ಹೊಸದಿಲ್ಲಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ವಿದೇಶದಲ್ಲಿರುವ ಅನಿವಾಸಿ ಭಾರತೀಯರ ಪೈಕಿ ಕೆಲವರು ತಮ್ಮ ಹಕ್ಕನ್ನು ಚಲಾಯಿಸಲು ಭಾರತಕ್ಕೆ ಬಂದು ಮತ ಚಲಾಯಿಸಿದ್ದಾರೆ. ಅಂಕಿ ಅಂಶಗಳ ಪ್ರಕಾರ ಭಾರತದಿಂದ ಹೊರ ಹೋಗಿ ಉದ್ಯೋಗ ಮತ್ತು ಇತರ ಕಾರಣಗಳಿಗೋಸ್ಕರ ಸುಮಾರು ಒಂದು ಲಕ್ಷ ಮಂದಿ ವಿದೇಶದಲ್ಲಿ ನೆಲೆಸಿದ್ದು, ಇನ್ನೂ ತಮ್ಮ ಪೌರತ್ವವನ್ನು ಇಲ್ಲಿಯೇ ಉಳಿಸಿಕೊಂಡಿದ್ದಾರೆ. ಇದರ ಪ್ರಕಾರ ಚುನಾವಣೆಗಳಲ್ಲಿ ಅವರು ಮತದಾನ ಮಾಡಬಹುದಾಗಿದೆ. ಆದರೆ ಅವರ ಪೈಕಿ ಕೇವಲ 25,000 ಮಂದಿ ಮಾತ್ರ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ.
ಈ ಸಂಬಂಧ ಮಾಹಿತಿಯನ್ನು ಬಿಡುಗಡೆ ಮಾಡಿರುವ ಕೇಂದ್ರ ಚುನಾವಣಾ ಆಯೋಗ 1 ಲಕ್ಷ ಮಂದಿಯಲ್ಲಿ 91,850 ಪುರುಷರು, 7,943 ಮಹಿಳೆಯರು ಮತ್ತು 14 ತೃತೀಯ ಲಿಂಗಿಗಳು ವಿದೇಶಗಳಲ್ಲಿ ನೆಲೆಸಿದ್ದಾರೆ. ಇವರ ಪೈಕಿ 25,606 ಮಂದಿ 2019ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ. ಮತದಾನ ಮಾಡಿದವರಲ್ಲಿ 24,458 ಪುರುಷರು ಹಾಗೂ 1,148 ಮಂದಿ ಮಹಿಳೆಯರು ಸೇರಿದ್ದಾರೆ.
ನೆರೆಯ ಕೇರಳ ರಾಜ್ಯದಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಲ್ಲಿ ಜನ ನೆಲೆಸಿದ್ದಾರೆ. ಇವರಲ್ಲಿ ಅನೇಕರು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ 85,161 ಮಂದಿ ಮಲಯಾಳಿಗಳು ವಿದೇಶಗಳಲ್ಲಿ ನೆಲೆಸಿದ್ದು, ಅವರ ಪೈಕಿ 25, 091 ಮಂದಿ ಮತದಾನ ಮಾಡಿದ್ದಾರೆ.
ದಿಲ್ಲಿಯಲ್ಲಿ 336 ಮಂದಿ ವಿದೇಶದಲ್ಲಿದ್ದಾರೆ. ಅವರಲ್ಲಿ 231 ಪುರುಷರು ಹಾಗೂ 105 ಮಹಿಳೆರು ಸೇರಿದ್ದಾರೆ. ಆದರೆ ಇವರ್ಯಾರೂ ಮತದಾನಕ್ಕೆ ಆಗಮಿಸಿಲ್ಲ. ಇದೇ ಬೆಳವಣಿಗೆ ಪುದುಚೇರಿಯಲ್ಲೂ ನಡೆದಿದ್ದು, ಅಲ್ಲಿನ 272 ಮತಗಳ ಪೈಕಿ ಯಾರೂ ಮತದಾನ ಮಾಡಿಲ್ಲ. ಪಶ್ಚಿಮ ಬಂಗಾಳದ 34 ಮಂದಿಯೂ ಮತದಾನದಿಂದ ದೂರ ಉಳಿದಿದ್ದಾರೆ.
3.10 ಕೋಟಿ
ಭಾರತೀಯ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಸುಮಾರು 3.10 ಕೋಟಿ ಮಂದಿ ಎನ್.ಆರ್.ಐ.ಗಳಾಗಿ ವಿದೇಶಗಳಲ್ಲಿ ವಾಸವಾಗಿದ್ದಾರೆ.