ನ್ಯೂಯಾರ್ಕ್ : ಮುಂದಿನ ತಿಂಗಳು ಆಗಸ್ 21ರಂದು 38 ವರ್ಷಗಳ ಬಳಿಕ ಖಗ್ರಾಸ ಸೂರ್ಯ ಗ್ರಹಣ ಸಂಭವಿಸಲಿದ್ದು ಇದು ಅಮೆರಿಕದ ಒರೆಗಾನ್‌ನಿಂದ ದಕ್ಷಿಣ ಕ್ಯಾರೋಲಿನಾ ವರೆಗಿನ 70 ಮೈಲು ಅಗಲದ (ಸುಮಾರು 113 ಕಿಮೀ.) ಭೂಪಟ್ಟಿಯಲ್ಲಿ ಕಾಣಸಿಗಲಿದೆ. ಅಮೆರಿಕದಲ್ಲಿ ಕಂಡುಬರುವ ಈ ದೀರ್ಘಾವಧಿಯ ಸಂಪೂರ್ಣ ಸೂರ್ಯಗ್ರಹಣದಿಂದಾಗಿ, ಸೂರ್ಯಶಕ್ತಿಯನ್ನು ತನ್ನ ವಿದ್ಯುತ್ ಅಗತ್ಯಕ್ಕೆ ಬಹುವಾಗಿ ಅವಲಂಬಿಸಿರುವ ಅಮೆರಿಕಕ್ಕೆ ಈಗ ಚಿಂತೆ ಉಂಟಾಗಿದೆ.
ಆಗಸ್ಟ್ 21ರಂದು ನ್ಯೂಯಾರ್ಕ್ ಕಾಲಮಾನ ಪ್ರಕಾರ ಮಧ್ಯಾಹ್ನ 12.05 ಗಂಟೆಗೆ ಆರಂಭವಾಗುವ ಸೂರ್ಯಗ್ರಸಣ ಸಂಜೆ 4.09ರ ಹೊತ್ತಿಗೆ ಮುಗಿಯಲಿದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಬರುವುದರಿಂದ ಸೂರ್ಯಗ್ರಹಣ ಸಂಭವಿಸುತ್ತದೆ.
ಅಮೆರಿಕದಲ್ಲಿ 9,000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೌರ ಫಲಕಗಳು ಈ ಖಗ್ರಾಸ ಸೂರ್ಯ ಗ್ರಹಣದಿಂದಾಗಿ ಮಂಕಾಗಲಿವೆ. ಹಾಗಾಗಿ ಅಂದು ಸೌರ ವಿದ್ಯುತ್ ಉತ್ಪಾದನೆ ಬಹುತೇಕ ಸ್ಥಗಿತಗೊಳ್ಳಲಿದೆ.
ವಾಷಿಂಗ್ಟನ್ ಪೋಸ್ಟ್ ವರದಿಯ ಪ್ರಕಾರ ಒಂದು ಶತಮಾನದ ಬಳಿಕ ಈ ಸಂಪೂರ್ಣ ಸೂರ್ಯಗ್ರಹಣವು ಅಮೆರಿಕದಲ್ಲಿ ಒಂದು ಅಂಚಿನ ಕರಾವಳಿಯಿಂದ ಇನ್ನೊಂದು ಅಂಚಿನ ಕರಾವಳಿಯನ್ನು ಒಳಗೊಳ್ಳುತ್ತದೆ.
ಅಮೆರಿಕದ ಸೌರಶಕ್ತಿ ವಿದ್ಯುತ್ ಅವಲಂಬನೆಯು ಈಚಿನ ವರ್ಷಗಳಲ್ಲಿ ಒಂಬತ್ತು ಪಟ್ಟು ಹೆಚ್ಚಿರುವುದರಿಂದ ಈ ಸೂರ್ಯಗ್ರಹಣವು ಅಮೆರಿಕಕ್ಕೆ ಭಾರೀ ದೊಡ್ಡ ಸವಾಲನ್ನು ಒಡ್ಡಿದೆ; ಗ್ರಹಣದ ಅವಧಿಯಲ್ಲಿ 6,008 ಮೆಗಾ ವ್ಯಾಟ್ ವಿದ್ಯುತ್ ಕೊರತೆಯನ್ನು ತುಂಬಬೇಕಾಗುವುದು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ವಾರದ ಕೆಲವು ದಿನಗಳಲ್ಲಿ ತನ್ನ ಅಗತ್ಯದ ಶೇ.40ರಷ್ಟು ವಿದ್ಯುತ್ತನ್ನು ಸೌರಶಕ್ತಿಯಿಂದಲೇ ಪಡೆದುಕೊಳ್ಳುವ ಕ್ಯಾಲಿಫೋರ್ನಿಯಕ್ಕೆ ಈ ಖಗ್ರಾಸ ಸೂರ್ಯ ಗ್ರಹಣದಿಂದ ಭಾರೀ ಹೊಡೆತ ಉಂಟಾಗಲಿದೆ; ಏಕೆಂದರೆ ಈ ಗ್ರಹಣದಿಂದ ಸೂರ್ಯ ವಿಕಿರಣವು ಶೇ.70ರಷ್ಟು ಮಂಕಾಗುತ್ತದೆ ಎಂದು ಅಮೆರಿಕದ ವಿದ್ಯುತ್ ಮಾರುಕಟ್ಟೆಯ ವಿಶ್ಲೇಷಕ ಡೇವ್ ಕ್ವಿನ್ ಹೇಳಿದ್ದಾರೆ.