ಬೆಳಗಾವಿ: ಸಮ್ಮಿಶ್ರ ಸರಕಾರದ ಎರಡನೇ ಬಜೆಟ್‌ನಲ್ಲಿ ನಿರೀಕ್ಷೆ ಮಾಡಿದಂತೆ ಬಂಪರ್ ಕೊಡುಗೆಗಳು ಸಿಕ್ಕಿಲ್ಲ. ಆದರೆ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ಅದಕ್ಕೆ ಅನುದಾನ ನಿಗದಿಪಡಿಸಿರುವುದು ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ. ಬಜೆಟ್ ಮಂಡನೆಯೇ ಅನುಮಾನ ಎಂಬ ರಾಜಕೀಯ ಬೆಳವಣಿಗೆಗಳ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ನಿರಾತಂಕವಾಗಿ ಬಜೆಟ್ ಮಂಡಿಸಿರುವುದಕ್ಕೆ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಸಹ ಆಚರಣೆ ಮಾಡಿದರು.
ಗಡಿಭಾಗ ಎಂಬ ಕಾರಣಕ್ಕೆ ಮೊದಲಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಲೇ ಬಂದಿರುವ ಬೆಳಗಾವಿಯಲ್ಲಿ ಬೇಡಿಕೆಗಳು ಬೆಟ್ಟದಷ್ಟಿವೆ. ರಾಜ್ಯದಲ್ಲೇ ಅತೀ ದೊಡ್ಡ ಜಿಲ್ಲೆ ಎನಿಸಿರುವ ಬೆಳಗಾವಿಯನ್ನು ವಿಭಜಿಸಿ ಮೂರು ಜಿಲ್ಲೆಗಳನ್ನಾಗಿ ಮಾಡಬೇಕು ಎಂಬ ಪ್ರಬಲ ಬೇಡಿಕೆ ಇದೆ. ಆದರೆ ಈ ಬಗ್ಗೆ ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದೇ ಇರುವುದು ಹೊಸ ಜಿಲ್ಲೆಯ ಆಕಾಂಕ್ಷಿಗಳಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ವೈಯಕ್ತಿಕ ಪ್ರತಿಷ್ಠೆ ಜಿಲ್ಲೆಗೆ ಅನ್ಯಾಯವಾಗಲು ಕಾರಣ ಎಂಬ ಆರೋಪ ಜಿಲ್ಲೆಯ ಹೋರಾಟಗಾರರು ಹಾಗೂ ಅಭಿವೃದ್ಧಿ ಚಿಂತಕರಿಂದ ಕೇಳಿಬಂದಿದೆ. ಕಳೆದ ಬಾರಿಯಂತೆ ಜಿಲ್ಲೆಯ ಜನ ಸಾಕಷ್ಟು ನಿರೀಕ್ಷೆ ಮಾಡಿದ್ದರು. ಶಾಸಕರು ಸೇರಿದಂತೆ ಅನೇಕರು ಬೇಡಿಕೆಗಳ ಪಟ್ಟಿಯನ್ನೇ ಸಲ್ಲಿಸಿದ್ದರು. ಆದರೆ ಎಲ್ಲ ನಿರೀಕ್ಷೆಗಳು ಕೈಗೂಡಿಲ್ಲ. ಪ್ರವಾಸೋದ್ಯಮ, ಕೈಗಾರಿಕೆ, ಐಟಿ ಪಾರ್ಕ್ ಸ್ಥಾಪನೆಯ ವಿಷಯದಲ್ಲಿ ನಿರೀಕ್ಷೆಗಳು ಹುಸಿಯಾಗಿವೆ. ಇದು ಸಮ್ಮಿಶ್ರ ಸರಕಾರ ಕರ್ನಾಟಕವನ್ನು ಒಡೆದು ಆಳುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿಸಿದೆ.
ನೀರಾವರಿ ಯೋಜನೆಗಳಿಗೆ ಅದರಲ್ಲೂ ಕೆರೆ ತುಂಬಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಜಿಲ್ಲೆಯ ರೈತ ಸಮುದಾಯದಲ್ಲಿ ಸಮಾಧಾನ ತಂದಿದೆ. ಸಾಲ ಮನ್ನಾ ಯೋಜನೆಯ ಜೊತೆಗೆ ಪ್ರೋತ್ಸಾಹ ಧನ ಯೋಜನೆ. ಸಿರಿಧಾನ್ಯ ಬೆಳೆಯುವ ರೈತರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದು ಸಹಜವಾಗಿಯೇ ಸಣ್ಣ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಆದರೆ ಜಿಲ್ಲೆ ವಿಭಜನೆ ಪ್ರಸ್ತಾಪ ಇಲ್ಲ. ಕೈಗಾರಿಕಾ ಪ್ರದೇಶಗಳಿಗೆ ಮೂಲ ಸೌಲಭ್ಯ, ಹೊಸ ಕೈಗಾರಿಕೆಗಳ ಸ್ಥಾಪನೆ ಏನೂ ಇಲ್ಲ. ಬೆಳಗಾವಿಯಲ್ಲಿ ಹೃದ್ರೋಗ-ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಈ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಾದಂತೆ ಕಂಡಿಲ್ಲ. ಇದು ಆಸ್ಪತ್ರೆಯ ನಿರ್ಮಾಣದ ಬಗ್ಗೆ ಅನುಮಾನ ಮೂಡಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಚೇರಿ ಸ್ಥಳಾಂತರ ಬೇಡಿಕೆ
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ಸದಾ ಸಕ್ರಿಯಗೊಳಿಸಲು ಕಾರ್ಯದರ್ಶಿಗಳ ಮಟ್ಟದ ಕಚೇರಿಗಳ ಸ್ಥಳಾಂತರ ಮಾಡಬೇಕು ಎಂಬುದು ಇಲ್ಲಿಯ ಜನರ ಪ್ರಮುಖ ಬೇಡಿಕೆಯಾಗಿತ್ತು. ಆದರೆ ಇದರ ಬಗ್ಗೆ ಮುಖ್ಯಮಂತ್ರಿಗಳು ಯಾವ ಪ್ರಸ್ತಾಪವನ್ನೂ ಮಾಡದೇ ಈ ಭಾಗದ ಜನರು ಅಸಮಾಧಾನಗೊಳ್ಳುವಂತೆ ಮಾಡಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ.
ಎಲ್ಲ ಭಾಗಕ್ಕೆ ನೀರಾವರಿ
ಜಿಲ್ಲೆಯಲ್ಲಿ ಹಿಡಕಲ್ ಹಾಗೂ ಮಲಪ್ರಭಾ ಎರಡು ಪ್ರಮುಖ ಜಲಾಶಯಗಳಿದ್ದರೂ ಇದುವರೆಗೆ ಎಲ್ಲ ಭಾಗಗಳಿಗೆ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ಹಲವಾರು ಏತ ನೀರಾವರಿ ಯೋಜನೆಗಳು ಇನ್ನೂ ನನೆಗುದಿಯಲ್ಲಿವೆ. ಇಂತಹ ಯೋಜನೆಗಳಿಗೆ ಕಾಯಕಲ್ಪ ನೀಡಿ ಬೇಗ ಮುಗಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಇದು ನೀರಾವರಿ ವಂಚಿತ ಪ್ರದೇಶದ ರೈತರಲ್ಲಿ ನಿರಾಸೆ ಮೂಡಿಸಿದೆ.
ಕೇಶವ ಆದಿ