Advertisement

ನೋಡ ಬನ್ನಿರಿ ಕರುನಾಡಿನ ಸೊಬಗ…!

02:36 AM Sep 17, 2020 | mahesh |

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ದೇಶೀಯ, ಅಂತಾರಾಷ್ಟ್ರೀಯ ಪ್ರವಾಸಿಗರ ಭೇಟಿಯಲ್ಲಿ ಕರ್ನಾಟಕ ವನ್ನು ಭಾರತದ ಮೊದಲ ಆದ್ಯತಾ ರಾಜ್ಯಗಳಲ್ಲಿ ಒಂದಾಗಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿ ಸುವ ಆಶಯದೊಂದಿಗೆ “ಪ್ರವಾಸೋದ್ಯಮ ನೀತಿ 2020-25′ ರೂಪುಗೊಂಡಿದೆ. ಸೆ. 27ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನೂತನ ಪ್ರವಾ ಸೋದ್ಯಮ ನೀತಿಯನ್ನು ಘೋಷಿಸಲಿದ್ದಾರೆ.

Advertisement

ಅದರ‌ಲ್ಲಿ ಸುಮಾರು 18 ಬಗೆಯ ಪ್ರವಾ ಸೋದ್ಯಮ ಕ್ಷೇತ್ರಗಳನ್ನು ಗುರುತಿಸಿ ಉತ್ತೇಜಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಸಾಹಸ, ಕೃಷಿ- ಗ್ರಾಮೀಣ, ಕಾರವಾನ್‌, ಕರಾವಳಿ- ಕಡಲತೀರ, ಸಾಂಸ್ಕೃತಿಕ, ಪಾರಂಪರಿಕ, ಪರಿಸರ (ನೈಸರ್ಗಿಕ ಮತ್ತು ವನ್ಯಜೀವಿ), ಶಿಕ್ಷಣ, ಚಲನಚಿತ್ರ, ಪಾಕ ಶಾಸ್ತ್ರ, ಒಳನಾಡು ಜಲ ಪ್ರವಾಸೋದ್ಯಮ, ನೌಕಾ ಯಾನ ವಿಹಾರ, ಗಣಿಗಾರಿಕೆ, ಆಧ್ಯಾತ್ಮಿಕ (ಧಾರ್ಮಿಕ, ಅಧಾತ್ಮ ಸ್ಥಳಗಳ ವೀಕ್ಷಣೆ), ಕ್ರೀಡೆ, ಸ್ವಾಸ್ಥ é ಪ್ರವಾಸೋದ್ಯಮ ಸೇರಿದಂತೆ ಇತರ ಪರಿಕಲ್ಪನೆಯಡಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ದೂರ ದೃಷ್ಟಿಯ ಚಿಂತನೆ ನೀತಿಯಲ್ಲಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕ ಮಗಳೂರು, ಚಾಮರಾಜನಗರ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯನ್ನು ಪ್ರವಾಸೋದ್ಯಮ ದೃಷ್ಟಿ ಯಿಂದ ಸಮಗ್ರ ಅಭಿವೃದ್ಧಿಪಡಿಸುವ ಪ್ರಸ್ತಾವವೂ ಇದೆ.

ಪ್ರಮುಖ ಅಂಶಗಳು
ಒಂದೆಡೆ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ಜತೆಗೆ ಬಂಡವಾಳ ಹೂಡಿಕೆಗೆ ಸಹಾಯಧನ ನೀಡಲು ಚಿಂತಿಸಲಾಗಿದೆ.

