ಇದು ಅಪರೂಪದಲ್ಲಿ ಅಪರೂಪದ ಸಿನಿಮಾ….’ – ನಟ ಜಗ್ಗೇಶ್ ಹೀಗೆ ಹೇಳಿ, ಪಕ್ಕದಲ್ಲಿದ್ದ ಪೋಸ್ಟರ್ ನೋಡಿದರು. ವಿಭಿನ್ನ ಲುಕ್‌ನ ಅವರ ಪೋಸ್ಟರ್ ಅಲ್ಲಿ ಕಂಗೊಳಿಸುತ್ತಿತ್ತು. ಅಂದಹಾಗೆ, ಜಗ್ಗೇಶ್ ಅಪರೂಪದ ಸಿನಿಮಾ ಎಂದಿದ್ದು, “ತೋತಾಪುರಿ’ಗೆ.
ಈಗಾಗಲೇ “ಬಾಗ್ಲು ತೆಗಿ ಮೇರಿ ಜಾನ್’ ಹಾಡು ಹಾಗೂ ಟ್ರೇಲರ್ ಮೂಲಕ ಚಿತ್ರರಂಗದ, ಸಿನಿ ಪ್ರೇಮಿಗಳ ಗಮನ ಸೆಳೆದಿರುವ “ತೋತಾಪುರಿ’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಸೆ.30ರಂದು ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಅದಕ್ಕೂ ಮುನ್ನ ಚಿತ್ರತಂಡ ಮಾಧ್ಯಮದ ಮುಂದೆ ಬಂದು ಸಿನಿಮಾದ ಬಗೆಗಿನ ಮಾಹಿತಿ ಹಂಚಿಕೊಂಡಿತು.
“ಅದೆಷ್ಟೋ ಸಿನಿಮಾಗಳು ಬರುತ್ತವೆ, ಹೋಗುತ್ತವೆ. ಆದರೆ, ಕೆಲವು ಸಿನಿಮಾಗಳು ಮಾತ್ರ ನೆನಪಿನಲ್ಲಿ ಉಳಿಯುತ್ತವೆ. ಅಂತಹ ಸಿನಿಮಾಗಳಲ್ಲಿ “ತೋತಾಪುರಿ’ ಕೂಡಾ ಒಂದು. ಈ ಸಿನಿಮಾದ ಜರ್ನಿ ತುಂಬಾ ಅದ್ಭುತವಾಗಿತ್ತು. ಇದನ್ನು ಸಿನಿಮಾ ಎನ್ನುವುದಕ್ಕಿಂತ ಒಂದು ಸುಂದರ ಕಾದಂಬರಿ ಎನ್ನ ಬಹುದು. ನಿರ್ದೇಶಕ ವಿಜಯ ಪ್ರಸಾದ್ ತುಂಟತನದ ಜೊತೆಗೆ ಒಂದು ಸುಂದರ ಸಂದೇಶ ಕೊಟ್ಟಿದ್ದಾರೆ. ಇಡೀ ದೇಶ ಮೆಚ್ಚುವಂತಹ ಸಂದೇಶವದು’ ಎಂದು ಖುಷಿಯಿಂದ ಹೇಳಿಕೊಂಡರು ಜಗ್ಗೇಶ್.
ಇದೇ ವೇಳೆ ನಿರ್ಮಾಪಕ ಕೆ.ಎ.ಸುರೇಶ್ ಅವರ ಸಿನಿಮಾ ಪ್ರೀತಿ ಹಾಗೂ ತಾಳ್ಮೆಯ ಬಗ್ಗೆಯೂ ಮಾತನಾಡಿದರು. “ನಿರ್ಮಾಪಕ ಸುರೇಶ್ ಸಿನಿಮಾವನ್ನು ತುಂಬಾನೇ ಪ್ರೀತಿಸುವ ವ್ಯಕ್ತಿ. ಜೊತೆಗೆ ಅಷ್ಟೇ ತಾಳ್ಮೆ ಇರುವ ವ್ಯಕ್ತಿ. ಈ ಸಿನಿಮಾ ಅವರಿಗೆ ಒಳ್ಳೆಯದನ್ನೇ ಮಾಡುತ್ತದೆ. ಈ ಸಿನಿಮಾಕ್ಕೆ ಏನೇ ತೊಂದರೆ ಆದರೂ ನಾನು ಅವರ ಜೊತೆ ನಿಲ್ಲುತ್ತೇನೆ’ ಎಂದರು.
ನಿರ್ದೇಶಕ ವಿಜಯ ಪ್ರಸಾದ್ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಜೊತೆಗೆ, ಮನುಷ್ಯ-ಮನುಷ್ಯರನ್ನು ಪ್ರೀತಿಸಿದರೆ ಎಲ್ಲವೂ ಚೆನ್ನಾಗಿರುತ್ತದೆ. ಇವತ್ತಿನ ಸಮಾಜಕ್ಕೆ ಇದು ಮುಖ್ಯ ಕೂಡಾ. ಇಂತಹ ಅರಿವು ಮೂಡಿಸುವ ಸಿನಿಮಾ “ತೋತಾಪುರಿ’ ಎಂದರು.
ನಿರ್ಮಾಪಕ ಸುರೇಶ್ ಕೂಡಾ ಇದು ಇಡೀ ದೇಶ ಮೆಚ್ಚುವ ಸಿನಿಮಾವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಉಳಿದಂತೆ ನಾಯಕಿ ಅದಿತಿ ಪ್ರಭುದೇವ, ಧನಂಜಯ್, ವೀಣಾ ಸುಂದರ್, ಸುಮನ್ ರಂಗನಾಥ್ ಸೇರಿದಂತೆ ಚಿತ್ರದ ಕಲಾವಿದರು “ತೋತಾಪುರಿ’ ಅನುಭವ ಹಂಚಿಕೊಂಡರು.