Advertisement
ಮುಂಗಾರು ಪ್ರಾರಂಭವಾಗಿ ತಿಂಗಳುಗಳೇ ಕಳೆದಿತ್ತು. ಸ್ನೇಹಿತರಾದ ಹರ್ಷ, ಭುವನ್ ಹಾಗೂ ಸಾಯಿಕಿರಣ ಫೋನ್ ಮೂಲಕ ಕರೆ ಮಾಡಿ “ಎಲ್ಲಿಗಾದರು ಹೊರಗಡೆ ಹೋಗಿ ಸುತ್ತಿ ಬರೋಣವೆ” ಎಂದು ಕೇಳಿದಾಗ ನನಗೆ ಎಲ್ಲಿಲ್ಲದ ಖುಶಿ. ಒಂದು ಗಂಟೆಯ ಚರ್ಚೆಯ ನಂತರ ನಾವು ಹೋಗುವ ಜಾಗ ನಿಗದಿಯಾಯಿತು. ನಾವು ಹೊರಟದ್ದು ಸಕಲೇಶಪುರದ ಹತ್ತಿರ ಇರುವ ಒಂಬತ್ತು ಗುಡ್ಡದ ಚಾರಣ. ನಮ್ಮ ತಂಡ ಸಕಲೇಶಪುರ ತಲುಪುವಾಗ ಬೆಳಿಗ್ಗೆ 7 ಗಂಟೆಯಾಗಿತ್ತು. ನಮ್ಮ ಅದೃಷ್ಟ ಕೈಕೊಟ್ಟ ಕಾರಣ, ಕಾರಣಾಂತರದಿಂದ ಚಾರಣದ ಯೋಜನೆಯನ್ನು ಕೈ ಬಿಡಲಾಗಿತ್ತು. ನಾವು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಲ್ಲಿಂದ ಹೊರಡುವ ಸಿದ್ದತೆ ಮಾಡಿದೆವು.
Related Articles
Advertisement
ಅದು ಸುಮಾರು 8 ಕಿಲೋಮೀಟರ್ ಕಿಂತಲು ಅಧಿಕ ಚಾರಣ ಎಂದು ತಿಳಿಯಿತು. ನಾವು ಮೊದಲು ಯೋಚಿಸಿದ ಹಾಗೆ ದಾರಿ ಮಧ್ಯ ತಿನ್ನಲು ಕುಡಿಯಲು ಬೇಕಾದ ವಸ್ತುಗಳನ್ನು ಎಲ್ಲರೂ ಬ್ಯಾಗಿನಲ್ಲಿ ತಂದಿದ್ದೆವು. ಕಾಡಿಗೆ ಹೊರಟ ಮೇಲೆ ಜಿಗಣೆ ಕಾಟ ಇದ್ದೆ ಇರುತ್ತದೆ ಎಂದು ಉಪ್ಪು ಕೂಡ ತಂದಿದ್ದೆವು. ಚಾರಣದ ಆರಂಭದಲ್ಲಿ ಶೋಲಾ ಅರಣ್ಯದ ಸಣ್ಣ ಕಾಡನ್ನು ದಾಟಿದೆವು. ಅಲ್ಲಿ ನಮ್ಮ ಮಾರ್ಗದರ್ಶಿಯಾಗಿ ಬಂದ ಇಲಾಖೆಯ ಸಂತೋಷ್ ಅಣ್ಣ ಕಾಡಿನಲ್ಲಿ ಕಂಡ ಕೆಲವೊಂದು ಅಪರೂಪದ ಮರ, ಹಕ್ಕಿ, ಕಪ್ಪೆ, ಹಾರುವ ಹಲ್ಲಿಯ ವಿವರವನ್ನು ತಿಳಿಸಿದರು. ಚಾರಣದ ಹಾದಿಯುದ್ದಕ್ಕೂ ಅವರು ತಿಳಿಸಿದ ಕಾಡಿನ ಹಾಗೂ ಕಾಡು ಪ್ರಾಣಿಗಳ ವಿಷಯಗಳನ್ನು ಕೇಳಲು ಬಲು ಚಂದವಾಗಿತ್ತು. ಅವರ 19 ವರ್ಷಗಳ ಕಾಡಿನ ಸೇವೆ ಅವರ ಮಾತಿನಲ್ಲಿ ಕೇಳಿ ಬರುತ್ತಿತ್ತು. ಮಾತಿನ ನಡುವೆ ನಾವು ಕಾಡು ದಾಟಿ ಶೋಲಾ ಹುಲ್ಲುಗಾವಲಿಗೆ ತಲುಪಿದೆವು.
