Advertisement
ವಾಲಾಂಗಿನ ಪ್ರವಾಸದಲ್ಲಿ ಎಡೆಬಿಡದೆ ಸೆರಗು ಹಿಡಿದು ಬೆರಗಿನಿಂದ ನಡೆದದ್ದು ಲೋಹಿತ್ ನದಿಯ ಜಾಡಿನಲ್ಲಿ. ಅಸ್ಸಾಮ್ ದಾಟಿ ಇನ್ನರ್ ಲೈನ್ ಪರ್ಮಿಟ್ ಪಡೆದು ಪರ್ವತಗಳ ನಾಡಾದ ಅರುಣಾಚಲ ಪ್ರದೇಶಕ್ಕೆ ಕಾಲಿರಿಸಿ ಪರಶುರಾಮ ಕುಂಡದ ಬಳಿ ಸೇತುವೆಯ ಮೇಲೆ ನಿಂತಾಗ ಲೋಹಿತ ತನ್ನ ತಿಳಿ ನೀಲವರ್ಣದಿಂದ ಕಣ್ತುಂಬಿ ಮನಕ್ಕಿಳಿಯಿತು. ಕೆಂಪು ಜೇಡಿಮಣ್ಣಿನ ನೆಲದಲ್ಲಿ ಹರಿಯುತ್ತಿದ್ದ ನದಿಗೆ ಹೆಸರು ಬಂದದ್ದು ಅಸ್ಸಾಮಿ ಮೂಲದ ರಕ್ತ ಅರ್ಥದ ಲೋಹಿತ ಶಬ್ದದಿಂದ. ರಕ್ತದ ನದಿ ಎಂದೇ ಕರೆಸಿಕೊಳ್ಳುವ ಲೋಹಿತ್ ಜೊತೆ ಜೊತೆಯಲ್ಲಿ ನದಿಯ ಮೂಲದತ್ತ ಹಿಮ್ಮುಖವಾಗಿ ಮುಂದಿನ ನಮ್ಮ ಪಯಣ ಸಾಗಿತು. ಕಣಿವೆಯಾಳದಲ್ಲಿ ನದಿ ಕಣ್ಣಿಗೆ ಬೀಳುತ್ತಲೇ ಇತ್ತು.
Related Articles
Advertisement
ಬಿಳಿ ಬಿಳಿ ಗುಂಡಾದ ನುಣುಪು ಕಲ್ಲುಗಳಿಗೆ ಮುತ್ತಿಟ್ಟ ನೀರು ಮುಂದುವರೆಯುತ್ತಿತ್ತೆ ವಿನಾ ನಾವರಸುತ್ತಿದ್ದ ಬಕ ಕಾಣಲಿಲ್ಲ. ಕಾಹೋದಿಂದ ಮರಳುವಾಗ ಹೊಸದಾಗಿ ಕಟ್ಟುತ್ತಿದ್ದ ಸೇತುವೆಯಂಚಿನಲ್ಲಿ ಲ್ಯಾಂಡ್ ಸ್ಲೆçಡಾಗಿ ತಾಸು ತ್ರಾಸು ಅನುಭವಿಸಿ ಕೊನೆಗೂ ವಾಲಾಂಗಿಗೆ ತಡವಾಗಿ ತಲುಪಿ ಸಮಾಧಾನದ ನಿಟ್ಟುಸಿರು ಬಿಟ್ಟೆವು.
ಕೊನೆಗೂ ಕ್ಯಾಮರಾ ಆಸೆ ತಣಿಸಿದ ಲೋಹಿತ:
ಕೊನೆಯ ದಿನ ವಾಲಾಂಗಿನಿಂದ ಮುಂಜಾವದಲ್ಲೇ ಮುನ್ಸರಿದು ಲೋಹಿತ್ ಜಿಲ್ಲೆಯ ತೇಜು ಕಡೆಗೆ ಹೊರಟರೆ ಜೊತೆಗೆ ಲೋಹಿತ ಸಾಥ್ ನೀಡಿದ. ಉದಯಕ್ ಪಾಸ್ ಏರಿದರೆ ಅಲ್ಲೂ ಲೋಹಿತ. ಸಂಜೆಗೆಂಪು ಆಗಸದಂಚಿನಲ್ಲಿ ತುಂಬಿದಾಗ ವ್ಯೂ ಪಾಯಿಂಟಿನಲ್ಲಿಳಿದು ಆ ರಂಗನ್ನು ಪಟಕ್ಕಿಳಿಸುವಾಗ ಲೋಹಿತನ ಬೆಳ್ಳಿಬಣ್ಣಕ್ಕೆ ರವಿ ರಂಗೇರಿಸಿದ ಚಿತ್ರ ನಯನ ಮನೋಹರವಾಗಿತ್ತು.
