ಕೊಟ್ಪಿಗೆಹಾರ: ಪ್ರವಾಸಿ ತಾಣ ಹಾಗೂ ಐತಿಹಾಸಿಕ ಸ್ಥಳ ದೇವರಮನೆಯಲ್ಲಿ ಕೆಲ ಪ್ರವಾಸಿಗರ ಉಪಟಳದಿಂದ ಬಣಕಲ್ ಗ್ರಾಮಸ್ಥರಿಗೆ ಕಿರಿಕಿರಿ ಉಂಟಾಗಿದೆ.
ಭಾನುವಾರ (ಜ.22) ದೇವರಮನೆಯಲ್ಲಿ ಕೆಲ ಪ್ರವಾಸಿಗರು ಅನುಚಿತವಾಗಿ ವರ್ತಿಸಿದ್ದು ಗ್ರಾಮಸ್ಥರು ಆ ಪ್ರವಾಸಿಗರನ್ನು ತರಾಟೆಗೆ ತೆಗೆದುಕೊಂಡು ಬಣಕಲ್ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಎಚ್ಚರಿಕೆ ನೀಡಿ ಕಳುಹಿಸಿದ ಘಟನೆ ನಡೆದಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಬಣಕಲ್ ಗ್ರಾಮಸ್ಥ ಬಿ.ಎಸ್. ವಿಕ್ರಂ, ದೇವರಮನೆ ಪ್ರವಾಸಿ ತಾಣಕ್ಕೆ ಬರುತ್ತಿರುವ ಕೆಲ ಪ್ರವಾಸಿಗರು ಮದ್ಯಪಾನ ಮತ್ತು ಮಾದಕ ವ್ಯಸನ ಮಾಡುತ್ತಿದ್ದು, ದೇವರಮನೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದಾರೆ. ನಿಸರ್ಗ ರಮಣೀಯ ತಾಣ ದೇವರ ಮನೆಯಲ್ಲಿ ಪ್ರವಾಸಿಗರು ಮೋಜು-ಮಸ್ತಿಯಲ್ಲಿ ತೊಡಗುತ್ತಿದ್ದು, ಇದರಿಂದ ಬಣಕಲ್ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದರು.
ಕೇಕೆ ಹಾಕುವುದು ಮದ್ಯ ಬಾಟಲಿಗಳನ್ನು ಒಡೆದು ಹಾಕುವುದು ಮುಂತಾದ ಕೆಲಸಗಳನ್ನು ಕೆಲ ಪ್ರವಾಸಿಗರು ಮಾಡುತ್ತಿದ್ದಾರೆ. ದೇವರಮನೆಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಕಿಡಿಗೇಡಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ರಾತ್ರಿ ಸಮಯದಲ್ಲೂ ಕೆಲ ಪ್ರವಾಸಿಗರು ದೇವರಮನೆಗೆ ಬರುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.
ದೇವರಮನೆಗೆ ಸಾಗುವ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್, ಮದ್ಯ ಬಾಟಲಿಯನ್ನು ಎಸೆಯುವುದು ನಡೆಯುತ್ತಿದೆ. ಇದರಿಂದಾಗಿ ಪರಿಸರ ಮಾಲಿನ್ಯವಾಗುತ್ತಿದ್ದು ಗ್ರಾಮಸ್ಥರಿಗೂ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದ್ದಾರೆ.