ಬೆಂಗಳೂರು: ಕೋವಿಡ್ 19 ವೈರಸ್ ಸುಳಿಗೆ ಸಿಲುಕಿ ಎಲ್ಲಾ ಉದ್ಯಮಗಳು ಮತ್ತೆ ಕಾರ್ಯಾರಂಭ ಮಾಡುತ್ತಿವೆ. ಆದರೆ, ಟ್ರಾವೆಲ್ ಏಜೆನ್ಸಿಗಳು ಮಾತ್ರ ಬಾಗಿಲು ತೆರೆಯದ ಸ್ಥಿತಿಯಲ್ಲೇ ಇವೆ. ಪ್ರವಾಸೋದ್ಯಮವನ್ನೇ ನಂಬಿರುವ ಟ್ರಾವೆಲ್ ಉದ್ಯಮ ತಕ್ಷಣಕ್ಕೆ ಪ್ರಾರಂಭವಾಗುವ ಲಕ್ಷಣ ಕಾಣುತ್ತಿಲ್ಲ. ರಾಜ್ಯದಲ್ಲಿ ಪ್ರವಾಸದ ಸೀಸನ್‌ನಲ್ಲಿ ಲಾಕ್‌ಡೌನ್ ಆರಂಭವಾಗಿರುವುದರಿಂದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳು ಆದಾಯವಿಲ್ಲದೆ ಟ್ರಾವೆಲ್ ಏಜೆನ್ಸಿಯವರು ಕಾಲ ದೂಡಿದರು.
ಈಗ ಲಾಕ್‌ಡೌನ್ ಸಡಿಲಿಕೆಯಾದರೂ ಸೋಂಕು ಭೀತಿಯಿಂದ ಜನರು ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮುಂದಿನ 6 ತಿಂಗಳು ಪ್ರವಾಸೋದ್ಯಮಕ್ಕೆ ಕಂಟಕ ಎದುರಾಗಲಿದೆ. ವಿಶೇಷವಾಗಿ ಅಂತಾರಾಷ್ಟ್ರೀಯ ಪ್ರವಾಸಿಗರು ರಾಜ್ಯಕ್ಕೆ ಆಗಮಿಸುವುದು ಅನುಮಾನ. ರಾಜ್ಯದ ಜನರೂ ವಿದೇಶ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುವುದರಿಂದ ಟ್ರಾವೆಲ್ ಏಜೆನ್ಸಿಗಳು ಬಾಗಿಲು ತೆರೆದರೂ ಅನಗತ್ಯ ವೆಚ್ಚ ಹೆಚ್ಚಾಗುವ ಆತಂಕದಲ್ಲಿದ್ದಾರೆ.
ಉದ್ಯೋಗದ ಮೇಲೆ ಕರಿನೆರಳು: ಜಗತ್ತಿನಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡುವ ಪ್ರವಾಸೋದ್ಯಮ. ರಾಜ್ಯದಲ್ಲಿ ಸುಮಾರು 2- 3 ಸಾವಿರಕ್ಕೂ ಹೆಚ್ಚು ಟ್ರಾವೆಲ್ ಏಜೆನ್ಸಿಗಳಿದ್ದು, ಲಕ್ಷಾಂತರ ಜನರು ಸ್ವಂತ ಟ್ಯಾಕ್ಸಿ ಇಟ್ಟುಕೊಂಡು ಪ್ರವಾಸಿಗರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಅಲ್ಲದೆ, ವಿಶ್ವ ಪ್ರಸಿದಟಛಿ ಹಾಗೂ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಟ್ರಾವೆಲ್ ಗೈಡ್‌ಗಳಾಗಿ, ಪ್ರವಾಸಿ ತಾಣಗಳಲ್ಲಿ ಸ್ಥಳೀಯ ಉತ್ಪನ್ನ ಮಾರಾಟ ಮಾಡುವ ವರು, ಹೋಟೆಲ್ ಗಳು, ಪ್ರವಾಸಿಗರನ್ನೇ ನಂಬಿರುವ ಗುಡಿ ಕೈಗಾರಿಕೆಗಳಿಂದ ತಯಾರಿಸುವ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡುವವರು ಸೇರಿದಂತೆ ಲಕ್ಷಾಂತರ ಜನರ ಬದುಕು ಲಾಕ್‌ಡೌನ್ ಮುಗಿದರೂ ಚೇತರಿಕೆ ಕಷ್ಟ ಸಾಧ್ಯವಾಗಿದೆ.
ಪರಿಗಣನೆಯಾಗದ ಉದ್ಯಮ: ಪ್ರವಾಸಿಗರಿಗೆ ಜಗತ್ತನ್ನು ನೋಡಲು ದಾರಿ ತೋರುವ ಟ್ರಾವೆಲ್ ಏಜೆನ್ಸಿಗಳು ಒಂದು ಉದ್ಯಮವಾಗಿ ಬೆಳೆಯುವಲ್ಲಿ ವಿಫಲವಾಗಿದ್ದು, ಕೇಂದ್ರ ಸರ್ಕಾರವೂ ಟ್ರಾವೆಲ್ ಏಜೆನ್ಸಿ ಗಳನ್ನು ಎಂಎಸ್ ಎಂಇ ಪಟ್ಟಿಯಲ್ಲೂ ಸೇರಿಸದಿವುದರಿಂದ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ದಿಂದ ಯಾವುದೇ ರೀತಿಯ ಪರಿಹಾರ ಸಿಗದಂತಾಗಿದೆ ಎಂದು ಏಜೆನ್ಸಿ ಮಾಡಿಕೊಂಡಿರುವವರು ಆರೋಪಿಸುತ್ತಿದ್ದಾರೆ. ಎಂಎಸ್‌ಎಂಇ ವಿಭಾಗದಲ್ಲಿ ನೋಂದಣಿ ಮಾಡಿಸಿ ಕೊಂಡ ಸಂಸ್ಥೆಗಳಿಗೆ ಮಾತ್ರ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಪ್ರೋತ್ಸಾಹದಾಯಕ ಪರಿಹಾರ ಘೋಷಣೆ ಮಾಡಿದೆ.