ಸಾಹಸ (ಅಡ್ವೆಂಚರ್‌) ಪ್ರವಾಸೋದ್ಯಮ, ಕಾರವಾನ್‌ ಪಾರ್ಕ್‌, ಹೊಟೇಲ್‌, ಹೌಸ್‌ ಬೋಟ್‌, ಸ್ವಾಸ್ಥ್ಯ ಕೇಂದ್ರ ಯೋಜನೆಗಳಿಗೆ ಶೇ. 5ರಿಂದ ಶೇ. 15ರ ವರೆಗೆ ಸಹಾಯಧನ, ಗರಿಷ್ಠ 2ರಿಂದ 5 ಕೋಟಿ ರೂ. ವರೆಗೆ ಬಂಡವಾಳ ಹೂಡಿಕೆ ಸಹಾಯಧನ ನೀಡುವಂತಹ ಪ್ರಸ್ತಾವವೂ ನೀತಿಯಲ್ಲಿವೆ. ಮುದ್ರಾಂಕ ಶುಲ್ಕದ ಮೇಲೆ ವಿನಾಯಿತಿ, ರಿಯಾಯಿತಿ ನೋಂದಣಿ ಶುಲ್ಕ, ಭೂಪರಿವರ್ತನೆ ಶುಲ್ಕದ ಮರುಪಾವತಿ, ಮೋಟಾರು ವಾಹನ ತೆರಿಗೆ ವಿನಾಯಿತಿ, ಪೂರಕ ಮೂಲಸೌಕರ್ಯ ನೆರವು ಕಲ್ಪಿಸಿ ಉತ್ತೇಜಿಸುವ ಅಂಶಗಳೂ ಇವೆ.

ಪ್ರವಾಸೋದ್ಯಮ ಅಭಿವೃದ್ಧಿ, ಉತ್ತೇಜನಕ್ಕಾಗಿ ಪ್ರೋತ್ಸಾಹ ಧನ, ಸಹಾಯಧನ, ರಿಯಾಯಿತಿ ನೀಡಲು ಎರಡು ಸಮಿತಿ ರಚನೆ ಪ್ರಸ್ತಾವವಿದೆ. 5 ಕೋ. ರೂ. ವರೆಗಿನ ಯೋಜನೆಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಪ್ರವಾಸೋದ್ಯಮ ಸಮಿತಿ ಹಾಗೂ 5 ಕೋ. ರೂ. ಮೇಲ್ಪಟ್ಟ ಯೋಜನೆಗಳಿಗೆ ಪ್ರವಾಸೋದ್ಯಮ ಸಚಿವರ ಅಧ್ಯಕ್ಷತೆಯ ಪ್ರವಾಸೋದ್ಯಮ ಅಧಿಕಾರಯುಕ್ತ ಸಮಿತಿಗೆ ಸಹಾಯಧನ, ಪ್ರೋತ್ಸಾಹ ಧನ ನೀಡುವ ಅಧಿಕಾರ ಕಲ್ಪಿಸುವ ಪ್ರಸ್ತಾವವೂ ಇದೆ.

Advertisement

465 ಕೋಟಿ ರೂ. ಪ್ರೋತ್ಸಾಹ ಧನ!
ಪ್ರವಾಸೋದ್ಯಮ ನೀತಿಯಡಿ ವಾರ್ಷಿಕ 93 ಯೋಜನೆಗಳಿಗೆ 87.12 ಕೋ. ರೂ.ನಂತೆ ಐದು ವರ್ಷಗಳ ಅವಧಿಗೆ 465 ಯೋಜನೆಗಳಿಗೆ 435 ಕೋ. ರೂ. ಸಹಾಯಧನ, ಪ್ರೋತ್ಸಾಹ ಧನ, ಇತರ ನೆರವು ನೀಡುವ ಪ್ರಸ್ತಾವವಿದೆ. ಬಂಡವಾಳ ಹೂಡಿಕೆ ಸಹಾಯಧನವಾಗಿ ಐದು ವರ್ಷಗಳಲ್ಲಿ 405 ಕೋಟಿ ರೂ. ವಿನಿಯೋಗ. ಬಡ್ಡಿ ಸಹಾಯಧನ, ಸುಸ್ಥಿರತೆ ಕಾಯ್ದುಕೊಳ್ಳಲು ನೆರವು, ಮೂಲ ಸೌಕರ್ಯಕ್ಕೆ ಸಹಕಾರ, ಮಾರ್ಕೆಟಿಂಗ್‌ ನೆರವಿಗೆ ಸಂಬಂಧಪಟ್ಟಂತೆಯೂ ಸಹಾಯಧನ ನೀಡಿಕೆ ಬಗ್ಗೆ ನೀತಿಯಲ್ಲಿ ಪ್ರಸ್ತಾವಿಸಲಾಗಿದೆ.

