ಬೇಲೂರು: ಲಾಕ್‌ಡೌನ್ ತೆರವುಗೊಳಿಸಿದ ನಂತರ ಪಟ್ಟಣದಲ್ಲಿನ ಇತಿಹಾಸ ಪ್ರಸಿದ್ಧ ಹೊಯ್ಸಳ ಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಅದರಲ್ಲೂ ಸೋಮವಾರ ದಸರಾ ರಜೆ ಇದ್ದ ಕಾರಣ, ಕರಾವಳಿ, ಮಲೆನಾಡು ಭಾಗದ ಪ್ರವಾಸಿ ತಾಣ ಗಳನ್ನು ವೀಕ್ಷಣೆಗೆ ತೆರಳುವವರು, ಹಬ್ಬಕ್ಕಾಗಿ ಊರಿಗಳಿಗೆ ತೆರಳುವವರು ಇಲ್ಲಿನ ದೇಗುಲಕ್ಕೂ ಭೇಟಿ ನೀಡಿದರು.
ದಸರಾ ಹಬ್ಬದ ಜೊತೆಗೆ ಕೆಲ ಖಾಸಗಿ ಕಂಪನಿಗಳಿಗೆ ಶನಿವಾರ ಸೇರಿ ಮೂರು ದಿನ ರಜೆ ಇದ್ದ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿದ್ದರು. ಲಾಕ್‌ಡೌನ್ ತೆರವು ಗೊಂಡ ನಂತರವೂ ಕೋವಿಡ್ ಆತಂಕ ಮುಂದುವರಿ ದಿರುವ ಕಾರಣ, ಪ್ರವಾಸಿಗರು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿರಲಿಲ್ಲ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಚನ್ನಕೇಶವ ದೇಗುಲ ಬಿಕೋ ಎನ್ನುತ್ತಿತ್ತು. ಸ್ಥಳೀಯರು, ಅರ್ಚಕರು, ಪುರಾತತ್ವ ಇಲಾಖೆ ಸಿಬ್ಬಂದಿಗೆ ಸಮೀತವಾಗಿತ್ತು. ಇಲ್ಲಿನ ಗೈಡ್ ಗಳಿಗೂ ಕೆಲಸವಿಲ್ಲದೆ ಜೀವನ ನಿರ್ವಹಣೆಗೆ ತುಂಬಾ ತೊಂದರೆ ಪಡುವಂತಾಗಿತ್ತು.
ಮರುಕಳಿಸಿದ ವೈಭವ:ಜನರಿಲ್ಲದೆ ಬಿಕೋ ಎನ್ನುತ್ತಿದ್ದ ದೇಗುಲ ಸುತ್ತಮುತ್ತಲಿನ ಆವರಣದಲ್ಲಿ ಸೋಮವಾರ ಪ್ರವಾಸಿಗರ ಕಲರವ ಕೇಳಿಬಂತು. ಮತ್ತೆ ಗತ ವೈಭವ ಮರುಕಳಿಸುವಂತೆ ಮಾಡಿತ್ತು. ದೇಗುಲದ ಸುತ್ತಮುತ್ತ ವಾಹನಗಳು ಸಾಲಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಬೆಂಗಳೂರು, ಮೈಸೂರು, ಕೋಲಾರ, ತುಮಕೂರು ಹಾಗೂ ಇತರೆ ಜಿಲ್ಲೆಗಳಿಂದ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಕೋವಿಡ್ ಸೋಂಕಿನ ಆತಂಕದಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ಕಟ್ಟುನಿಟ್ಟಿನ ಆದೇಶ ವಿದ್ದರೂ ಕೆಲ ಪ್ರವಾಸಿಗರು ತಮ್ಮ ಕುಟುಂಬ, ಇತರರೊಂದಿಗೆ ಒಗ್ಗೂಡಿ ದೇಗುಲ ವೀಕ್ಷಣೆ ಮಾಡುತ್ತಿದ್ದರು. 100ಕ್ಕೆ ಶೇ.60 ಮಂದಿ ಮಾಸ್ಕ್ ಹಾಕಿರುವುದು ಕಂಡು ಬಂತು.
