Advertisement
ಗಾಣಗಾಪುರ ಕ್ಷೇತ್ರ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ದತ್ತಾತ್ರೇಯ ಪಾದುಕೆ ದರ್ಶನ ಮತ್ತು ಭೀಮಾ-ಅಮರ್ಜಾ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನಕ್ಕೆಂದು ಜನರು ಬರುತ್ತಿದ್ದಾರೆ. ರಾಜ್ಯ ಮಾತ್ರವಲ್ಲ ಪಕ್ಕದ ಮಹಾರಾಷ್ಟ್ರಮತ್ತು ತೆಲಂಗಾಣದಿಂದಲೂ ಆಗಮಿಸ ತೊಡಗಿದ್ದಾರೆ.ಕ್ಷೇತ್ರದಲ್ಲೂ ಸಾರ್ವಜನಿಕರಿಗೆ ಮುಕ್ತವಾದ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ವಿಧಿಸಲಾದ ನಿರ್ಬಂಧಗಳನ್ನು ಸಂಪೂರ್ಣ ಸಡಿಲಮಾಡಲಾಗಿದೆ. ಆದರೂ, ಕೋವಿಡ್ ಸಂಬಂಧಿತ ಕೆಲ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ದೂರದಿಂದ ಬರುವ ಭಕ್ತರು, ಪ್ರವಾಸಿಗರ ಮೇಲೆ ನಿಗಾ ಮುಂದುವರಿದಿದೆ. ನಿತ್ಯ ನಾಲ್ಕೈದು ನೂರು ಜನರು ಭೇಟಿ ನೀಡುತ್ತಿದ್ದಾರೆ.
Related Articles
Advertisement
ಒಂದು ತಿಂಗಳಿಂದ ಪ್ರವಾಸಿಗರ ಪ್ರವೇಶಕ್ಕೆ ಅವಕಾಶಮಾಡಿಕೊಡಲಾಗಿದೆ. ಹೀಗಾಗಿ ಜನರು ಬರ ತೊಡಗಿದ್ದಾರೆ. ಇತಿಹಾಸ ಅಧ್ಯಯನ ಆಸಕ್ತರು, ಗಣ್ಯರು ಭೇಟಿ ನೀಡುತ್ತಿದ್ದಾರೆ. ಪಕ್ಕದ ಚಂದ್ರಲಾ ಪರಮೇಶ್ವರಿ ದೇವಸ್ಥಾನವೂ ಭಕ್ತರಿಗೆ ಮುಕ್ತವಾಗಿದೆ. ಶ್ರೀ ಚಕ್ರಾಕಾರದ ದೇವಸ್ಥಾನವು ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಅಕ್ಕ-ಪಕ್ಕ ಜಿಲ್ಲೆಗಳ ಜನರು ಬಂದು ದೇವಿ ದರ್ಶನ ಪಡೆಯುತ್ತಿದ್ದಾರೆ. ಇಲ್ಲಿ ವಾಸ್ತವ್ಯಕ್ಕೆ ಅವಕಾಶ ಇದ್ದು, ಭಕ್ತರು ವಾಸ್ತವ್ಯ ಹೂಡುತ್ತಿದ್ದಾರೆ.
ಚಿಂಚೋಳಿ ವನ್ಯಜೀವಿ ಧಾಮ: ದಕ್ಷಿಣ ಭಾರತದ ಏಕೈಕ ಶುಷ್ಕ ವಲಯವಾದ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಭಕ್ತರ ದಂಡು ಜೋರಾಗಿದೆ. ಕರ್ನಾಟಕ-ತೆಲಂಗಾಣದಗಡಿಯಲ್ಲಿ ಹೊಂದಿಕೊಂಡಿರುವ ಚಿಂಚೋಳಿ ಅರಣ್ಯ ಹಸಿರಿನಿಂದ ಮೈದುಂಬಿಕೊಂಡಿದ್ದು, ಮಿನಿ ಮಲೆನಾಡು ಎಂದೇ ಖ್ಯಾತಿ ಹೊಂದಿದೆ. ಪ್ರಸಕ್ತ ಉತ್ತಮ ಮಳೆಯಿಂದ ಚಿಂಚೋಳಿ ಪರಿಸರದಲ್ಲಿ ಮನಮೋಹಕರಮಣೀಯ ದೃಶ್ಯ ಕಾವ್ಯ ಸೃಷ್ಟಿಯಾಗಿದ್ದು, ಸವಿಯಲು ಜನರು ಲಗ್ಗೆ ಹಿಡುತ್ತಿದ್ದಾರೆ.
