ಹಳೇಬೀಡು: ವಿಶ್ವ ವಿಖ್ಯಾತ ಹೊಯ್ಸಳೇಶ್ವರ ದೇವಾಲಯದಕ್ಕೆ ಬರುವ ಪ್ರವಾಸಿಗರಿಗೆ ದೇವಾಲಯದ ಬಗ್ಗೆ ಮಾರ್ಗದರ್ಶನ ನೀಡುವ ಮಾರ್ಗರ್ಶಕರಿಗೆ ಸೇವಾ ಭದ್ರತೆ ಇಲ್ಲದೇ ಜೀವನ ನಡೆಸುವುದೇ ದುಸ್ತರವಾಗಿದೆ.
ಪಟ್ಟಣದ ಹೊಯ್ಸಳೇಶ್ವರ ದೇವಾಲಯ ವಿಶ್ವ ಭೂಪಟದಲ್ಲಿ ಹೆಸರು ಮಾಡಿದ್ದು, ದಿನಂಪ್ರತಿ ಸಾವಿರಾರು ಪ್ರವಾಸಿಗರು ದೇಶ ಹಾಗೂ ವಿದೇಶಗಳ ಮೂಲೆ ಮೂಲೆಯಿಂದಲೂ ಹೊಯ್ಸಳ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯದ ಶಿಲ್ಪ ಕಲೆಗಳ ಸೌಂದರ್ಯವನ್ನು ವೀಕ್ಷಿಸಿ, ಮಾರ್ಗದರ್ಶ ಕರು ನೀಡುವ ಮಾರ್ಗದರ್ಶನ ಪಡೆದು ಹೊಯ್ಸಳರ ಕಾಲದ ಗತ ವೈಭವವನ್ನು ನನೆದು ಖಷಿಯಿಂದ ವಾಪಸ್ ಹೋಗುತ್ತಾರೆ.
ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ದೇವಾಲಯದ ಬಗ್ಗೆ ಶಿಲ್ಪಿಗಳ ಕೆತ್ತನೆಯ ಬಗ್ಗೆ, ದೇವಾಲಯದ ಸಣ್ಣ ಸಣ್ಣ ಕುಸೂರಿ ಕೆಲಸದ ಬಗ್ಗೆ ಇಂಚಿಂಚು ಮಾಹಿತಿ ನೀಡಿ ಪ್ರವಾಸಿ ಗರನ್ನು ಖಷಿಯಿಂದ ಹಿಂದಿರುಗುವಂತೆ ಮಾಡುವ ದೇವಾಲಯದ ಮಾರ್ಗದರ್ಶಕರ ಬದುಕು ಮಾತ್ರ ಮುರಾ ಬಟ್ಟೆಯಾಗಿರುವುದು ನಿಜಕ್ಕೂ ದುರಂತವೇ ಸರಿ.
ನಿಗದಿತ ಸಂಬಳವಿಲ್ಲ: ದೇವಾಲಯದಲ್ಲಿ ಒಟ್ಟು 20 ಮಂದಿ ಮಾರ್ಗದರ್ಶಕರಿದ್ದು, ಒಂದು ದಿನದಲ್ಲಿ 10 ಮಂದಿ ಹಾಗೂ ಮತ್ತೂಂದು ದಿನ 10ಮಂದಿ ಮಾರ್ಗದರ್ಶನ ಮಾಡಲು ಅವಕಾಶವಿದೆ. ಇವರಿಗೆ ಸರ್ಕಾರದಿಂದಾಗಲೀ, ಇಲಾಖೆ ಯಿಂದಾಗಲೀ ಇವರು ಮಾಡುವ ಮಾರ್ಗದರ್ಶನಕ್ಕೆ ಯಾವುದೇ ರೀತಿಯ ವೇತನ ನೀಡುತ್ತಿಲ್ಲ. ದೇವಾಲಯದ ವೀಕ್ಷಣೆಗೆ ಬರುವ ಪ್ರವಾಸಿಗರು ಕೊಡುವ 100, 200 ರೂ. ಹಣದಲ್ಲಿಯೇ ತಮ್ಮ ಜೀವನ ನಡೆಸಬೇಕಾಗಿದೆ.
ಸಮವಸ್ತ್ರ ಕೊರತೆ: ಹೊಯ್ಸಳೇಶ್ವರ ದೇವಾಯಲಕ್ಕೆ ದೇಶ, ವಿದೇಶಗಳಿಂದ ಸಾಕಷ್ಟು ಪ್ರವಾಸಿಗರು ಬರುತ್ತಾರೆ. ಬರುವ ಪ್ರವಾಸಿಗರಿಗೆ ಮಾರ್ಗದರ್ಶಕರೆಂದರೆ ಒಬ್ಬ ಶಿಕ್ಷಕನ ಸ್ಥಾನದಲ್ಲಿ ನಮ್ಮನ್ನು ಕಾಣುತ್ತಾರೆ. ಆದರೆ ನಮಗೆ ಸರಿಯಾದ ಸಮವಸ್ತ್ರ ವಿಲ್ಲ, ಜಿಲ್ಲಾಧಿಕಾರಿ ಆದೇಶದ ಮೇರೆಗೆ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಜೊತೆ ಸಮವಸ್ತ್ರ ನೀಡಲಾಗಿತ್ತು. ನೀಡಿರುವ ಸಮವಸ್ತ್ರ ಅತ್ಯಂತ ಕಳಪೆ ಮಟ್ಟದ್ದಾಗಿದ್ದು, ಕಡೆ ಪಕ್ಷ 2 ಜೊತೆ ಗುಣಮಟ್ಟದ ಸಮವಸ್ತ್ರವನ್ನು ಇಲಾಖೆಯಿಂದ ನೀಡಿದರೆ ನಮಗೂ ಮತ್ತು ನಾವು ಮಾಡುವ ವೃತ್ತಿಗೂ ಗೌರವ ಸಿಗುತ್ತದೆ ಎಂಬುದು ಇಲ್ಲಿನ ಮಾರ್ಗದರ್ಶಕರ ಆಶಯವಾಗಿದೆ.
● ಕುಮಾರ್