ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಗುರುವಾರ ಕೇಂದ್ರ ಸರಕಾರ ಮತ್ತು ದಕ್ಷಿಣ ಭಾರತ ರಾಜ್ಯಗಳ ನಡುವೆ ಎರಡು ದಿನಗಳ ಸಭೆ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಕೆಲವು ವಿಚಾರಗಳ ಸಂಬಂಧ ತಿಕ್ಕಾಟವೂ ನಡೆದಿದೆ.
ಕಳೆದ ಎರಡು ವರ್ಷಗಳಿಂದ ಕಾಡಿದ ಕೊರೊನಾದಿಂದಾಗಿ, ಪ್ರವಾಸೋದ್ಯಮ ಮತ್ತು ಇದಕ್ಕೆ ಹೊಂದಿ ಕೊಂಡಂತಿರುವ ಬಹುತೇಕ ಕ್ಷೇತ್ರಗಳು ತೀರಾ ನಷ್ಟ ಅನುಭವಿಸಿವೆ. ಅಂದರೆ ಹೊಟೇಲ್, ಆತಿಥ್ಯ ವಲಯ, ಸಾರಿಗೆ ಕ್ಷೇತ್ರಗಳೂ ಸಾಕಷ್ಟು ಸೊರಗಿವೆ. ಇಂಥ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಸಭೆ ನಡೆಯುತ್ತಿರುವುದು ಸ್ವಾಗತಾರ್ಹವೇ. ಈಗ ಜರೂರತ್ತಾಗಿ ಆಗಬೇಕಾಗಿರುವುದು ಪ್ರವಾಸಿ ತಾಣಗಳಿಗೆ ಜನರನ್ನು ಕರೆತರುವುದು. ಒಂದಿಲ್ಲೊಂದು ಕಾರಣಗಳು ಅಥವಾ ಅವಕಾಶಗಳಿಂದಾಗಿ ಇತರ ವಲಯಗಳು ಚೇತರಿಕೆ ಹಾದಿಯಲ್ಲಿದ್ದರೂ, ಪ್ರವಾಸೋದ್ಯಮ ವಲಯ ಮಾತ್ರ ಇನ್ನೂ ಚೇತರಿಕೆಯಾಗುವ ಹಂತ ತಲುಪಿಲ್ಲ ಎಂಬುದನ್ನು ಮರೆಯದೇ ನೆನಪಿಟ್ಟುಕೊಳ್ಳಬೇಕಾದ ಸಂಗತಿ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಪ್ರಮುಖವಾಗಿ ಪ್ರಸಾದ ಮತ್ತು ಸ್ವದೇಶ ದರ್ಶನ ಯೋಜನೆ ಕುರಿತಂತೆ ಚರ್ಚೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅನುದಾನ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿ ಕೇಂದ್ರ ಸರಕಾರ ನೇರವಾಗಿ ರಾಜ್ಯ ಸರಕಾರಗಳತ್ತ ಬೆಟ್ಟು ಮಾಡಿದೆ. ಅಂದರೆ ಯೋಜನೆಗಳಿಗೆ ಇನ್ನೂ ಏಕೆ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ಪ್ರಶ್ನೆಗೆ ಕೇಂದ್ರ ಸರಕಾರ, ನೀವೇ ಸರಿಯಾಗಿ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಹೇಳಿದೆ.
ವಿಚಿತ್ರವೆಂದರೆ ಯಾರೊಬ್ಬರೂ ಪರಸ್ಪರ ದೂರಿಕೊಳ್ಳುವ ಸ್ಥಿತಿಯಂತೂ ಸದ್ಯ ಇಲ್ಲ. ಈಗ ಇರುವುದು ಕೇವಲ ಹೊಂದಾಣಿಕೆಯಷ್ಟೇ. ಪರಸ್ಪರ ದೂರುವುದನ್ನು ಬಿಟ್ಟು, ಒಟ್ಟಾಗಿ ಕೆಲಸ ಮಾಡಬೇಕು. ಹಾಗೆಯೇ ಕೇಂದ್ರ ಸರಕಾರ, ರಾಜ್ಯದ ಯೋಜನೆಗಳ ಬಗ್ಗೆ ದೂರುವುದನ್ನು ಬಿಟ್ಟು, ಸಕಾರಾತ್ಮಕವಾಗಿ ಸ್ಪಂದಿಸಬೇಕು.
ಇದರ ಜತೆಗೆ ಗುರುವಾರದ ಸಭೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತಂತೆ ಪ್ರಮುಖವಾಗಿ ಚರ್ಚಿಸಿದೆ. ಕರ್ನಾಟಕದ ಹಂಪಿ ಸೇರಿದಂತೆ ಕೆಲವು ಪ್ರವಾಸಿ ತಾಣಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ರಾಜ್ಯ ಸರಕಾರಗಳಿಗೆ ಯಾವುದೇ ಅಧಿಕಾರವಿಲ್ಲ. ಪುರಾತತ್ವ ಇಲಾಖೆಗೆ ಹೇಳಿದರೆ ಸರಿಯಾದ ಸಮಯಕ್ಕೆ ಮಾಡುತ್ತಲೂ ಇಲ್ಲ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸ್ವಲ್ಪ ಮಟ್ಟಿನ ಹಗ್ಗ ಜಗ್ಗಾಟ ನಡೆದಿದೆ. ಒಂದು ಕೇಂದ್ರ ಸರಕಾರವೇ ತನ್ನ ಅಡಿಯಲ್ಲಿ ಇರುವ ಭಾರತೀಯ ಪುರಾತತ್ವ ಇಲಾಖೆಗೆ ಹೇಳಿ, ಅಗತ್ಯವಿರುವ ಅಭಿವೃದ್ಧಿ ಕೆಲಸ ಮಾಡಬೇಕು. ಇಲ್ಲವೇ ರಾಜ್ಯಗಳಿಗೇ ಅಭಿವೃದ್ಧಿ ಕಾರ್ಯ ನಡೆಸಲು ಅವಕಾಶ ಕೊಡಬೇಕು.
ಇನ್ನು ಮೈಸೂರಿನ ಚಾಮುಂಡಿಬೆಟ್ಟ ಸೇರಿದಂತೆ ಪ್ರಸಾದ್ ಯೋಜನೆ ಅಡಿಯಲ್ಲಿ ಮಾಡಬೇಕಾಗಿರುವ ಕೆಲಸಗಳಿಗೂ ಅಗತ್ಯ ಅನುದಾನವನ್ನು ಕೇಂದ್ರ ಸರಕಾರ ಈ ಕೂಡಲೇ ಬಿಡುಗಡೆ ಮಾಡಬೇಕು. ಯಾವುದೇ ಕಾರಣಕ್ಕೂ ಬೇರೆ ನೆಪಗಳನ್ನು ಹೇಳಿಕೊಂಡು ಅನುದಾನಕ್ಕೆ ಕೊಕ್ಕೆ ಹಾಕಬಾರದು.