ಬೆಂಗಳೂರು: ಟಫ್ ಕಾಪ್, ಯುವಕರ ಪಾಲಿನ ಆದರ್ಶ, ಕನ್ನಡಿಗರ ಮನಗೆದ್ದ ಕರುನಾಡಿನ ‘ಸಿಂಗಂ’ ಎಂದೇ ಹೆಸರಾಗಿರುವ ಖಡಕ್ ಪೊಲೀಸ್ ಆಫೀಸರ್ ಅಣ್ಣಾಮಲೈ ಅವರು ಪೊಲೀಸ್ ಇಲಾಖೆಗೆ ಗುಡ್ ಬೈ ಹೇಳಲಿದ್ದಾರೆ.
ಹೌದು, ಈ ಸುದ್ದಿಯನ್ನು ನಂಬಲು ಕಷ್ಟವಾಗುತ್ತಿದೆ ಅಲ್ಲವೇ? ಆದರೆ ಅಣ್ಣಾಮಲೈ ಅವರು ಪೊಲೀಸ್ ಡ್ರೆಸ್ ಕಳಚಿಟ್ಟು ರಾಜಕೀಯಕ್ಕೆ ಎಂಟ್ರಿ ಕೊಡಲು ಮನಸ್ಸು ಮಾಡಿದ್ದಾರೆ ಎಂಬ ಬಿಸಿಬಿಸಿ ಸುದ್ದಿಯೊಂದು ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ನಾಳೆ ಬೆಳಿಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲಿರುವ ಅಣ್ಣಾಮಲೈ ಅವರು ಈ ವಿಚಾರದ ಕುರಿತಾಗಿ ಅವರೊಂದಿಗೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.
ತನ್ನ ತವರು ಜಿಲ್ಲೆ ತಮಿಳುನಾಡಿನಿಂದ ರಾಜಕೀಯ ಕ್ಷೇತ್ರಕ್ಕೆ ಧುಮುಕಲು ಅಣ್ಣಾಮಲೈ ಅವರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಣ್ಣಾಮಲೈ ಅವರು ಸ್ಟಾಲಿನ್ ನೇತೃತ್ವದ ಡಿ.ಎಂ.ಕೆ. ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಸದ್ಯಕ್ಕೆ ಬೆಂಗಳೂರು ದಕ್ಷಿಣ ವಿಭಾಗದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನ್ನ ರಾಜಕೀಯ ಪ್ರವೇಶದ ಕುರಿತಾಗಿ ಮತ್ತು ಪೊಲೀಸ್ ಇಲಾಖೆಯನ್ನು ತೊರೆಯುವ ಕುರಿತಾಗಿ ಅಣ್ಣಾಮಲೈ ಅವರು ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.