ಸುಧಾಮೂರ್ತಿ ನೇತೃತ್ವದ ಕಾರ್ಯಪಡೆ
ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆಯಾದ ಸುಧಾಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಕಾರ್ಯಪಡೆ ರಚನೆಯಾಗಿದ್ದು ಪ್ರವಾಸೋದ್ಯಮ ನೀತಿಯ ಪರಿಣಾಮಕಾರಿ ಜಾರಿಗೆ ಅಗತ್ಯ ಮಾರ್ಗದರ್ಶನ ಪಡೆಯಲಾಗಿದೆ.

70 ಆದ್ಯತಾ ಪ್ರವಾಸಿ ತಾಣಗಳು
ರಾಜ್ಯದಲ್ಲಿ 319 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, 70 ಪ್ರವಾಸಿ ತಾಣಗಳನ್ನು ಆದ್ಯತಾ ಪ್ರವಾಸೋದ್ಯಮ ತಾಣಗಳೆಂದು ಪರಿಗಣಿಸಿ ಅಭಿವೃದ್ಧಿಪಡಿಸುವ ಪ್ರಸ್ತಾವ‌ವೂ ಪ್ರವಾಸೋದ್ಯಮ ನೀತಿಯಲ್ಲಿದೆ. ಬೈಲಕುಪ್ಪೆ,, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲ ಸಂಗಮ, ಹಂಪಿ, ಹೊಸಪೇಟೆ, ಸಂಡೂರು, ಬೆಳಗಾವಿ, ಗೋಕಾಕ್‌, ಕಿತ್ತೂರು, ಸವದತ್ತಿ, ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ಬೀದರ್‌, ಬಸವ ಕಲ್ಯಾಣ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಮುದ್ದೇನಹಳ್ಳಿ, ನಂದಿಬೆಟ್ಟ, ಚಿತ್ರದುರ್ಗ, ಹಿರಿಯೂರು, ಬಗಲಿ, ಮುಂತಾದ 70 ತಾಣಗಳನ್ನು ಆದ್ಯತಾ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಚಿಂತಿಸಿದೆ.

ನೀತಿಯ ಪ್ರಮುಖಾಂಶಗಳು
1 ಸುಮಾರು 18 ಬಗೆಯ ಪ್ರವಾಸೋದ್ಯಮಕ್ಕೆ ಉತ್ತೇಜನ
2 70 ಆದ್ಯತಾ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವುದು
3 ಎಂಟು ಜಿಲ್ಲೆಗಳನ್ನು ಆದ್ಯತಾ ಪ್ರವಾಸಿ ತಾಣಗಳೆಂದು ಪರಿಗಣಿಸಿ ಅಭಿವೃದ್ಧಿ
4ಬಂಡವಾಳ ಹೂಡಿಕೆ ಉತ್ತೇಜನಕ್ಕಾಗಿ ಸಹಾಯಧನ
5 ಪ್ರೋತ್ಸಾಹ ಧನ ನೀಡಿಕೆ ಜತೆಗೆ ಉದ್ಯೋಗ ಸೃಷ್ಟಿ
6 ಆರ್ಥಿಕ ಬೆಳವಣಿಗೆಗೆ
ಒತ್ತು
7 ಪ್ರವಾಸೋದ್ಯಮ ಯೋಜನೆಗಳಿಗೆ ಆಯ್ದ ವಿನಾಯಿತಿ
8 ಐದು ವರ್ಷಗಳಲ್ಲಿ ಪ್ರವಾಸೋ ದ್ಯಮ ಕ್ಷೇತ್ರಕ್ಕೆ ಹೊಸ ರೂಪ

ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಆಕರ್ಷಣೆ, ಸಂಪರ್ಕ, ಸೌಲಭ್ಯ, ವಾಸ್ತವ್ಯ, ಚಟುವಟಿಕೆ (5ಎ- ಅಟ್ರಾಕ್ಷನ್‌, ಆಕ್ಸೆಸೆಬಿಲಿಟಿ, ಅಮಿನಿಟಿಸ್‌, ಅಕಮಡೇಷನ್‌, ಆ್ಯಕ್ಟಿವಿಟಿ)ಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ.
-ಸಿ.ಟಿ. ರವಿ, ಪ್ರವಾಸೋದ್ಯಮ ಸಚಿವ

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next