Advertisement

39 ಸಾವಿರ ಕೈದಿ ಬಿಡುಗಡೆ ; ಎಂಟು ರಾಜ್ಯಗಳ ಕಾರಾಗೃಹಗಳಿಂದ ‘ಬಂಧಮುಕ್ತ’

01:29 AM May 19, 2020 | Hari Prasad |

ಹೊಸದಿಲ್ಲಿ: ಜೈಲುಗಳಲ್ಲಿ ಸೋಂಕು ಹರಡುವುದನ್ನು ತಪ್ಪಿಸಲು ದೇಶದ ಎಂಟು ರಾಜ್ಯಗಳಲ್ಲಿ ಸುಮಾರು 39, 368 ಕೈದಿಗಳನ್ನು ತಾತ್ಕಾಲಿಕ ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

Advertisement

ಈ ಬಗ್ಗೆ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನೂ ನೀಡಿತ್ತು. ಒಡಿಶಾ, ಪಶ್ಚಿಮ ಬಂಗಾಲ, ತಮಿಳುನಾಡು, ಅಸ್ಸಾಂ, ಗುಜರಾತ್‌, ಛತ್ತೀಸ್‌ಘಡ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳು ರವಿವಾರ ಈ ಕ್ರಮ ಕೈಗೊಂಡಿವೆ.

ತಮಿಳುನಾಡಿನಲ್ಲಿ 6 ಸಾವಿರ ಕೈದಿಗಳನ್ನು ಜಾಮೀನಿನ ಮೇರೆಗೆ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ 13,500 ಕೈದಿಗಳಿದ್ದು, ಇದೀಗ ಈ ಸಂಖ್ಯೆ ಸರಿಸುಮಾರು ಅರ್ಧಕ್ಕೆ ಇಳಿದಿದೆ. ಮಧ್ಯಪ್ರದೇಶದಲ್ಲಿ 6,500 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಪೆರೋಲ್‌ ಮೇಲೆ 60 ದಿನ ಹಾಗೂ ಮಧ್ಯಾಂತರ ಜಾಮೀನಿನ ಮೇಲೆ 45 ದಿನಗಳ ಕಾಲ ಅವಕಾಶ ನೀಡಲಾಗಿದೆ.

ಪೆರೋಲ್‌ ನೀಡಿಕೆ: ಗುಜರಾತ್‌ನ 28 ಕಾರಾಗೃಹಗಳಲ್ಲಿದ್ದ 2,500 ಕೈದಿಗಳಿಗೆ ಮಧ್ಯಂತರ ಜಾಮೀನು, ಪೆರೋಲ್‌ ನೀಡಲಾಗಿದೆ. ರಾಜ್ಯದ ವಿವಿಧ ಜೈಲುಗಳಲ್ಲಿ 14 ಸಾವಿರ ಕೈದಿಗಳಿದ್ದರು.

ಛತ್ತೀಸ್‌ಗಢದಲ್ಲಿ ಮೇ 11ರವರೆಗೆ 3,418 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ ಜೈಲು ಶಿಕ್ಷೆ ಅವಧಿ ಪೂರೈಸಿದ್ದ 100 ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರೆತಿದೆ. ಇದರೊಂದಿಗೆ ಐದು ರಾಜ್ಯಗಳಲ್ಲಿ 34 ಸಾವಿರಕ್ಕೂ ಹೆಚ್ಚು ಕೈದಿಗಳು ತಾತ್ಕಾಲಿಕವಾಗಿ ಬಂಧಮುಕ್ತರಾಗಿದ್ದಾರೆ.

Advertisement

ಬಿಹಾರದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನದ ನಡುವೆಯೂ ಯಾವೊಬ್ಬ ಕೈದಿಯನ್ನು ಬಿಡುಗಡೆ ಮಾಡಿಲ್ಲ. ದಟ್ಟಣೆಯಿಂದ ಕೂಡಿದ್ದ ಜೈಲಿನಲ್ಲಿದ್ದ 4,500 ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ 7,200 ಕೈದಿಗಳ ಬಿಡುಗಡೆ: ಮಹಾರಾಷ್ಟ್ರ ಸರಕಾರ ಜೈಲಿನಲ್ಲಿ ಕೈದಿಗಳ ದಟ್ಟಣೆಯನ್ನು ಕಡಿಮೆ ಮಾಡುವ ಸಲುವಾಗಿ ಇದುವರೆಗೂ 7,200 ಕೈದಿಗಳನ್ನು ಬಿಡುಗಡೆಗೊಳಿಸಿದೆ.

ಲಾಕ್‌ಡೌನ್‌ಗೂ ಮುಂಚೆ ಮಹಾರಾಷ್ಟ್ರದ 60 ಜೈಲುಗಳಲ್ಲಿ 35,000 ಕೈದಿಗಳಿದ್ದರು. ಅವರಲ್ಲಿ ಶೇ. 50 ಅಂದರೆ 17,000 ಕೈದಿಗಳನ್ನು ರಾಜ್ಯ ಬಿಡುಗಡೆಗೊಳಿಸುವ ನಿರ್ಧಾರ ಕೈಗೊಂಡಿದೆ. ಮೊದಲ ಹಂತದಲ್ಲಿ 7,200 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ.

ಒಡಿಶಾದಲ್ಲಿ 7, 200, ಪಶ್ಚಿಮ ಬಂಗಾಲದಲ್ಲಿ 3 ಸಾವಿರ, ಅಸ್ಸಾಂನಲ್ಲಿ 3,550, ಛತ್ತೀಸ್‌ಗಢದಲ್ಲಿ 3,418 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.

ಬಿಡುಗಡೆಗೊಂಡಿರುವ ಕೈದಿಗಳು ತಮ್ಮ ತಮ್ಮ ಪೊಲೀಸ್‌ ಠಾಣೆಯ ವ್ಯಾಪ್ತಿಯ ನಿಗದಿತ ಅಧಿಕಾರಿಗೆ ಆನ್‌ಲೈನ್‌ ರಿಪೋರ್ಟ್‌ ಮಾಡಬೇಕು. ವ್ಯಾಟ್ಸ್‌ಆ್ಯಪ್‌ ಮೂಲಕ ತಾವು ಇರುವ ಸ್ಥಳದ ಮಾಹಿತಿ ಕಳುಹಿಸುವುದು ಕಡ್ಡಾಯವಾಗಿದೆ.

ಯುಪಿ ಜೈಲಿನಲ್ಲಿ ರ್‍ಯಾಂಡಮ್‌ ಟೆಸ್ಟ್‌
ಉತ್ತರ ಪ್ರದೇಶದಲ್ಲಿ 60 ಸಾವಿರ ಕೈದಿಗಳು ಇರುವ ಸಾಮರ್ಥ್ಯದ ಕಾರಾಗೃಹಗಳಲ್ಲಿ 94 ಸಾವಿರ ಕೈದಿಗಳನ್ನು ಇರಿಸಲಾಗಿದೆ. ಇತ್ತೀಚೆಗೆ ಓರ್ವ ಶಂಕಿತ ಕೋವಿಡ್ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ 14 ಕೈದಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ. ಅಲ್ಲದೆ, ಜೈಲಿನಲ್ಲಿ ಸೋಂಕು ಪತ್ತೆಗೆ ರ್‍ಯಾಂಡಮ್‌ ಟೆಸ್ಟ್‌ ನಡೆಸಲಾಗುತ್ತಿದೆ. ಇದುವರೆಗೂ 16 ಸಾವಿರ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next