ಅದೊಂದು ಅತ್ಯಂತ ಸುಂದರ ನೋಟ, ಬೇರೆಯೇ ಪ್ರಪಂಚ ತೆರೆದ ಅನುಭವ, ಕಾಲಿನಲ್ಲಿ ಜಿಗಣೆಗಳು ಆಗಲೇ ರಕ್ತ ಹೀರಲು ಶುರುಮಾಡಿದ್ದವು. ಜಿಗಣೆಗಳನ್ನು ಕಾಲಿನಿಂದ ತೆಗೆದರೆ ನಿಲ್ಲದ ರಕ್ತ, ಇವೆಲ್ಲವು ಒಂದು ಹೊಸ ಅನುಭವ. ಅರ್ಧ ದಾರಿಯ ಸುಸ್ತು ಕಳೆಯಲು ಸರಿಯಾದ ಜಾಗ ನೋಡಿ ಕುಳಿತೆವು. ಸಂತೋಷ್ ಅಣ್ಣ ನ ಅನುಭವದ ಬುತ್ತಿ ಇನ್ನು ಹಾಗೆ ಇತ್ತು. ಶೋಲಾ ಹುಲ್ಲುಗಾವಲು ಉಪಯೋಗದ ಮಾಹಿತಿ ನಮ್ಮನ್ನು ಇನ್ನಷ್ಟು ಪ್ರಕೃತಿಯ ಅಡಿಯಲ್ಲಿ ಇರಲು ಪ್ರೇರಿಸಿತು. ಅಲ್ಲಿಂದ ಹೊರಟ ನಾವು ಬೆಟ್ಟದ ಸುತ್ತ ಹೆಜ್ಜೆ ಹಾಕುತ್ತಾ ನಮ್ಮ ಚಾರಣವನ್ನು ಮುಂದುವರಿಸಿದೆವು.
ಮಧ್ಯಾಹ್ನದ ಸಮಯ, ನಾವು ನಮ್ಮ ಚಾರಣದ ಒಂದನೇ ಭಾಗ ಅಂದರೆ ಬೆಟ್ಟದ ತುತ್ತ ತುದಿ ತಲುಪಿದೆವು. ತಂದ ತಿಂಡಿ ಖಾಲಿ ಮಾಡಿ ಪ್ರಕೃತಿಯ ಆನಂದವನ್ನು ಕೆಲ ಕಾಲ ಸವಿದು ಬೆಟ್ಟಗಳ ಪರಿಚಯ ಪಡೆಯುತ್ತ ಕುಳಿತೆವು. ಅಲ್ಲಿ ಕಾಣುವುದು ಆ ಬೆಟ್ಟ, ಇಲ್ಲಿ ಕಾಣುವುದು ಈ ಬೆಟ್ಟ ಎಂದು ಸಂತೋಷ ಅಣ್ಣನ ಮಾತುಗಳು ಇಂದು ಕಿವಿಗಳಲ್ಲಿ ಜೀವಂತ. ನಮ್ಮ ಕುತೂಹಲ ಅವರನ್ನು ಇನ್ನಷ್ಟು ವಿಷಯ ಹೇಳಲು ಉತ್ತೇಜಿಸಿತು. ಎಲ್ಲೋ ದೂರದಲ್ಲಿ ಕಾಣುತ್ತಿದ್ದ ಕಾಡೆಮ್ಮೆಗಳ ಹಿಂಡು ಕಂಡು ನಮ್ಮಲ್ಲಿ ಸ್ವಲ್ಪ ಮಟ್ಟಿಗೆ ಭಯ ಕಾಡಿದರೂ ಸಂತೋಷ ಅಣ್ಣನ ಮಾತಿನ ನಡುವೆ ಮರೆತೆ ಹೋಯಿತು. ಜಿಟಿ ಜಿಟಿ ಮಳೆ ಇದ್ದಕ್ಕಿದ್ದಂತೆ ಶುರುವಾಯಿತು. ಬೆಟ್ಟದ ಮೇಲೆ ಗಾಳಿ ತುಂಬ ಜೋರಾಗಿ ಬೀಸುತ್ತಿದ್ದ ಕಾರಣ ನಮ್ಮ ಸುರಕ್ಷತೆಗೆ ನಾವು ಈಗಲೇ ಹೊರಡೋಣ ಎಂದು ಸಂತೋಷ್ ಅಣ್ಣ ಹೇಳಿದರು.
ಅವರ ಮಾತು ಕೇಳಿ ಸ್ವಲ್ಪ ಬೇಜಾರ್ ಆದರು, ಸರಿ ಎಂದು ಅವರ ಹಿಂದೆ ಹೊರಟೆವು. ಬಂದ ದಾರಿಯಲ್ಲಿ ಎಲ್ಲಿಯೂ ನಿಲ್ಲದೆ, ಕಾಡು ದಾಟಿ ನಮ್ಮ ನಮ್ಮ ವಾಹನ ಬಳಿಗೆ ಬಂದೆವು. ಮಳೆಯ ಕಾರಣ ಸ್ವಲ್ಪ ಕಷ್ಟವಾದರು ಎಲ್ಲರೂ ಕ್ಷೇಮವಾಗಿ ಬಂದೆವು. ನಮ್ಮನ್ನು ಆರಾಮವಾಗಿ ಕರೆದುಕೊಂಡು ಹೋದ ಸಂತೋಷ ಅಣ್ಣನಿಗೆ ಧನ್ಯವಾದ ತಿಳಿಸಿ, ಸಹಾಯ ಮಾಡಿದ ಇಲಾಖೆಯ ಸ್ನೇಹಿತನಿಗೂ ಧನ್ಯವಾದ ತಿಳಿಸಿ, ನಾವು ನಮ್ಮ ಮನೆ ಕಡೆ ಹೊರಟೆವು.
*ಶಿವರಾಮ್ ಕಿರಣ್. ಉಜಿರೆ