ಸಮಯ ಬದಲಾವಣೆಗೆ ಆಗ್ರಹ: ವಿಶ್ವವಿಖ್ಯಾತ ಹೊಯ್ಸಳರ ಐತಿಹಾಸಿಕ ಹಿನ್ನೆಲೆವುಳ್ಳ ಶ್ರೀಚನ್ನಕೇಶವಸ್ವಾಮಿ ದೇಗುಲವನ್ನು ವೀಕ್ಷಿಸಲು ಹೊರ ರಾಜ್ಯ, ದೇಶ, ಜಿಲ್ಲೆಗಳಿಂದ ಭಕ್ತರು ಪ್ರವಾಸಿಗರು ಬರುತ್ತಿದ್ದಾರೆ. ಲಾಕ್‌ಡೌನ್ ನಂತರ ದೇಗುಲ ಬಾಗಿಲು ತರೆಯುವ ಸಮಯವನ್ನು ಬದಲಾವಣೆ ಮಾಡಲಾ ಗಿತ್ತು. ಈಗಲೂ ಅದನ್ನೇ ಮುಂದುವರಿಸಿಕೊಂಡು ಹೋಗು ತ್ತಿದ್ದು, ಇದರಿಂದ ಭಕ್ತರು ದರ್ಶನ ಭಾಗ್ಯ ಲಭಿಸಿದೇ ನಿರಾಸೆ ಯಿಂದ ಹಿಂತಿರುಗುವಂತಾಗಿದೆ.
ಅಂಗಡಿ, ಹೋಟೆಲ್‌ಗಳಿಗೆ ವ್ಯಾಪಾರ: ಪಟ್ಟಣದಲ್ಲಿನ ಅಂಗಡಿ ಮುಂಗಟ್ಟುಗಳು, ಹೋಟೆಲ್, ಲಾಡ್ಜ್ಗಳಿಗೆ ಪ್ರವಾಸಿಗರಿಂದ ಸಾಕಷ್ಟು ಆದಾಯ ಬರುತ್ತಿತ್ತು. ಆದರೆ, ಕೋವಿಡ್ ಆವರಿಸಿದ ಹಿನ್ನೆಲೆಯಲ್ಲಿ ಪ್ರವಾಸಿಗರಿರಲಿ, ಇತರೆ ಗ್ರಾಹಕರು ಬರದೇ ಸಂಕಷ್ಟಕ್ಕೆ ಸಿಲುಕುವಂತಾಯಿತು. ಸದ್ಯ ಎಲ್ಲಾ ಕ್ಷೇತ್ರಗಳು ನಿಧನವಾಗಿ ಯಥಾಸ್ಥಿತಿಗೆ ಮರಳುತ್ತಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಮುನ್ನೆಚ್ಚರಿಯನ್ನೂ ಮಾಲಿಕರು ಕೈಗೊಂಡಿದ್ದಾರೆ.
ಇತಿಹಾಸ ಪ್ರಸಿದ್ಧ ಚನ್ನಕೇಶವ ಸ್ವಾಮಿ ದೇವಾಲಯದ ಬಾಗಿಲು ಪ್ರತಿದಿನ ಬೆಳಗ್ಗೆ 7.30 ಗಂಟೆಗೆ ತೆರೆದರೂ ಭಕ್ತರಿಗೆ ದರ್ಶನಭಾಗ್ಯ ಸಿಗುವುದು 9 ಗಂಟೆಗೆ. ಬೆಳಗ್ಗಿನಿಂದ ಕಾದು ಬೇಸತ್ತ ಪ್ರವಾಸಿಗರು ಬೇರೆಡೆಗೆ ತೆರಳುವುದು ಸಾಮಾನ್ಯವಾಗಿದೆ. ಕೂಡಲೇ ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ಇತ್ತ ಗಮನಹರಿಸಿ ಎಂದಿನಂತೆ ಬೆಳಗ್ಗೆ 7.30ಕ್ಕೆ ಗಂಟೆಗೆ ಭಕ್ತರಿಗೆ ದರ್ಶನ ಭಾಗ್ಯ ಸಿಗುವಂತೆ ಮಾಡಬೇಕು.
–ತಾರಾನಾಥ್, ಮಾರ್ಗದರ್ಶಿ ಸಂಘದ ಅಧ್ಯಕ್ಷ.