ಕೋಲ್ಕತ್ತಾ: ದೀಪಾವಳಿಯ ಸಮಯದಲ್ಲೇ ಪಾರ್ಶ್ವ ಸೂರ್ಯಗ್ರಹಣವನ್ನು ಕಂಡ ಜಗತ್ತು ಈಗ ಮತ್ತೊಂದು ಗ್ರಹಣಕ್ಕೆ ಸಜ್ಜಾಗುತ್ತಿದೆ.
ನ.8ರಂದು ಖಗ್ರಾಸ ಚಂದ್ರಗ್ರಹಣ ಉಂಟಾಗಲಿದ್ದು, ಕೋಲ್ಕತ್ತಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ.
ಅಲ್ಲದೇ ಪಾಕಿಸ್ತಾನ, ಅಫ್ಘಾನಿಸ್ತಾನ, ರಷ್ಯಾ, ಅಮೆರಿಕ, ಆಸ್ಟ್ರೇಲಿಯಾ, ಉತ್ತರ ಅಟ್ಲಾಂಟಿಕ್ ಸಮುದ್ರ, ಪೆಸಿಫಿಕ್ ಸಮುದ್ರ ಪ್ರದೇಶದಿಂದಲೂ ಈ ಖಗೋಳ ವಿಸ್ಮಯವನ್ನು ವೀಕ್ಷಿಸಬಹುದು ಎಂದು ಖಗೋಳವಿಜ್ಞಾನಿಗಳು ತಿಳಿಸಿದ್ದಾರೆ.
ನ.8ರಂದು ಮಧ್ಯಾಹ್ನ 2.39ಕ್ಕೆ ಭಾಗಶಃ ಚಂದ್ರಗ್ರಹಣ ಆರಂಭವಾಗಲಿದ್ದು, 3.46ರ ವೇಳೆಗೆ ಅದು ಪೂರ್ಣಪ್ರಮಾಣದಲ್ಲಿ ಆವರಿಸಲಿದೆ. ಸಂಜೆ 4.29ರ ವೇಳೆಗೆ ರಕ್ತ ಚಂದಿರನ ದರ್ಶನವಾಗಲಿದೆ. ಸಂಜೆ 5.11ಕ್ಕೆ ಖಗ್ರಾಸ ಚಂದ್ರಗ್ರಹಣ ಅಂತ್ಯವಾದರೆ, 6.19ಕ್ಕೆ ಪಾರ್ಶ್ವ ಚಂದ್ರಗ್ರಹಣದ ಅವಧಿ ಮುಗಿಯಲಿದೆ.
ಇದು ಈ ವರ್ಷದ ಕೊನೆಯ ಸಂಪೂರ್ಣ ಚಂದ್ರಗ್ರಹಣವಾಗಿರಲಿದ್ದು, 3 ವರ್ಷಗಳ ನಂತರ ಅಂದರೆ 2025ರ ಮಾ.14ರಂದು ಮುಂದಿನ ಖಗ್ರಾಸ ಚಂದ್ರಗ್ರಹಣ ಉಂಟಾಗಲಿದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.