Advertisement
ಅದು ನಮ್ಮೆಲ್ಲರಿಗೂ ತುಂಬಾ ಖುಷಿಯ ಸಮಯ. ಅಂತೂ ಇಂತೂ ಪ್ರವಾಸ ಹೋಗುವ ದಿನ ಬಂದೇ ಬಿಟ್ಟಿತು. ರಾತ್ರಿ ಯಾವಾಗ ಆಗುತ್ತೆ ಬಸ್ ಯಾವಾಗ ಬರುತ್ತೆ ಎಂದು ಎದುರು ನೋಡ ತೊಡಗಿದೆವು. ರಾತ್ರಿ 8:30 ರ ಸುಮಾರಿಗೆ ಬಸ್‌ನಲ್ಲಿ ನಮ್ಮ ಪ್ರಯಾಣ ಆರಂಭವಾಯಿತು. ಹಾಡು ಹಾಡುಹಾಡುತ್ತಾ, ಮಲಗಿದ್ದ ಗೆಳೆಯರ ಕಾಲೆಳೆಯುತ್ತಾ ಕೊನೆಯಲ್ಲಿ ನಾವೇ ನಿದ್ದೆಗೆ ಜಾರಿದೆವು.
Related Articles
Advertisement
ಮೈಸೂರಿಗೆ ಬಂದ ಮೇಲೆ ನಗರ ರಕ್ಷಕಿಯನ್ನು ಭೇಟಿಯಾಗಿ ಪ್ರಾರ್ಥನೆ ಸಲ್ಲಿಸದೆ ತೆರಳಲಾದೀತೇ! ಅಲ್ಲಿಂದ ಚಾಮುಂಡಿ ಬೆಟ್ಟಕ್ಕೆ ಹೋಗಿ ಚಾಮುಂಡಿ ದೇವಿ ದರ್ಶನ ಪಡೆದು “ಕೆ.ಆರ್.ಎಸ್.ಗಾರ್ಡನ್’ಗೆ ಹೋದಾಗ ಸಂಜೆಯಾಗಿತ್ತು. ಅಲ್ಲಿನ ವರ್ಣರಂಜಿತ ಸಂಗೀತಮಯ ಕಾರಂಜಿಯನ್ನು ನೋಡಿ ಆನಂದಿಸಿದೆವು. ಅನಂತರ ಬಸ್ ಹತ್ತಿ “ಕೆಮ್ಮಣ್ಣುಗುಂಡಿ’ಯತ್ತ ಪ್ರಯಾಣ ಬೆಳೆಸಿದೆವು. ಅಲ್ಲಿನ ತಂಪಾದ ವಾತಾವರಣ ಹಿತಕರವಾಗಿತ್ತು. ಬೆಟ್ಟಗಳ ತುದಿಯಲ್ಲಿ ಅರುಣೋದಯ ದೃಶ್ಯ ಅತ್ಯಂತ ಮನಮೋಹಕವಾಗಿತ್ತು. ಅಲ್ಲಿಯೇ ಬೆಳಗಿನ ಉಪಾಹಾರವನ್ನು ಮುಗಿಸಿ ಬೆಟ್ಟಗಳ ಸೌಂದರ್ಯವನ್ನು ಸವಿಯಲು ಹೊರಟೆವು. ಬೆಟ್ಟಗಳನ್ನು ಏರುತ್ತಾ ಕೇಕೆ ಹಾಕುತ್ತಾ ಸಿಳ್ಳೆ ಹೊಡೆಯುತ್ತಾ ಬೆಟ್ಟಗಳ ತುದಿಯಲ್ಲಿ ನಿಂತು ಅಲ್ಲಿನ ಸೊಬಗನ್ನು ಸವಿದೆವು.
ಒಟ್ಟಿನಲ್ಲಿ ಕೆಮ್ಮಣ್ಣುಗುಂಡಿಯಲ್ಲಿನ ಮನಮೋಹಕ ದೃಶ್ಯಗಳು ಮರೆಯಲಾಗದು. ಅಲ್ಲಿಂದ ಮುಂದೆ ನಮ್ಮ ಪಯಣ ಶೃಂಗೇರಿ ಶಾರದಾ ಪೀಠಕ್ಕೆ. ಮಧ್ಯಾಹ್ನದ ಹೊತ್ತಿಗೆ ಶೃಂಗೇರಿಗೆ ತಲುಪಿದೆವು. ಅಲ್ಲಿ ಶಾರದಾಂಬೆಯ ದರ್ಶನ ಮಾಡಿದೆವು. ಅಲ್ಲಿನ ಶಾಂತವಾದ ವಾತಾವರಣ ನಮ್ಮೆಲ್ಲ ಗೊಂದಲಗಳಿಗೆ ಉತ್ತರವನ್ನು ಹುಡುಕುವಂತಿತ್ತು. ಅನಂತರ ಅಲ್ಲಿನ ಕಣ್ಮನಸೆಳೆಯುವಂತಹ ಮೀನುಗಳನ್ನು ನೋಡಿದೆವು. ಅನಂತರ ಊಟ ಮುಗಿಸಿ ಕೊಲ್ಲೂರಿನ ಮುಖಾಂತರ “ಮುರುಡೇಶ್ವರ’ವನ್ನು ರಾತ್ರಿ ತಲುಪಿದೆವು. ಬೆಳಗಿನ ಜಾವ ರೆಡಿಯಾಗಿ ಶಿವನ ದರ್ಶನ ಪಡೆದು ಅಲ್ಲಿನ ಭೂಕೈಲಾಸ ಗುಹೆಯ ಒಳಗೆ ಹೋದೆವು. ಅಲ್ಲಿ ರಾವಣನು ಆತ್ಮಲಿಂಗವನ್ನು ಪಡೆದದ್ದು ಮತ್ತು ಕಳೆದುಕೊಂಡ ಪ್ರಸಂಗದ ಚಿತ್ರಗಳು ಮತ್ತು ರಾಮಾಯಣದ ದರ್ಶನವಾಯಿತು. ಆಮೇಲೆ” ಓಂ ಬೀಚ್” ಗೆ ಹೋಗಿ ಸಮುದ್ರದಲ್ಲಿ ಗೆಳೆಯರ ಜತೆೆ ಆಟ ಆಡಿ, ನೀರಿನ ಅಲೆಯಲ್ಲಿ ಮುಳುಗಿ ಎದ್ದು ತುಂಬಾ ಸುಂದರ ಕ್ಷಣಗಳನ್ನು ಅನುಭವಿಸಿದೆವು. ಗೋಕರ್ಣದಿಂದ ಮತ್ತೆ ನಮ್ಮ ಹಾದಿ ಬಾಗಲಕೋಟದ ಕಡೆಗೆ ಸಾಗಿತು.
ಒಟ್ಟಿನಲ್ಲಿ “ದೇಶ ಸುತ್ತು ಕೋಶ ಓದು’ ಎಂಬ ನಾಣ್ಣುಡಿಯಂತೆ ಪಿಯುಸಿ ವಿದ್ಯಾರ್ಥಿ ಜೀವನದಲ್ಲಿ ನಾವು ಒಂದು ಪ್ರವಾಸದ ಮೂಲಕ ಸುಂದರ ಕ್ಷಣಗಳನ್ನು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿಸಿಕೊಂಡೆವು. ನಮ್ಮ ಸಂಸ್ಕೃತಿ ಬಹಳ ವಿಶಾಲವಾಗಿದೆ. ನೋಡಿದಷ್ಟೂ ಮುಗಿಯದ, ಕೇಳಿದಷ್ಟೂ ತೀರದ ಹಲವಾರು ಪ್ರವಾಸಿ ತಾಣಗಳಿವೆ ನಮ್ಮಲ್ಲಿವೆ. ಒಂದರ ಹಿಂದೆಯೂ ಹಲವು ಅದ್ಭುತ ಕಥೆಗಳಿವೆ. ಅವುಗಳನ್ನು ಭೇಟಿಯಾಗಿ ಕಣ್ಣು ತುಂಬಿಸಿಕೊಂಡರೆ ಸಾಲದು ಅವುಗಳ ಕಥೆಗಳಿಗೆ ಕಿವಿಯಾಗಬೇಕು. ಆಗಲೇ ನಮ್ಮ ಪ್ರವಾಸ ಸಾರ್ಥಕತೆಯನ್ನು ಪಡೆಯುತ್ತದೆ.
ಭೂಮಿಕಾ ದಾಸರಡ್ಡಿ,ಬಿದರಿ
ಕಂಠಿ ಕಾಲೇಜು