ಬೆಂಗಳೂರು: ರಾಜ್ಯದಲ್ಲಿ ಬುಧವಾರ ದಾಖಲೆಯ 4,764 ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 55 ಸೋಂಕಿತರು ಸಾವಿಗೀಡಾಗಿದ್ದಾರೆ.
ಒಟ್ಟಾರೆ ಸೋಂಕು ಪ್ರಕರಣಗಳು 75 ಸಾವಿರದ ಗಡಿ ದಾಟಿದ್ದು, ಸಾವು ಕೂಡ 1,500ಕ್ಕೆ ತಲುಪಿವೆ. ಸಮಾಧಾನಕರವೆಂಬಂತೆ ಅತಿ ಹೆಚ್ಚು, ಅಂದರೆ 1,780 ಸೋಂಕಿತರು ಗುಣಮುಖರಾಗಿದ್ದಾರೆ.
ಸದ್ಯ ಸೋಂಕು ಪ್ರಕರಣಗಳ ಸಂಖ್ಯೆ 75,833, ಸಾವಿಗೀಡಾದವರು 1,519 ಹಾಗೂ ಗುಣಮುಖರಾದವರ ಸಂಖ್ಯೆ 27,239 ಆಗಿದೆ. 47,069 ಮಂದಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿರುವವರ ಪೈಕಿ 618 ಮಂದಿ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿದ್ದಾರೆ.
ಜು. 18ರಂದು 4,537 ಮಂದಿಗೆ ಸೋಂಕು ದೃಢಪಟ್ಟಿತ್ತು. ಆ ಬಳಿಕ ಒಂದೇ ದಿನ ಅತಿ ಹೆಚ್ಚು ಸೋಂಕು ಪ್ರಕರಣಗಳು ಬುಧವಾರ ದೃಢ ಪಟ್ಟಿವೆ. ಸೋಂಕು ಹೆಚ್ಚಳಕ್ಕೆ ಪರೀಕ್ಷೆ ಪ್ರಮಾಣ ಹೆಚ್ಚಳವಾಗಿರುವುದು ಪ್ರಮುಖ ಕಾರಣವಾಗಿದೆ.
Related Articles
ಮಂಗಳವಾರ 43 ಸಾವಿರ ಇದ್ದ ಸೋಂಕು ಪರೀಕ್ಷೆಗಳು ಒಂದೇ ದಿನದಲ್ಲಿ 48 ಸಾವಿರಕ್ಕೆ ಹೆಚ್ಚಳವಾಗಿವೆ. ದಿನದ ಅತಿ ಹೆಚ್ಚು ಸೋಂಕು ಪ್ರಕರಣಗಳು ಬೆಂಗಳೂರಿನಲ್ಲಿ 2,050 ಪತ್ತೆಯಾಗಿದ್ದು, 15 ಸೋಂಕಿತರ ಸಾವಾಗಿದೆ. ಬೆಂಗಳೂರಿನ ಒಟ್ಟಾರೆ ಪ್ರಕರಣಗಳು 36 ಸಾವಿರ ಹಾಗೂ ಸಾವು 735ಕ್ಕೆ ಏರಿದೆ.
ಎರಡು ಜಿಲ್ಲೆಯಲ್ಲಿ ದ್ವಿಶತಕ, ಎಂಟರಲ್ಲಿ ಶತಕ
ಬೆಂಗಳೂರು ಹೊರತುಪಡಿಸಿದರೆ ದಕ್ಷಿಣ ಕನ್ನಡ, ಕಲಬುರಗಿ, ಮೈಸೂರು, ಧಾರವಾಡ, ರಾಯಚೂರು ಬಳ್ಳಾರಿ, ಉಡುಪಿ, ಬಳ್ಳಾರಿಯಲ್ಲಿ ಸೋಂಕು ತೀವ್ರಗೊಂಡಿದೆ. ಈ ಜಿಲ್ಲೆಗಳಲ್ಲಿ ನಿತ್ಯ 100ಕ್ಕೂ ಹೆಚ್ಚು ಮಂದಿ ಸೋಂಕಿತರಾಗುತ್ತಿದ್ದಾರೆ.
ಬುಧವಾರ ಬೆಳಗಾವಿ ಮತ್ತು ಉಡುಪಿಯಲ್ಲಿ 200ಕ್ಕೂ ಹೆಚ್ಚು, ಕಲಬುರಗಿ, ದಕ್ಷಿಣ ಕನ್ನಡ, ಧಾರವಾಡ, ಮೈಸೂರು, ಬೆಂಗಳೂರು ಗ್ರಾಮಾಂತರ, ರಾಯಚೂರು, ಬಳ್ಳಾರಿ, ಚಿಕ್ಕಬಳ್ಳಾಪುರದಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
ಹೆಚ್ಚು ಗುಣಮುಖ
ಎರಡು ದಿನಗಳಿಂದ ದಾಖಲೆ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಮಂಗಳವಾರ 1,664, ಬುಧವಾರ 1,780 ಮಂದಿ ಗುಣಮುಖರಾಗಿದ್ದಾರೆ. ಇವರಲ್ಲಿ ಅರ್ಧದಷ್ಟು ಬೆಂಗಳೂರಿನವರು.
ವಾರದಲ್ಲಿ 28,000 ಸೋಂಕು
ರಾಜ್ಯದಲ್ಲಿ ಒಂದು ವಾರದಲ್ಲಿ ನಿತ್ಯ ಸರಾಸರಿ 4 ಸಾವಿರ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 28,580 ಜನರಿಗೆ ಸೋಂಕು ದೃಢಪಟ್ಟಿದೆ. ಜು.16ಕ್ಕೆ 50 ಸಾವಿರ ಗಡಿದಾಟಿದ್ದ ಸೋಂಕು ಆರು ದಿನದಲ್ಲಿಯೇ 75 ಸಾವಿರ ಗಡಿದಾಟಿದೆ. ಮೊದಲ 25 ಸಾವಿರ ಪ್ರಕರಣಗಳು ದೃಢಪಡಲು 119 ದಿನ ಹಿಡಿದಿತ್ತು. ಎರಡನೇ 25 ಸಾವಿರ ಪ್ರಕರಣಗಳು 10 ದಿನ ಮತ್ತು ಮೂರನೇ 25 ಸಾವಿರ ಪ್ರಕರಣಗಳು ಕೇವಲ ಆರು ದಿನದಲ್ಲಿ ದೃಢಪಟ್ಟಿವೆ.
ಸೋಂಕು ವಿವರ
1000 – ಮೇ 15
10,000 – ಜೂನ್ 24
25,000 – ಜುಲೈ 6
50,000 – ಜುಲೈ 16
75,000 – ಜುಲೈ 22
ಸಾವಿನ ವಿವರ
100 – ಜೂನ್ 17
500 – ಜುಲೈ 10
1000 – ಜುಲೈ 16
1500 – ಜುಲೈ 22