ಮಿಶ್ಮಿ ಬೆಟ್ಟವನ್ನೇರಿದಾಗ ಬಯಲ ತುಂಬಾ ಹರಡಿಕೊಂಡ ದಿಬಾಂಗ್ ನದಿಯನ್ನು ಕಂಡಿದ್ದೆ. ದಿಬಾಂಗ್ ಮತ್ತಷ್ಟು ದೂರ ಹರಿದು ಲೋಹಿತನೊಂದಿಗೆ ಮಿಲನಿಸಿ ಮುನ್ನಡೆಯುತ್ತಿತ್ತು. ಇನ್ನೂರು ಕಿ.ಮೀ ಪಯಣದ ತನ್ನ ದಾರಿಯುದ್ದಕ್ಕೂ ಅನೇಕ ಉಪನದಿಗಳನ್ನು ತನ್ನೊಳಗೆ ಕೂಡಿಸಿಕೊಂಡು ಹರಿಯುವ ಲೋಹಿತ 9.15 ಕಿ.ಮೀ ಉದ್ದದ ಅಸ್ಸಾಂ-ಅರುಣಾಚಲಕ್ಕೆ ಕೊಂಡಿಯಾದ ಅಸ್ಸಾಮಿನ ಸಾದಿಯಾ ದೋಲಿಯ ಬಳಿಯ ಭೂಪೇನ್ ಹಜಾರಿಕಾ ಸೇತುವೆಯಡಿಯಲ್ಲಿ ಸಾಗಿ ತನ್ನ ಪರ್ವತಗಳಂಚಿನ ಪಯಣ ಮರೆತು ಭರದಿಂದ ಓಡುವ ಬ್ರಹ್ಮಪುತ್ರದ ಪ್ರಮುಖ ಉಪನದಿಯಾಗಿ ಬಯಲಿನಲ್ಲಿ ಬೆರೆತು ಹೋಗುವ ಅರುಣಾಚಲದ ಕೃಷಿಗೆ, ಕುಡಿಯುವ ನೀರಿಗೆ, ಶಕ್ತಿಯುತ್ಪಾದನೆಗೆ, ಪ್ರವಾಸೋದ್ಯಮದ ಬೆಳವಣಿಗೆಗೆ ನೆರವಾದ ಲೋಹಿತನ ಜಾಡಿನಲ್ಲಿ ಹೋಗಿಬಂದ ಚಿತ್ರಗಳನ್ನು ಸೆರೆಹಿಡಿಯುವ ಆಸೆಗೆ ಕ್ಯಾಮೆರಾ ಕೂಡಾ ಸ್ಪಂದಿಸಿತು.
ತಲುಪುವುದು ಹೇಗೆ?
ಅರುಣಾಚಲಕ್ಕೆ ನೇರ ವಿಮಾನ ಸಂಪರ್ಕ ಇಲ್ಲ. ಇತ್ತೀಚೆಗೆ ತೇಜು ಎಂಬ ಕಡೆ ಶುರುವಾಗಿದ್ದರೂ, ವಿಮಾನ ಸಂಖ್ಯೆ ಕಡಿಮೆ. ಅರುಣಾಚಲದ ಕೆಲವು ಕಡೆಗೆ ಗೌಹಾಟಿಗೆ ಹೋಗಿ ಅಲ್ಲಿಂದ ಬಸ್ ಅಥವಾ ಕಾರ್ ಮೂಲಕ ಹೋಗಬೇಕು. ಕೆಲವು ಕಡೆಗೆ ಅಸ್ಸಾಮಿನ ದಿಬ್ರೂಗಡಕೆj ಹೋಗಿ ಅಲ್ಲಿಂದ ಅರುಣಾಚಲಕ್ಕೆ ತೆರಳಬೇಕು. ವಿಮಾನದ ವೆಚ್ಚ ಅಂದಾಜು ಒಂದು ಕಡೆಗೆ ಹನ್ನೆರಡು ಸಾವಿರ. ಜೊತೆಗೆ ಕಾರ್, ಬಸ್ ಪ್ರಯಾಣದ ವೆಚ್ಚ ಪ್ರತ್ಯೇಕ.
-ಡಾ. ಲೀಲಾ ಅಪ್ಪಾಜಿ