ಬೈಲಹೊಂಗಲ: ರೈತನ ಜಮೀನಿನಲ್ಲಿ ವಿದ್ಯುತ್ ಪರಿಕರ ದುರಸ್ತಿಗೊಳಿಸುತ್ತಿದ್ದ ವೇಳೆ ಲೈನ್‌ಮನ್ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಗುಡದೂರ ಮತ್ತು ಸಂಗೊಳ್ಳಿ ಗ್ರಾಮಗಳ ಮಧ್ಯೆ ಶನಿವಾರ ನಡೆದಿದೆ.
ತಾಲೂಕಿನ ಕೆಂಗಾನೂರ ಗ್ರಾಮದ ಶರೀಫ ಶಬ್ಬೀರ ನದಾಫ್ (25) ಮೃತ ಲೈನ್‌ಮನ್ ಎಂದು ಗುರುತಿಸಲಾಗಿದೆ. ಈತ ಸಂಗೊಳ್ಳಿ ಗ್ರಾಮದ ಹದ್ದಿನಲ್ಲಿರುವ ರೈತನ ಜಮೀನಲ್ಲಿ ವಿದ್ಯುತ್ ಪರಿಕರ ದುರಸ್ತಿಗೊಳಿಸುತ್ತಿದ್ದರು. ಪರಿಕರದಿಂದ ಏಕಾಏಕಿ ವಿದ್ಯುತ್ ಸರಬರಾಜುಗೊಂಡಿದ್ದರಿಂದ ವಿದ್ಯುತ್ ಕಂಬದ ಪರಿಕರ ಮೇಲೆ ಬಿದ್ದು ಸುಟ್ಟು ಭಸ್ಮವಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮಲ್ಲಮ್ಮನ ಬೆಳವಡಿ ಹೆಸ್ಕಾಂ ಶಾಖಾಧಿಕಾರಿ ಎಲ್.ಎಫ್. ದಾಸರ, ಮೃತಪಟ್ಟ ಸಿಬ್ಬಂದಿ ಶವವನ್ನು ವಿದ್ಯುತ್ ಪರಿಕರದಿಂದ ಬಿಡಿಸಿ ಕೆಳಗಿಳಿಸಿದರು. ಇದನ್ನು ಕಂಡ ಗ್ರಾಮಸ್ಥರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಲೈನ್‌ಮನ್ ಮೃತಪಟ್ಟಿದ್ದಾನೆಂದು ಆರೋಪಿಸಿ ಶಾಖಾಧಿಕಾರಿ ದಾಸರ ಅವರನ್ನು ಥಳಿಸಿ ವಾಹನ ಜಖಂಗೊಳಿಸಿದರು. ಥಳಿತಕ್ಕೊಳಗಾದ ಶಾಖಾಧಿಕಾರಿ ಘಟನಾ ಸ್ಥಳದಿಂದ ಪರಾರಿಯಾದರು. ಇದರಿಂದ ಆಕ್ರೋಶಗೊಂಡ ಕೆಂಗಾನೂರ, ಗುಡದೂರ, ಸಂಗೊಳ್ಳಿ ಗ್ರಾಮಸ್ಥರು ಇದ್ದಕ್ಕಿದ್ದಂತೆ ಬೀದಿಗಿಳಿದು ಪ್ರತಿಭಟನೆ ಆರಂಭಿಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಡಿವೈಎಸ್ಪಿ ಜೆ.ಎಂ. ಕರುಣಾಕರಶೆಟ್ಟಿ, ಸಿಪಿಐ ಮಂಜುನಾಥ ಕುಸುಗಲ್ಲ, ಪಿಎಸ್‌ಐ ಎಂ.ಎಸ್. ಹೂಗಾರ ಪ್ರತಿಭಟನಾಕಾರರ ಮನವೊಲಿಸಿದರು. ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಇಷ್ಟಕ್ಕೂ ಜಗ್ಗದ ಗ್ರಾಮಸ್ಥರು ಹೆಸ್ಕಾಂ ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತಪಟ್ಟ ಲೈನ್‌ಮನ್‌ಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಸಂಗೊಳ್ಳಿ ಗ್ರಾಮದ ಯುವ ಮುಖಂಡ ನಾಗರಾಜ ಬಡಿಗೇರ ಮಾತನಾಡಿ, ಮೃತ ಲೈನ್‌ಮನ್ ಮಲ್ಲಮ್ಮನ ಬೆಳವಡಿ ಗ್ರಾಮದ ಹೆಸ್ಕಾಂ ಶಾಖೆಗೆ ಎರಡು ವರ್ಷಗಳ ಹಿಂದೆಯೇ ಸೇರಿದ್ದರು. ಅಲ್ಲಿಂದ ಸಂಗೊಳ್ಳಿ ಶಾಖೆಗೆ ಬಂದು ಎರಡು ತಿಂಗಳು ಸೇವೆ ಆರಂಭಿಸಿದ್ದರು. ಗ್ರಾಹಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಹೆಸ್ಕಾಂನವರ ನಿರ್ಲಕ್ಷ್ಯದಿಂದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೇ ಮೃತಪಟ್ಟಿರುವುದು ನೋವಿನ ಸಂಗತಿಯಾಗಿದೆ ಎಂದರು.
ನಂತರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಮಾದೇಶ ಮಾತನಾಡಿ, ಘಟನೆ ಕುರಿತು ಠಾಣೆಯಲ್ಲಿ ದೂರು ದಾಖಲಾಗಿದೆ. ಹೆಸ್ಕಾಂ ನಿಮಗದ ನಿಯಮಾನುಸಾರ ಮೃತ ಲೈನ್‌ಮನ್ ಕುಟುಂಬಕ್ಕೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಆಗ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು. ಎಇಇ ಅಣ್ಣಪ್ಪಾ ಲಮಾಣಿ, ವಿದ್ಯುತ್ ಪರಿವೀಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಘಟನಾ ಸ್ಥಳದಲ್ಲಿ ನೂರಾರು ಯುವಕರು, ಗ್ರಾಮಸ್ಥರು ಜಮಾಯಿಸಿದ್ದರು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.