ಗಂಗಾವತಿ: ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ನ್ನು ಒಳಗೊಂಡ ಆನೆಗೊಂದಿ ಪ್ರವಾಸೋದ್ಯಮವನ್ನು ನಿರ್ಲಕ್ಷಿಸಿ ಪ್ರವಾಸೋದ್ಯಮ ಇಲಾಖೆ ಹೊಸಪೇಟೆಯ ಖಾಸಗಿ ಹೋಟೆಲ್ ನಲ್ಲಿ ಕನೆಕ್ಟ್ 2022 ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದಕ್ಕೆ ಆನೆಗೊಂದಿ ಭಾಗದ ಹೋಟೆಲ್ ಉದ್ಯಮಿಗಳು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಇತ್ತೀಚಿನ ಬಜೆಟ್ ನಲ್ಲಿ ಕಿಷ್ಕಿಂದಾ ಅಂಜನಾದ್ರಿ ಗೆ ನೂರು ಕೋಟಿ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೀಸಲಿರಿಸಿದ್ದಾರೆ. ಈ ಮಧ್ಯೆ ಪ್ರವಾಸೋದ್ಯಮ ಇಲಾಖೆ ಸಚಿವರು ಏಕಪಕ್ಷೀಯವಾಗಿ ಹೊಸಪೇಟೆ ಭಾಗವನ್ನು ಮಾತ್ರ ಸಂರಕ್ಷಣೆ ಮತ್ತು ಪ್ರವಾಸೋದ್ಯಮವಾಗಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದು ಇತಿಹಾಸ ಪ್ರಸಿದ್ಧ ಆನೆಗೊಂದಿ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆಂದು ಆನೆಗೊಂದಿ ಗ್ರಾ ಪಂ ಅಧ್ಯಕ್ಷ ತಿಮ್ಮಪ್ಪ ಬಾಳೆಕಾಯಿ ಆರೋಪಿಸಿದ್ದಾರೆ .
ಈ ಕುರಿತು ಉದಯವಾಣಿ ವೆಬ್ ಜತೆ ಮಾತನಾಡಿದ ಅವರು, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದುಕೊಂಡು ಆನೆಗೊಂದಿ ಭಾಗದ ಪ್ರವಾಸೋದ್ಯಮ ಬೆಳೆಯಲು ಪ್ರೋತ್ಸಾಹ ನೀಡದೆ ಹೊಸಪೇಟೆ ಸ್ವಂತ ಕ್ಷೇತ್ರದಲ್ಲಿ ಹೋಟೆಲ್ ಉದ್ಯಮಗಳನ್ನು ಆರಂಭಿಸಿ ಆನೆಗೊಂದಿ ಭಾಗದ ಹೋಟೆಲ್ ಗಳಿಗೆ ಬೀಗಮುದ್ರೆ ಹಾಕಿದ್ದಾರೆ. ಆನೆಗೊಂದಿ ಭಾಗಕ್ಕೆ ನೆಪಮಾತ್ರಕ್ಕೆ ಭೇಟಿ ನೀಡಿ ಹೋಟೆಲ್ ಗಳ ಬೀಗ ತೆಗೆಸುವ ಭರವಸೆ ನೀಡಿ ಅನಂತರ ಕಾಲಹರಣ ಮಾಡುತ್ತಿದ್ದಾರೆ. ಇದೀಗ ರಾಯಚೂರು ಕೊಪ್ಪಳ ಬಳ್ಳಾರಿ ಚಿತ್ರದುರ್ಗ ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸಲು ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಹೋಟೆಲ್ ರೆಸಾರ್ಟ್ ಉದ್ಯಮಿಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಹೊಸಪೇಟೆಯ ಖಾಸಗಿ ಹೋಟೆಲ್ ನಲ್ಲಿ ಕಾರ್ಯಾಗಾರವನ್ನು ಏರ್ಪಡಿಸಿ ಆನೆಗೊಂದಿ ಭಾಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದರು.
ಹಂಪಿ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಆನೆಗೊಂದಿ ಮಲ್ಲಾಪುರ ಸಣಾಪುರ ಸಂಗಾಪೂರ ಭಾಗದ 15 ಗ್ರಾಮಗಳು ಬರುತ್ತವೆ. ಪ್ರವಾಸೋದ್ಯಮ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ 1ಬಾರಿಯೂ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮದ ಕುರಿತು ಮತ್ತು ಈ ಭಾಗದ ಜನ ಜೀವನ ಮತ್ತು ಹೋಟೆಲ್ ಉದ್ಯಮಗಳನ್ನು ವ್ಯವಸ್ಥಿತವಾಗಿ ನಡೆಸುವ ಕುರಿತು ಸಭೆಯನ್ನು ನಡೆಸಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಪಂಜಾಬ್ ನಲ್ಲಿ ಎಷ್ಟು ಸೀಟು ಗೆದ್ದಿದ್ದೀರಿ?: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ
ಹಂಪಿ ಅಭಿವೃದ್ಧಿ ಪ್ರಾಧಿಕಾರದ ನೂತನ ಮಾಸ್ಟರ್ ಪ್ಲಾನ್ ಬದಲಾವಣೆ ಸಂದರ್ಭದಲ್ಲಿ ಸ್ಥಳೀಯ ಸ್ಟೇಕ್ ಹೋಲ್ಡರ್ ಗಳ ಅಭಿಪ್ರಾಯವನ್ನು ಪಡೆಯದೆ, ಏಕಪಕ್ಷೀಯವಾಗಿ ಹೊಸಪೇಟೆಯ ಖಾಸಗಿ ಹೋಟೆಲ್ ನಲ್ಲಿ ಸಭೆ ಸೇರಿ ಅಲ್ಲಿಯ ಹೋಟಲ್ ಲಾಬಿಗೆ ಮಣಿದು 2008 ರಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ತಯಾರಿಸಿದವರೇ ಇದೀಗ ಪುನಃ ಅದೇ ತಂಡದವರು 2022 ಮಾಸ್ಟರ್ ಪ್ಲಾನ್ ತಯಾರಿಸುವ ಕಾರ್ಯ ಮಾಡುತ್ತಿದ್ದಾರೆ ಆದ್ದರಿಂದ ಕೂಡಲೇ ಆನಂದ್ ಸಿಂಗ್ ಅವರನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತೆಗೆದು ಹಾಕುವಂತೆ ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲೇ ನಿಯೋಗ ತೆರಳಿ ಮನವಿ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸರ್ಕಾರ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗುದ್ದಿ ಭಾಗವನ್ನು ತೆಗೆದುಹಾಕಿ ಪ್ರತ್ಯೇಕವಾಗಿ ಕೊಪ್ಪಳ ಅಭಿವೃದ್ಧಿ ಪ್ರಾಧಿಕಾರದಲ್ಲಿ ಜೋಡಿಸಬೇಕು ಮತ್ತು ಕಿಷ್ಕಿಂದಾ ಅಂಜನಾದ್ರಿ ಅಭಿವೃದ್ದಿ ಮತ್ತು ಯೋಜನೆಗಳ ಕುರಿತು ಸ್ಥಳೀಯರು ಮತ್ತು ರಾಜಮನೆತನದವರಿಂದ ಸಲಹೆ ಸೂಚನೆ ಪಡೆಯುವಂತೆ ಒತ್ತಾಯಿಸಿದ್ದಾರೆ.