ಬೆಂಗಳೂರು: ಈ ಬಾರಿ ರಾಜ್ಯದ ಶೇ. 90ರಷ್ಟು ತಾಲೂಕುಗಳಲ್ಲಿ ಬರಗಾಲ ಇದ್ದು, ರೈತರು ಬೆಳೆ ವಿಮೆ ಮಾಡಿಸಿದ್ದರೂ ಪೂರ್ಣಪ್ರಮಾಣದ ನಷ್ಟ ಭರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗಾಂಧಿ ಕೃಷಿ ವಿಜ್ಞಾನ ಕೇಂದ್ರ(ಜಿಕೆವಿಕೆ)ದಲ್ಲಿ ಶುಕ್ರವಾರ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಬರದಿಂದ ಈ ಸಲ ಸುಮಾರು 33 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ಈ ಪೈಕಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಪ್ರಕಾರ 17,900 ಕೋಟಿ ರೂ. ಪರಿಹಾರ ಕೇಳಲಾಗಿದೆ. ಇದು ಬಿಡುಗಡೆಯಾದರೂ ಇನ್ನೂ 16 ಸಾವಿರ ಕೋಟಿ ರೂ. ರೈತರಿಗೆ ನಷ್ಟ ಆಗುತ್ತದೆ. ಹಾಗಾಗಿ ಬರದಿಂದಾದ ನಷ್ಟಕ್ಕೆ ಸರಕಾರ ಸಹಾಯಧನ ನೀಡಬಹುದೇ ಹೊರತು, ನಷ್ಟವನ್ನು ಸಂಪೂರ್ಣವಾಗಿ ಭರಿಸುತ್ತೇವೆ ಎನ್ನಲಾಗದು ಎಂದು ಹೇಳಿದರು.
ಹಲವು ದಶಕಗಳ ರಾಜಕೀಯ ಅನುಭವದಿಂದ ಹೇಳುವುದಾದರೆ, ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ರಾಜ್ಯಕ್ಕೆ ಬರ ಎದುರಾಗುತ್ತಲೇ ಇದೆ. ಇದರ ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಕೃಷಿಯಿಂದ ವಿಮುಖರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಕೃಷಿ ಲಾಭದಾಯಕವಾಗಿ ಮಾಡುವ ಮೂಲಕ ರೈತರ ಬದುಕು ಹಸನುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳು ಕೇವಲ ಪದವೀಧರರನ್ನು ತಯಾರು ಮಾಡುವ ಸಂಸ್ಥೆಯಾಗದೆ, ಸಂಶೋಧನೆಗೆ ಒತ್ತು ನೀಡಬೇಕು. ಇದಕ್ಕೆ ಅನುದಾನ ಸಹಿತ ಎಲ್ಲ ರೀತಿಯ ಸಹಕಾರ ನೀಡಲು ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ರೈತರದ್ದು ಲಂಚವಿಲ್ಲದ ಕೆಲಸ: ಡಿಕೆಶಿ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಸಂಬಳ, ಭಡ್ತಿ, ನಿವೃತ್ತಿ ವೇತನ, ಲಂಚ ಮುಂತಾದವು ಇಲ್ಲದ ಕೆಲಸ ರೈತರದ್ದಾಗಿದೆ. ಕೃಷಿ ಕೆಲಸದಿಂದ ರೈತರಿಗೆ ನಿವೃತ್ತಿಯೂ ಇಲ್ಲ. ಆದರೆ ಇತ್ತೀಚೆಗೆ ನಗರಗಳತ್ತ ರೈತರ ವಲಸೆ ಹೆಚ್ಚಾಗುತ್ತಿದೆ. ಆಸ್ತಿ ಮಾರಾಟ ಕೂಡ ಏರಿಕೆಯಾಗಿದೆ. ರೈತ ವರ್ಗಕ್ಕೆ ಶಕ್ತಿ ತುಂಬುವ ಕೆಲಸ ಸರಕಾರಗಳು ಮಾಡಬೇಕು ಎಂದರು.
ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಪ್ರತಿ ಎರಡು ವರ್ಷಗಳಿಗೊಮ್ಮೆ ಅತಿವೃಷ್ಟಿ ಅಥವಾ ಅನಾವೃಷ್ಟಿ ಎದುರಾಗುತ್ತದೆ. ಇದರಿಂದ ರೈತರು ನಷ್ಟ ಅನುಭವಿಸುತ್ತಲೇ ಇದ್ದಾರೆ. ಹಾಗಾಗಿ, ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ಪರಿವರ್ತಿಸುವ ಕೆಲಸ ಸರಕಾರ ಮತ್ತು ಕೃಷಿ ವಿವಿಗಳು ಮಾಡಬೇಕಿದೆ ಎಂದು ತಿಳಿಸಿದರು. ಕೃಷಿ ಮೇಳದಲ್ಲಿ ಶಾಸಕ ಶರತ್ ಬಚ್ಚೇಗೌಡ, ಕುಲಪತಿ ಡಾ| ಎಸ್.ವಿ. ಸುರೇಶ್ ಮತ್ತಿತರರು ಇದ್ದರು.