ಹೀಗಾಗಿ ಬಹುತೇಕ ಟ್ರಾವೆಲ್ ಏಜೆನ್ಸಿಗಳು ಕೇಂದ್ರದ ಪ್ರೋತ್ಸಾಹದಿಂದ ವಂಚಿತವಾಗಿದ್ದು, ಈ ಕ್ಷೇತ್ರದಲ್ಲಿ ಮುಂದಿನ ಭವಿಷ್ಯ ನಿರ್ಮಿಸಿಕೊಳ್ಳುವುದು ಏಜೆನ್ಸಿಗಳಿಗೆ ಕಷ್ಟವಾಗಿದೆ. ಅಲ್ಲದೆ ಆನ್‌ಲೈನ್ ಏಜೆನ್ಸಿಗಳು ಆರಂಭವಾಗಿ ಕಡಿಮೆ ಬೆಲೆಗೆ ಪ್ರಯಾಣದ ಟಿಕೆಟ್, ಹೋಟೆಲ್ ರೂಮ್ ಗಳನ್ನು ಬುಕ್ ಮಾಡಲು ಕಡಿಮೆ ದರಕ್ಕೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲು ಪೈಪೋಟಿಗೆ ಬಿದ್ದಿ ದ್ದವು. ಈ ವೇಳೆಯಲ್ಲಿಯೇ ಲಾಕ್‌ಡೌನ್ ಮಾಡಿದ್ದರಿಂದ ಮತ್ತೆ ಕೆಲಸ ಆರಂಭಿಸಲು ಹಿಂದೇಟು ಹಾಕುವಂತಾಗಿದೆ.
ಉತ್ತೇಜನಕ್ಕೆ ಪ್ರಯತ್ನ: ಕೆಲವು ರಾಷ್ಟ್ರಗಳು ಕೋವಿಡ್ 19 ಸಂಕಷ್ಟದಿಂದ ಹೊರ ಬರಲು ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೆ ಆದ್ಯತೆ ನೀಡಲು ಮುಂದಾಗುತ್ತಿವೆ. ಈಗಾಗಲೇ ಜಪಾನ್ ವಿದೇಶಿ ಪ್ರವಾಸಿಗರ ಪ್ರಯಾಣ, ಪ್ರವಾಸಕ್ಕೆ ಶೇ.50 ರಿಯಾಯ್ತಿ ನೀಡುವುದಾಗಿ ಘೋಷಣೆ ಮಾಡಿದೆ. ಕೇಂದ್ರ-ರಾಜ್ಯ ಸರ್ಕಾರ ಅದೇ ರೀತಿ ಪ್ರವಾಸಿಗರನ್ನು ಆಕರ್ಷಿಸಲು ಈ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ.
ಸ್ವಂತ ಕಾರುಲ್ಲವರ ಪ್ರವಾಸ: ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಸ್ವಂತ ಕಾರಿದ್ದವರು ಮಾತ್ರ ಪ್ರವಾಸ ಮಾಡಲು ಆಸಕ್ತಿ ತೋರುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಾರಿಲ್ಲದವರು ಪ್ರವಾಸ ಮುಂದೂಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಟೂರಿಸ್ಟ್ ಟ್ರಾವೆಲ್ ಏಜೆನ್ಸಿಗಳು ಲಾಕ್‌ಡೌನ್ ಸಡಿಲಿಕೆ ನಂತರವೂ ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.
ಉಷ್ಣವಲಯ ರಾಷ್ಟ್ರಗಳಿಂದ ಅವಕಾಶ?: ಸದ್ಯದ ಪರಿಸ್ಥಿತಿಯಲ್ಲಿ ಉಷ್ಣವಲಯದ ರಾಷ್ಟ್ರಗಳಾದ ಸಿಂಗಾಪುರ, ಥೈಲ್ಯಾಂಡ್, ನ್ಯೂಜಿಲೆಂಡ್, ಶ್ರೀಲಂಕಾ, ವಿಯೆಟ್ನಾಂ, ಆಸ್ಟ್ರೇಲಿಯಾ ರಾಷ್ಟ್ರಗಳು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ವಕಾಶ ಕಲ್ಪಿಸಬಹುದು. ಆದರೆ, ಶೀತ ವಲಯದಲ್ಲಿರುವ ಯುರೋಪ್ ರಾಷ್ಟ್ರಗಳು ಪ್ರವಾಸಿಗರಿಗೆ ತೆರೆದುಕೊಳ್ಳುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಪ್ರವಾಸೋದ್ಯಮ ಉತ್ತೇಜನಕ್ಕೆ ಪ್ರವಾಸಿಗರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಸದ್ಯಕ್ಕೆ ಅಂತಾರಾಷ್ಟ್ರೀಯ ಪ್ರವಾಸಿಗರು ಬರುವುದು ಕಷ್ಟ. ಹೀಗಾಗಿ ಸ್ಥಳೀಯ ಪ್ರವಾಸಿಗರನ್ನು ಆಕರ್ಷಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ.
-ಕುಮಾರ್ ಪುಷ್ಕರ್, ಕೆಎಸ್‌ಟಿಡಿಸಿ ಎಂಡಿ
* ಶಂಕರ ಪಾಗೋಜಿ