Advertisement

ಮತ್ತೆ ಚಿಗುರೊಡೆದ ಪ್ರವಾಸೋದ್ಯಮ

10:10 AM Sep 19, 2022 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಮತ್ತೆ ಚಿಗುರೊಡೆಯುತ್ತಿದ್ದು, ಕಳೆದ ಕೆಲವು ತಿಂಗಳುಗಳಿಂದ ಮಂಗಳೂರು ಸಹಿತ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ.

Advertisement

ದ.ಕ. ಜಿಲ್ಲೆಯಲ್ಲಿ ಕಳೆದ ವರ್ಷ ಪ್ರವಾಸೋದ್ಯಮ ವಲಯ ಕಳೆಗುಂದಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಪೆಟ್ಟು ಬಿದ್ದಿತ್ತು. ಈ ವರ್ಷ ಕೋವಿಡ್‌ ಭೀತಿ ಇರದ ಹಿನ್ನೆಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶದಂತೆ ಈ ವರ್ಷ ಜನವರಿಯಿಂದ ಆಗಸ್ಟ್‌ವರೆಗೆ ಜಿಲ್ಲೆಗೆ ವಿವಿಧ ಭಾಗಗಳಿಂದ 72,58,907 ಮಂದಿ ಪ್ರವಾಸಿಗರು ಆಗಮಿಸಿದ್ದಾರೆ.

ದ.ಕ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸಿದ ಮಂದಿ ಇಲ್ಲಿನ ಬೀಚ್‌ನ ಸೌಂದರ್ಯ ಆಸ್ವಾದಿಸಲು ಇಷ್ಟಪಡುತ್ತಾರೆ. ಸದ್ಯ ಜಿಲ್ಲೆಯಲ್ಲಿ ಬಿಸಿಲು-ಮಳೆ ಇದೆ. ಇದೇ ಕಾರಣಕ್ಕೆ ಪ್ರವಾಸಿಗರನ್ನು ಇನ್ನು ಕೂಡ ಬೀಚ್‌ಗಳಿಗೆ ಇಳಿಯಲು ಬಿಡುತ್ತಿಲ್ಲ. ಆದರೂ ಸದ್ಯ ಪ್ರತೀ ದಿನ ಸರಾಸರಿ 1,000 ಮಂದಿ ಬೀಚ್‌ನತ್ತ ಆಗಮಿಸುತ್ತಿದ್ದು, ವೀಕೆಂಡ್‌ಗಳಲ್ಲಿ 4ರಿಂದ 5 ಸಾವಿರ ಮಂದಿಗೆ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬಿಡುವು ನೀಡಿದರೆ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಇನ್ನು, ನಗರದ ಪಿಲಿಕುಳ ನಿಸರ್ಗಧಾಮದತ್ತಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅದರಂತೆ, ಮುಂದಿನ ದಿನಗಳಲ್ಲಿ ಮಳೆ ಬಿಡುವು ನೀಡಿದ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಬೀಚ್‌ಗಳಲ್ಲಿ ಮೂಲ ಸೌಕರ್ಯವಿಲ್ಲ

“ಮಂಗಳೂರಿಗೆ ಆಗಮಿಸಿದ ಹೆಚ್ಚಿನ ಮಂದಿ ಇಲ್ಲಿನ ಬೀಚ್‌ಗಳಿಗೆ ತೆರಳುತ್ತಾರೆ. ಆದರೆ ಬಹುತೇಕ ಬೀಚ್‌ಗಳಲ್ಲಿ ಮೂಲ ಸೌಕರ್ಯವಿಲ್ಲ.

Advertisement

ಇದೇ ಕಾರಣಕ್ಕೆ ಕರಾವಳಿ ಭಾಗದಿಂದ ಹೆಚ್ಚಿನ ಮಂದಿ ಗೋವಾ ಬೀಚ್‌ನತ್ತ ತೆರಳುತ್ತಿದ್ದಾರೆ. ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಪ್ರವಾಸಿಗರು.

ಆಕರ್ಷಣೆ ಪಡೆಯುತ್ತಿದೆ ಹೋಂಸ್ಟೇಗಳು

ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ತಂಗಲು ಅನುಕೂಲವಾಗುವಂತೆ ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾಗಿ ಹೋಂಸ್ಟೇ ನಿರ್ಮಾಣ ಕೂಡ ದ.ಕ. ಜಿಲ್ಲೆಯಲ್ಲಿ ಏರಿಕೆಯಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಈಗಾಗಲೇ 70ಕ್ಕೂ ಹೆಚ್ಚಿನ ಹೋಂಸ್ಟೇಗಳು ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಕೋವಿಡ್‌ ಏರಿಕೆಯ ಬಳಿಕ ಹೆಚ್ಚಿನ ಮಂದಿ ಹೋಂ ಸ್ಟೇ ನಿರ್ಮಾಣದ ಬಗ್ಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ವಿಚಾರಿಸುತ್ತಿದ್ದಾರೆ.

ಕೊರೊನಾ ಕಾರಣದಿಂದಾಗಿ ಕೆಲವು ಮಂದಿ ಕೆಲಸ ಕಳೆದುಕೊಂಡಿದ್ದು, ಅನೇಕರು ಹೋಂ ಸ್ಟೇ ನಿರ್ಮಾಣಕ್ಕೆ ಮುಂದೆ ಬರುತ್ತಿದ್ದಾರೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು.

ಪ್ರವಾಸಿಗರ ಸಂಖ್ಯೆ ಹೆಚ್ಚಳ: ಕೆಲವು ತಿಂಗಳುಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಆದರೆ ಸದ್ಯ ಜಿಲ್ಲೆಯ ಧಾರ್ಮಿಕ ಕೇಂದ್ರಗಳು, ಬೀಚ್‌ ಗಳು ಸಹಿತ ವಿವಿಧ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. –ಮಾಣಿಕ್ಯ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ‌

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next