ಬೆಂಗಳೂರು: ರಾಜಧಾನಿಯಲ್ಲಿ ಶನಿವಾರ ಆರಂಭವಾದ “ಪ್ರವಾಸಿ ಭಾರತೀಯ ದಿವಸ್’ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣ್ಯತೆಯುಳ್ಳ ವಿದ್ಯಾರ್ಥಿಗಳಿಗೆ ಮಾತ್ರ ಮಣೆಹಾಕಿರುವುದು ತೀವ್ರ ವಿವಾದ ಉಂಟು ಮಾಡಿದೆ.
ನಗರದ ಹೊರವಲಯದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆರಂಭವಾದ “ಪ್ರವಾಸಿ ಭಾರತೀಯ ದಿನಾಚರಣೆ’ಯ ಮೊದಲ ದಿನ ಶನಿವಾರ ಯುವ ಜನರನ್ನು ದೃಷ್ಠಿಯಲ್ಲಿಟ್ಟುಕೊಂಡು ಸರ್ಕಾರ “ಯುವ ಪ್ರವಾಸಿ ಭಾರತೀಯ ದಿನಾಚರಣೆ’ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಬೆಂಗಳೂರು ವಿವಿ ಮತ್ತು ನಗರದ ಕಾಲೇಜು ವಿದ್ಯಾರ್ಥಿಗಳನ್ನು ಕರೆತರುವಂತೆ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆಗೆ ಸೂಚನೆ ನೀಡಿತ್ತು.
ಆದರೆ, ಈ ಸಂಬಂಧ ಬೆಂಗಳೂರು ವಿವಿ ಮತ್ತು ರಾಜಧಾನಿ ವ್ಯಾಪ್ತಿಯ ಪದವಿ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿರುವ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು, ತಮ್ಮ ಕಾಲೇಜಿನ “ಪ್ರತಿಭಾವಂತ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣ್ಯತೆ’ ಇರುವ ವಿದ್ಯಾರ್ಥಿಗಳನ್ನು ಮಾತ್ರ ಯುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮಕ್ಕೆ ಕರೆತರುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಆಂಗ್ಲಭಾಷೆಯ ಮೇಲೆ ಪ್ರಾವೀಣ್ಯತೆ ಇಲ್ಲದ ಕನ್ನಡ ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರವೇ ನಿರ್ಲಕ್ಷಿಸಿದಂತಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರತಿ ವಿದ್ಯಾರ್ಥಿಯನ್ನೂ ಸಮಾನವಾಗಿ ಕಾಣಬೇಕಾದ ಶಿಕ್ಷಣ ಇಲಾಖೆಯೇ ಈ ರೀತಿ ಇಂಗ್ಲೀಷ್‌ಭಾಷೆ ಮೇಲೆ ಪ್ರಾವೀಣ್ಯತೆಯುಳ್ಳ, ಪ್ರಾವೀಣ್ಯತೆ ಇಲ್ಲದ ವಿದ್ಯಾರ್ಥಿಗಳು ಎಂದು ವರ್ಗೀಕರಣ ಮಾಡಿ. ಪ್ರವಾಸಿ ದಿನಸದಂತಹ ಪ್ರಮುಖ ಕಾರ್ಯಕ್ರಮಗಳಿಗೆ ಆಂಗ್ಲ ಭಾಷೆಯ ಮೇಲೆ ಪ್ರಾವೀಣ್ಯತೆಯುಳ್ಳವರಿಗೆ ಮಾತ್ರ ಅವಕಾಶ ನೀಡಿ ಕನ್ನಡ ಮಾತ್ರ ಬಲ್ಲ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವಿಸಿದೆ.
ಇಲಾಖೆಯ ವಿವಾದಾತ್ಮಕ ಸುತ್ತೋಲೆ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ರಾಜ್ಯ ಪದವಿ ಕಾಲೇಜು ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಡಾ.ಪ್ರಕಾಶ್, ಸಮಾನ ಅವಕಾಶ ನೀಡುವುದರಿಂದ ಮಾತ್ರ ವಿದ್ಯಾರ್ಥಿಗಳ ಸಮಗ್ರ ಬೆಳೆವಣಿಗೆ ಸಾಧ್ಯ. ಇಂಗ್ಲೀಷ್ ಪ್ರಾವೀಣ್ಯತೆ ಇರುವ, ಇಲ್ಲದ ವಿದ್ಯಾರ್ಥಿಗಳು ಎಂಬ ವರ್ಗೀಕರಣ ಸರಿಯಲ್ಲ. ಇಂತಹ ತಾರತಮ್ಯ ಮಾಡುವುದರಿಂದ ವಿದ್ಯಾರ್ಥಿಗಳ ಮನಸ್ಸಿಗೂ ಘಾಸಿಯಾಗುತ್ತದೆ. ಕಾಲೇಜು ಆವರಣದಲ್ಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ. ಮುಂದಿನ ದಿನಗಳಲ್ಲಿ ಇಲಾಖೆ ಇಂತಹ ಸುತ್ತೋಲೆಗಳನ್ನು ಹೊರಡಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಈ ಸುತ್ತೋಲೆ ಸಂಬಂದ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿರುವ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಅಜಯ್ ನಾಗಭೂಷಣ್, “ಪ್ರವಾಸಿ ಭಾರತೀಯ ದಿವಸ್’ ಕಾರ್ಯಕ್ರಮಕ್ಕೆ ಇಂಗ್ಲೀಷ್ ಪ್ರಾವೀಣ್ಯತೆಯುಳ್ಳ 200 ವಿದ್ಯಾರ್ಥಿಗಳನ್ನು ಕಳುಹಿಸುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ನಮಗೆ ಸೂಚನೆ ಬಂದಿತ್ತು. ಆ ಸೂಚನೆ ಆಧರಿಸಿ ನಮ್ಮ ಇಲಾಖೆ ಸುತ್ತೋಲೆ ಹೊರಡಿಸಿದೆ. ಕಾರ್ಯಕ್ರಮಕ್ಕೆ ಬಹುತೇಕ ವಿದೇಶಿ ಗಣ್ಯರು ಬರುವುದರಿಂದ ಅವರೊಂದಿಗೆ ಸಂವಹನ ಹಾಗೂ ಸಹಾಯಕ್ಕೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಅವರು ಇಂಗ್ಲೀಷ್ ನೈಪುಣ್ಯತೆಯುಳ್ಳ ವಿದ್ಯಾರ್ಥಿಗಳನ್ನು ಕೇಳಿರಬಹುದು ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ಇಲ್ಲಿ ಇಂಗ್ಲೀಷ್ ಗೊತ್ತಿಲ್ಲದವರನ್ನು ನಿರ್ಲಕ್ಷಿಸಲಾಗಿದೆ ಎಂದು ಹೇಳಲು ಬರುವುದಿಲ್ಲ ಎಂದು ಹೇಳಿದ್ದಾರೆ.