚ್ಚಾಗಿ ಕಂಡುಬಂದಿದ್ದು ವಿಶೇಷ. ತಂಗಾಳಿಗೆ ಮೈಯೊಡ್ಡಿ ಆಯಾಸ ನಿವಾರಿಸಿಕೊಂಡು ಹಂದಿಗೊಂದಿ ಬೆಟ್ಟದ ತುದಿ ತಲುಪಿದಾಗ ಮೋಡ ಕರಗಿದ ನೀಲಿಯಾಕಾಶ, ಎಲ್ಲ ದಿಕ್ಕುಗಳಲ್ಲಿ ಹರಡಿದ ಬೆಟ್ಟಗಳು, ಹಸಿರ ವನರಾಶಿ ಮನಕೆ ಮುದ ನೀಡಿತು. ಈ ಚಾರಣದ ಜೊತೆಗೆ ನಾವು ಚರ್ಚೆಗೆ ಪೂರ್ಣಚಂದ್ರ ತೇಜಸ್ವಿಯವರ “ಕಾಡಿನ ಕಥೆಗಳು’ ಪುಸ್ತಕವನ್ನು ಆರಿಸಿಕೊಂಡಿದ್ದೆವು. ಕಥೆಗಳ ನಮ್ಮ ಓದಿನ ಅನುಭವವನ್ನು ನಾವು ಹಂಚಿಕೊಂಡಂತೆ, ತಂಡದಲ್ಲಿದ್ದ ಮಕ್ಕಳು ಕುತೂಹಲದಿಂದ ಕೇಳಿಕೊಂಡು ಆ ದಿನದ ಚಾರಣದ ಅನುಭವವನ್ನು ತಾವೂ ಹಂಚಿಕೊಂಡರು. ತಂದಿದ್ದ ತಿಂಡಿಗಳನ್ನು ಹಂಚಿ ತಿಂದೆವು. ಈ ಚಾರಣ, ಮರೆಯಲಾರದ ಒಂದು ತಾಜಾ ಅನುಭವವನ್ನು ಕಟ್ಟಿಕೊಟ್ಟಿತು.
ಬೆಟ್ಟದ ಮೇಲಿಂದ ಬೆಟ್ಟಗಳೇ ಕಾಣುತ್ತವೆ!:
ರಾಮನಗರದ ರಣಹದ್ದು ಧಾಮವಾದ ರಾಮದೇವರ ಬೆಟ್ಟ, ಮಾಗಡಿಯ ಏಕಶಿಲಾ ಬೆಟ್ಟವಾದ ಸಾವನದುರ್ಗ, ಅವ್ವೆರಹಳ್ಳಿಯ ರೇವಣಸಿದ್ಧೇಶ್ವರ, ಕೂನಗಲ್ಲು ಬೆಟ್ಟ, ಕನಕಪುರದ ನರಸಿಂಹಸ್ವಾಮಿ ಬೆಟ್ಟ ಹೀಗೆ ಅನೇಕ ಬೆಟ್ಟಗಳನ್ನು ಹಂದಿಗೊಂದಿ ಬೆಟ್ಟದಲ್ಲಿ ನಿಂತು ನೋಡಬಹುದಾಗಿದೆ. ಹಂದಿಗೊಂದಿ ಬೆಟ್ಟದ ಮೇಲೆ ನಿಂತು ಯಾವ ದಿಕ್ಕಿಗೆ ನೋಡಿದರೂ ಬೆಟ್ಟಗಳೇ ಕಾಣಿಸುವುದು ವಿಶೇಷ.
ಹಂದಿಗಳು ಹೆಚ್ಚಾಗಿ ಇದ್ದ ಕಾರಣದಿಂದ…
ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂದಿಗಳು ಕಂಡುಬರುತ್ತಿದ್ದುದರಿಂದ ಇದನ್ನು ಹಂದಿಗೊಂದಿ ಬೆಟ್ಟ ಎನ್ನಲಾಗಿದೆ. ಕಾಡು ಹಂದಿಗಳು, ಮುಳ್ಳು ಹಂದಿಗಳು ಇಲ್ಲಿ ತುಂಬಾ ಇದ್ದವು. ಬಾಲ್ಯದಲ್ಲಿ ಅವನ್ನು ನೋಡಿದ್ದೆ ಎಂದವರು ಹಂದಿಗೊಂದಿ ತಪ್ಪಲಿನ ಗೋಪಾಲಪುರದ ಪ್ರಶಾಂತ್.
-ಚಿತ್ರ- ಲೇಖನ: ರಘುಕುಮಾರ್. ಸಿ. ಚನ್ನಪಟ್ಟಣ