ಕೊಂಚಾವರಂ, ಸಂಗಾಪುರ, ಶಾದಿಪುರ, ಗೊಟ್ಟಂಗೊಟ್ಟ , ಚಂದ್ರಂಪಳ್ಳಿ ಜಲಾಶಯ, ಎತ್ತಪೋತಾ ಜಲಪಾತ, ಮಾಣಿಕಪುರ ಜಲಪಾತ, ನಾಗರಾಳ್ ಜಲಾಶಯಗಳಿಗೆ ಕುಟುಂಬ ಸಮೇತರಾಗಿ ಜನರು ಭೇಟಿ ನೀಡುತ್ತಿದ್ದಾರೆ. ಲಾಕ್‌ಡೌನ್ ಸಡಿಲಿಕೆ ನಂತರ ಜಿಲ್ಲೆಯ ಇತರ ಸ್ಥಳಗಳಿಂತ ಹೆಚ್ಚಿನ ಸಂಖ್ಯೆಯಲ್ಲಿ ಚಿಂಚೋಳಿಗೆ ಭೇಟಿ ಕೊಡುತ್ತಿದ್ದಾರೆ. ಕಣ್ಣುಹಾಯಿಸಿದಲ್ಲೆಲ್ಲ ಹಚ್ಚ ಹಸಿರೇ ಕಂಗೊಳಿಸುತ್ತಿದ್ದು, ಕಾರು, ಬೈಕ್ ಗಳಲ್ಲಿ ಗುಂಪಾಗಿ ಪ್ರವಾಸರು ಲಗ್ಗೆ ಇಡುತ್ತಿದ್ದಾರೆ. ವಾರಾಂತ್ಯ ಹಾಗೂ ಸಾರ್ವಜನಿಕ ರಜೆ ಸಮಯದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭೇಟಿ ಕೊಡುತ್ತಿದ್ದಾರೆ. ಚಂದ್ರಂಪಳ್ಳಿ ಜಲಾಶಯ, ಎತ್ತಪೋತಾ ಜಲಪಾತದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಸೇರುತ್ತಿದ್ದಾರೆ. ಅತಿಥಿಗೃಹಗಳು, ಯಾತ್ರಿ ನಿವಾಸಿಗಳಿಗೆ ಬೇಡಿಕೆ ಹೆಚ್ಚಿದೆ.
ಬಹಮನಿ ಕೋಟೆ: ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಬಹಮನಿ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರು, ಸಾರ್ವಜನಿಕರ ಸಂಖ್ಯೆ ಅಧಿಕವಾಗಿದೆ. ವಿಶಾಲವಾದ ಕೋಟೆಯೊಳಗೆ ಓಡಾಟಕ್ಕೆ ಮುಕ್ತ ಅವಕಾಶ ಇದೆ. ಶತಮಾನಗಳ ಹಿಂದಿನ ಬಹಮನಿ ಸಾಮ್ರಾಜ್ಯದ ತೋಪುಗಳು ಹಾಗೂ ಕೋಟೆ ಒಳಗಡೆ ಇರುವ ಆಕರ್ಪಕ ಜಾಮಾ ಮಸೀದಿ ನೋಡಲು ಜನರು ಬರುತ್ತಿದ್ದಾರೆ. ಐತಿಹಾಸಿಕ ಕೋಟೆ ನಂತರ ಪ್ರವಾಸಿಗರು, ಪ್ರಸಿದ್ಧ ಖಾಜಾ ಬಂದೇ ನವಾಜ್ ದರ್ಗಾ, ಶರಣಬಸವೇಶ್ವರ ದೇವಸ್ಥಾನಗಳಿಗೂ ಭೇಟಿ ಕೊಡುತ್ತಿದ್ದಾರೆ. ಅಲ್ಲಿಂದ ಹೊರವಲಯದ ಬುದ್ಧ ವಿಹಾರಕ್ಕೆ ತೆರಳುತ್ತಿದ್ದಾರೆ.ಶರಣಬಸವೇಶ್ವರ ದೇವಸ್ಥಾನದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್,ಸ್ಯಾನಿಟೈಜರ್ ಮುಂತಾದ ಮುನ್ನೆಚ್ಚರಿಕೆ ಕ್ರಮಗಳು ಅನುಸರಿಕೊಂಡು ಬರಲಾಗುತ್ತಿದೆ.
ಖಾಜಾ ಬಂದೇ ನವಾಜ್ ದರ್ಗಾದಲ್ಲಿ ಯಾತ್ರಿಗಳಿಗೆ ಸಮಯ ನಿಗದಿ ಮಾಡಲಾಗಿದೆ. ಬೆಳಿಗ್ಗೆ 6ರಿಂದ 2 ಗಂಟೆ ಮತ್ತು ಸಂಜೆ 4ರಿಂದ 7 ಗಂಟೆಯವರೆಗೆ ಮಾತ್ರ ದರ್ಗಾ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ್ಗಾ ಆವರಣದೊಳಗೆ ಉಳಿದುಕೊಳ್ಳಲು ಹಾಗೂ ಅಡುಗೆ ಮಾಡುವುದಕ್ಕೆ ಅನುಮತಿ ನೀಡುತ್ತಿಲ್ಲ. ನಿತ್ಯವೂ ದರ್ಗಾಕ್ಕೆ ಭೇಟಿ ಕೊಡುವರ ಸಂಖ್ಯೆ ಹೆಚ್ಚುತ್ತಿದೆ. ದರ್ಗಾ ಮುಖ್ಯದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಜರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ.