Advertisement

ಪ್ರವಾಸೋದ್ಯಮ ಬೆಳವಣಿಗೆ: 2ನೇ ಸ್ಥಾನಕ್ಕೆ ಯತ್ನ

11:43 AM Jul 28, 2018 | |

ಬೆಂಗಳೂರು: ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಯಲ್ಲಿ ಕರ್ನಾಟಕವು ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, 2ನೇ ಸ್ಥಾನಕ್ಕೇರಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ಪ್ರೋತ್ಸಾಹಿಸಲು ಪ್ರಯತ್ನಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹೇಳಿದರು.

Advertisement

ಸ್ಪಿಯರ್‌ ಟ್ರಾವೆಲ್‌ ಮೀಡಿಯಾ ಸಂಸ್ಥೆ ಬೆಂಗಳೂರು ಅರಮನೆಯಲ್ಲಿ ಹಮ್ಮಿಕೊಂಡಿರುವ “ಇಂಡಿಯಾ ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಮಾರ್ಟ್‌- 2018′ ಪ್ರವಾಸ,  ಪ್ರವಾಸೋದ್ಯಮ ಸಂಬಂಧಿತ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಆಯ್ದ ವನ್ಯಜೀವಿಗಳು ದೇಶದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ರಾಜ್ಯದಲ್ಲಿವೆ. ಹಾಗಿದ್ದರೂ ಕೆಲ ರಾಜ್ಯಗಳು ತಮ್ಮಲ್ಲಿ ಅತಿ ಹೆಚ್ಚು ವನ್ಯಜೀವಿಗಳಿವೆ ಎಂಬುದಾಗಿ ಪ್ರಚಾರ ನಡೆಸಿ ಪ್ರವಾಸಿಗರನ್ನು ಸೆಳೆಯುತ್ತಿವೆ.

ರಾಜ್ಯದ ಪ್ರವಾಸಿ ತಾಣಗಳು, ಪ್ರೇಕ್ಷಣೀಯ ಸ್ಥಳಗಳು, ಪ್ರಕೃತಿ ಸೌಂದರ್ಯ ತಾಣ ಸೇರಿದಂತೆ ಇತರೆ ಪ್ರವಾಸಿ ವೈವಿಧ್ಯದ ಬಗ್ಗೆ ರಾಜ್ಯ ಹಾಗೂ ದೇಶದ ಜನರಿಗೆ ಪರಿಚಯಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಜಲಪಾತ ಸರ್ಕಿಟ್‌ಗೆ ಒತ್ತು: ಕಳೆದ ವರ್ಷ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರನ್ನು ಸೆಳೆಯಲು ವಿಶೇಷ ಜಲಪಾತ ಸರ್ಕಿಟ್‌ ರೂಪಿಸಲು ಪ್ರಯತ್ನ ನಡೆದಿತ್ತು. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಗತವಾಗಲಿಲ್ಲ.

Advertisement

ಮುಂದಿನ ವರ್ಷ ಜಲಪಾತ ಸರ್ಕಿಟ್‌ ರೂಪಿಸಿ ಜಾರಿಗೊಳಿಸಲಾಗುವುದು. ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಜಲಪಾತ ಸರ್ಕಿಟ್‌ ಮಾಡಿದ್ದರೆ ಉಪಯುಕ್ತವಾಗುತ್ತಿತ್ತು. ಈ ಬಗ್ಗೆ ಬೇಸರ ಬೇಡ. ಮುಂದಿನ ನಾಲ್ಕು ವರ್ಷವೂ ಉತ್ತಮ ಮಳೆಯಾಗುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುವರ್ಣ ರಥ ಲಾಭದ ಹಳಿಗೆ: ಸುವರ್ಣ ರಥ ಪ್ರವಾಸಿ ರೈಲು ಸೇವೆಯಿಂದ ಸುಮಾರು 40 ಕೋಟಿ ರೂ. ನಷ್ಟ ಉಂಟಾಗಿತ್ತು. ನಂತರ ಈ ವಿಶೇಷ ಪ್ರವಾಸಿ ರೈಲು ಸೇವೆಯತ್ತ ಪ್ರವಾಸಿಗರನ್ನು ಆಕರ್ಷಿಸಲು ಒತ್ತು ನೀಡಲಾಗಿದ್ದು, 12 ಲಕ್ಷ ರೂ. ಲಾಭ ಗಳಿಸಿದೆ. ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸುವರ್ಣ ರಥದ ಒಳ ಆವರಣ ನವೀಕರಿಸಲಾಗುತ್ತಿದೆ.

ವಿಶೇಷ ಪ್ಯಾಕೇಜ್‌ಗಳನ್ನು ಸದ್ಯದಲ್ಲೇ ಅಂತಿಮಗೊಳಿಸಲಾಗುವುದು ಎಂದು ಹೇಳಿದರು. ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್‌, ಸ್ಪಿಯರ್‌ ಟ್ರಾವೆಲ್‌ ಮೀಡಿಯಾ ನಿರ್ದೇಶಕ ರೋಹಿತ್‌ ಹಾನಲ್‌ ಉಪಸ್ಥಿತರಿದ್ದರು. 

450 ಸಂಸ್ಥೆಗಳು ಭಾಗಿ: “ಇಂಡಿಯಾ ಇಂಟರ್‌ನ್ಯಾಷನಲ್‌ ಟ್ರಾವೆಲ್‌ ಮಾರ್ಟ್‌- 2018′ ಬೆಂಗಳೂರು ಅರಮನೆಯಲ್ಲಿ ಆರಂಭವಾಗಿದ್ದು, 450ಕ್ಕೂ ಹೆಚ್ಚು ಸಂಸ್ಥೆಗಳು ಪಾಲ್ಗೊಂಡಿವೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವಿಶೇಷ ಮಳಿಗೆ ತೆರೆದಿದೆ.

ಜತೆಗೆ 20 ರಾಜ್ಯಗಳು ಹಾಗೂ 15 ದೇಶಗಳ ಪ್ರವಾಸೋದ್ಯಮ ಸಂಬಂಧಿ ಸಂಸ್ಥೆಗಳು ಪಾಲ್ಗೊಂಡಿವೆ. ಮುಖ್ಯವಾಗಿ ಟ್ರಾವೆಲ್‌ ಏಜೆಂಟ್‌, ಟೂರ್‌ ಆಪರೇಟರ್‌ಗಳು, ಹೋಟೆಲ್‌, ರೆಸಾರ್ಟ್ಸ್, ಕ್ರೂಸರ್, ಏರ್‌ಲೈನ್ಸ್‌ ಸಂಸ್ಥೆಗಳು, ಆನ್‌ಲೈನ್‌ ಟ್ರಾವೆಲ್‌ ಪೋರ್ಟಲ್‌ ಸಂಸ್ಥೆಗಳು ಪಾಲ್ಗೊಂಡಿವೆ. ಭಾನುವಾರದವರೆಗೆ ಪ್ರದರ್ಶನವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next