ಶಿವಮೊಗ್ಗ: ಕೊಡಚಾದ್ರಿ ಹಿಡ್ಲಮನೆ ಜಲಪಾತ ನೋಡಲು ಬಂದ ಪ್ರವಾಸಿಗನೋರ್ವ ಪ್ರಪಾತದಿಂದ 80 ಅಡಿಗಳ ಮೇಲೆ ಸಿಲುಕಿಕೊಂಡು ಆತಂಕಕ್ಕೆ ಕಾರಣವಾದ ಘಟನೆ ನಡೆದಿದೆ.
ಅಗ್ನಿಶಾಮಕ ದಳ, ವನ್ಯಜೀವಿ ಅರಣ್ಯ ಸಿಬ್ಬಂದಿಗಳು ಮತ್ತು ಸ್ಥಳೀಯರು ಸೇರಿದಂತೆ 50ಕ್ಕೂ ಹೆಚ್ಚು ಜನರ ತಂಡ ಸತತ ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಪ್ರವಾಸಿಗನನ್ನು ಸುರಕ್ಷಿತವಾಗಿ ಕೆಳಗಿಳಿಸಿ ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ಮೂಲಕ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಅಮೋಘ (29) ಎಂಬ ಯುವಕ ಅಪಾಯಕ್ಕೆ ಸಿಲುಕಿ ನಂತರ ಅಪಾಯದಿಂದ ಪಾರಾದ ವ್ಯಕ್ತಿ.
ನಡೆದ ಘಟನೆ ಏನು?
ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಮತ್ತು ರೂಮೇಟ್ ಆಗಿರುವ ಹಾಸನ ಮೂಲದ ಅಮೋಘ, ತಮಿಳುನಾಡು ಮೂಲಕ ಸಂಜೀವ್, ಜೈಪುರ ಮೂಲದ ಮಧು ಎಂಬುವವರು ಕೊಡಚಾದ್ರಿ ಪ್ರವಾಸಕ್ಕೆ ಶನಿವಾರ ರಾತ್ರಿ ಬಂದಿದ್ದು ಹೋಂ ಸ್ಟೇಯಲ್ಲಿ ತಂಗಿದ್ದರು. ಬೆಳಿಗ್ಗೆ ಜೀಪ್‍ನಲ್ಲಿ ಕೊಡಚಾದ್ರಿ ಗಿರಿ ಹತ್ತಿದ ಮೂವರು ನಂತರ ನೇರವಾಗಿ ಹಿಡ್ಲಮನೆ ಜಲಪಾತಕ್ಕೆ ತೆರಳಿದ್ದರು. ಮೂವರು ಫಾಲ್ಸ್ ಬುಡದಿಂದ ಮೇಲ್ಭಾಗಕ್ಕೆ ತೆರಳಿದ್ದರು. ಆದರೆ ಫಾಲ್ಸ್ ನ ಪಕ್ಕದಲ್ಲೇ ಕೆಳಗಿಳಿಯಲು ಹೋದ ಅಮೋಘ ಅಲ್ಲೆ ಸಿಲುಕಿಕೊಂಡಿದ್ದಾನೆ. ಇನ್ನಿಬ್ಬರು ಬೇರೆ ಮಾರ್ಗದಿಂದ ಕೆಳಗಿಳಿದಿದ್ದಾರೆ.
2 ಗಂಟೆ ಒಂದೇ ಕಾಲಿನಲ್ಲಿ ನಿಂತ:
ಮೇಲೇರಲು ಆಗದೆ, ಕೆಳಗಿಳಿಯಲು ಆಗದೆ ಮಧ್ಯದಲ್ಲಿ ಸಿಕ್ಕಿಬಿದ್ದ ಅಮೋಘ ಅಪಾಯಕ್ಕೆ ತುತ್ತಾಗಿದ್ದ. ಅಲ್ಲದೆ ಸಿಕ್ಕ ಕಲ್ಲಿನ ಮೇಲೆ ಒಂದೇ ಕಾಲಿನ ಮೇಲೆ ನಿಂತಿದ್ದನು. ಅಮೋಘ ಅಪಾಯದಲ್ಲಿ ಸಿಲುಕಿದ್ದನ್ನು ನೋಡಿ ಉಳಿದ ಇಬ್ಬರು ಕೂಗಿಕೊಂಡಿದ್ದಾರೆ. ಅಗ ಕೆಳಗಿದ್ದ ಕೆಲ ಪ್ರವಾಸಿಗರು, ಸ್ಥಳೀಯರು ಧಾವಿಸಿದ್ದಾರೆ. ಆದರೆ ಅಪಾಯದಿಂದ ತಪ್ಪಿಸಲು ಸಾಧ್ಯವಾಗಿಲ್ಲ. ಕೂಡಲೇ ಅಗ್ನಿಶಾಮಕ ದಳ ಮತ್ತು ವನ್ಯಜೀವಿ ಇಲಾಖೆಗೆ ಮಾಹಿತಿ ಕರೆಸಲಾಯಿತು. ಸ್ಥಳೀಯರ ಸಹಕಾರದಿಂದ ಹಗ್ಗವನ್ನು ಬಳಸಿ ಅಪಾಯದಲ್ಲಿ ಸಿಲುಕಿದ್ದ ಅಮೋಘ ಎಂಬಾತನನ್ನು ಕೆಳಗಿಳಿಸಲಾಯಿತು. ಸ್ವಲ್ಪ ಮಿಸುಕಾಡಿದ್ದರು, 80 ಅಡಿ ಕೆಳಗಿನ ಜಲಪಾತದ ಪ್ರಪಾತಕ್ಕೆ ಬೀಳುವ ಸಾಧ್ಯತೆ ಇದ್ದು ಆತಂಕ ಮನೆ ಮಾಡಿತ್ತು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಇನ್ಸಪೆಕ್ಟರ್ ಕೆ.ಪಿ.ರಾಮಪ್ಪ, ಹಾಲಪ್ಪ, ಶಿವು, ಹೆಚ್.ಎಂ.ಮಠಪತಿ, ನಾಗರಾಜ್, ವನ್ಯ ಜೀವಿ ಇಲಾಖೆಯ ರೂಪೇಶ ಚವ್ಹಾಣ್, ಸ್ಥಳೀಯ ನಿವಾಸಿಗಳಾದ ಸುಬ್ಬ, ಮಂಜುನಾಥ್, ರಾಜೇಂದ್ರ ಶೆಟ್ಟಿ, ಅಶೋಕ ಕುಂಬ್ಳೆ, ಕಟ್ಟಿನಹೊಳೆ ಗೋಪಾಲ್, ಉದಯನಾಯಕ್, ಉದಿ ನಿಟ್ಟೂರು, ವಿಜಯ್ ಪಾಲ್ಗೊಂಡಿದ್ದರು.