ಚಿಕ್ಕಬಳ್ಳಾಪುರ: ಕರ್ನಾಟಕದ ಊಟಿಯೆಂದು ಖ್ಯಾತಿ ಹೊಂದಿರುವ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಹೊಸ ವರ್ಷದ ಅಂಗವಾಗಿ ಜನರಸಾಗರವೇ ಹರಿದುಬಂದಿತ್ತು. ಜಿಲ್ಲೆಯೂ ಸೇರಿದಂತೆ ರಾಜ್ಯ-ಹೊರ ರಾಜ್ಯ ಮತ್ತು ದೇಶದ ವಿವಿಧ ಭಾಗಗಗಳಿಂದ ಸಹಸ್ರಾರು ಜನ ಆಗಮಿಸಿದರು.
ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಡಿ. 31ರ ಸಂಜೆ 6 ಗಂಟೆಯಿಂದ ಜ. 1 ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿ ಆದೇಶವನ್ನು ಹೊರಡಿಸಿತ್ತು. ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿದ್ದರಿಂದ ರಾತ್ರಿಯೇ ನಂದಿಗಿರಿಧಾಮದಲ್ಲಿ ಉಳಿದುಕೊಳ್ಳಲು ಬಂದಿದ್ದ ನಾಗರಿಕರು ಮತ್ತು ಪ್ರವಾಸಿಗರು ಭಾನುವಾರ ಬೆಳಗ್ಗೆ ತಂಡೋಪತಂಡವಾಗಿ ಬೆಟ್ಟ ಏರಿದರು.
ಪ್ರಾಕೃತಿಕ ಸೌಂದರ್ಯವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ನಂದಿಗಿರಿಧಾಮವನ್ನು ನೋಡು ವುದೇ ಒಂದು ಆನಂದ. ಇಲ್ಲಿಗೆ ದೇಶ ವಿದೇಶದಿಂದ ಜನ ಆಗಮಿಸುತ್ತಾರೆ. ವೀಕೆಂಡ್ ಭಾನುವಾರ ಮತ್ತು ಹೊಸ ವರ್ಷ ಎರಡೂ ಒಂದೇ ಸಾರಿ ಬಂದಿದ್ದರಿಂದ ಸಹಜವಾಗಿ ಜನಸಾಗರವೇ ಹರಿದುಬಂದಿತ್ತು. ನಂದಿ ಬೆಟ್ಟದ ಕೆಳಗಡೆ 5-6 ಕಿ.ಮೀ. ಸಂಚಾರ ದಟ್ಟಣೆ ಉಂಟಾಯಿತು. ಮೇಲಿರುವವರು ಕೆಳಗೆ ಬರಲಾರದೆ ಕೆಳಗಿದ್ದವರು ಮೇಲೆ ಹೋಗಲಾದರೆ ಪರದಾಡಿದರು.
ಕೊರೊನಾ ನಿಯಮ ಪಾಲನೆಯಲ್ಲಿ ಸಡಿಲಿಕೆ: ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೊರೊನಾ ಸಾಂಕ್ರಾಮಿಕ ಹರಡದಂತೆ ತಡೆಗಟ್ಟುವ ಮುಂಜಾಗ್ರತಾ ಕ್ರಮಕ್ಕಾಗಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಪ್ರವಾಸಿಗರು ಹೊಸ ವರ್ಷದ ಮುನ್ನ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಹೊಸ ವರ್ಷದ ಇಂದು ಸಹಸ್ರಾರು ಸಂಖ್ಯೆಯಲ್ಲಿ ಜನ ಮತ್ತು ಪ್ರವಾಸಿಗರು ಆಗಮಿಸಿದ್ದರು. ಕೊರೊನಾ ಮುನ್ನೆಚ್ಚರಿಕೆ ಕ್ರಮ ಕೇವಲ ಆದೇಶಕ್ಕೆ ಸೀಮಿತವಾಗಿತ್ತು. ಎಲ್ಲ ನಿಯಮಗಳು ಸಹ ಗಾಳಿಗೆ ತೂರಲಾಗಿತ್ತು.
ಭರ್ಜರಿ ವ್ಯಾಪಾರ : ನಂದಿಗಿರಿಧಾಮದಲ್ಲಿ ಬಹುಶಃ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಬಂದಿದ್ದರು. ಮಕ್ಕಳು ಮತ್ತು ನಾಗರಿಕರು ವಿವಿಧ ತಿಂಡಿ ಪದಾರ್ಥಗಳನ್ನು ಖರೀದಿಸಲು ತೊಡಗಿದ್ದರು ಅಂಗಡಿ ಮಂಗಟ್ಟಿನಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ದುಬಾರಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂತು.